×
Ad

ಎಬಿವಿಪಿಯಿಂದ ವಿದ್ಯಾರ್ಥಿಗಳ ಮೇಲೆ ದಾಳಿ:‌ ಜೆಎನ್ಯು ಸ್ಟೂಡೆಂಟ್‌ ಯೂನಿಯನ್

ತಮಿಳು ವಿದ್ಯಾರ್ಥಿಗಳನ್ನು ಗುರಿಯಾಗಿಸಿದ್ದಕ್ಕೆ ಸ್ಟಾಲಿನ್ ಖಂಡನೆ

Update: 2023-02-20 21:14 IST

ಹೊಸದಿಲ್ಲಿ,ಫೆ.20: ಆತ್ಮಹತ್ಯೆ ಮಾಡಿಕೊಂಡಿರುವ ಐಐಟಿ-ಬಾಂಬೆಯ ವಿದ್ಯಾರ್ಥಿ ದರ್ಶನ ಸೋಲಂಕಿಗೆ ನ್ಯಾಯವನ್ನು ಕೋರಿ ಜಾಥಾದ ಬಳಿಕ ಕೆಲವು ವಿದ್ಯಾರ್ಥಿಗಳ ಮೇಲೆ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಜೆಎನ್ಯು ವಿದ್ಯಾರ್ಥಿ ಒಕ್ಕೂಟ (JNUSU)ವು ಆರೋಪಿಸಿದೆ. ಎಬಿವಿಪಿ ಈ ಆರೋಪವನ್ನು ನಿರಾಕರಿಸಿದೆ.

ಎಡರಂಗ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳು ಛತ್ರಪತಿ ಶಿವಾಜಿ ಮಹಾರಾಜ(chhatrapati shivaji maharaj)ರನ್ನು ಅವಮಾನಿಸುತ್ತಿವೆ ಎಂದು ಆರೆಸ್ಸೆಸ್(RSS) ಸಂಯೋಜಿತ ಎಬಿವಿಪಿ ಆರೋಪಿಸಿದೆ.

ಪರಿಶಿಷ್ಟ ಜಾತಿಗೆ ಸೇರಿದ ಸೋಲಂಕಿ (18) ಫೆ.12ರಂದು ಐಐಟಿಯ ಪೊವಾಯಿ ಕ್ಯಾಂಪಸ್ ನಲ್ಲಿಯ ಹಾಸ್ಟೆಲ್ ನ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು ಎನ್ನಲಾಗಿದೆ. ಆದರೆ ಅವರ ಸಾವಿನ ಬಗ್ಗೆ ಶಂಕೆಯನ್ನು ವ್ಯಕ್ತಪಡಿಸಿರುವ ಕುಟುಂಬಸ್ಥರು,ತಮ್ಮ ಪುತ್ರ ಜಾತಿ ತಾರತಮ್ಯವನ್ನು ಎದುರಿಸುತ್ತಿದ್ದ ಎಂದು ಹೇಳಿದ್ದಾರೆ.

ಎಬಿವಿಪಿ(ABVP) ಮತ್ತೊಮ್ಮೆ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದೆ. ಸೋಲಂಕಿ ತಂದೆಯ ಕರೆಯನ್ನು ಬೆಂಬಲಿಸಿ ಮೋಂಬತ್ತಿ ಜಾಥಾ ನಡೆಸಿದ ಬೆನ್ನಿಗೇ ವಿದ್ಯಾರ್ಥಿಗಳನ್ನು ಥಳಿಸಲಾಗಿದೆ. ಜಾತಿ ತಾರತಮ್ಯದ ವಿರುದ್ಧ ಆಂದೋಲನದ ಹಳಿ ತಪ್ಪಿಸಲು ಎಬಿವಿಪಿ ಈ ಕೃತ್ಯ ನಡೆಸಿದೆ ಎಂದು ಜೆಎನ್ಯುಎಸ್ಯು ಹೇಳಿಕೆಯಲ್ಲಿ ತಿಳಿಸಿದೆ.

ಆರೋಪವನ್ನು ನಿರಾಕರಿಸಿರುವ ಎಬಿವಿಪಿ,ತಾನು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಕಾರ್ಯಕ್ರಮ ಮುಗಿದ ಬೆನ್ನಿಗೇ ಅಲ್ಲಿಗೆ ಆಗಮಿಸಿದ್ದ ಜೆಎನ್ಯುಎಸ್ಯು ಸದಸ್ಯರು ಶಿವಾಜಿಯವರ ಚಿತ್ರಕ್ಕೆ ಹಾಕಿದ್ದ ಹಾರವನ್ನು ಕಿತ್ತಸೆದು ಅವಮಾನಿಸಿದ್ದಾರೆ ಎಂದು ಹೇಳಿದೆ.

ಸ್ಟಾಲಿನ್ ಖಂಡನೆ

ಈ ನಡುವೆ ಜೆನ್ಯು ಕ್ಯಾಂಪಸ್ ನಲ್ಲಿ ಎಬಿವಿಪಿಯಿಂದ ತಮಿಳು ವಿದ್ಯಾರ್ಥಿಗಳ ಮೇಲೆ ಹಲ್ಲೆಯನ್ನು ಖಂಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್(MK Stalin) ಅವರು,ತಮಿಳು ವಿದ್ಯಾರ್ಥಿಗಳ ಮೇಲಿನ ಎಬಿವಿಪಿಯ ಹೇಡಿತನದ ದಾಳಿ ಮತ್ತು ಜೆಎನ್ಯುನಲ್ಲಿಯ ಪೆರಿಯಾರ್ ಕಾರ್ಲ್ ಮಾರ್ಕ್ಸ್ರಂತಹ ನಾಯಕರ ಚಿತ್ರಗಳನ್ನು ಧ್ವಂಸಗೊಳಿಸಿರುವುದು ಅತ್ಯಂತ ಖಂಡನೀಯವಾಗಿದೆ ಎಂದಿದ್ದಾರೆ. ವಿವಿ ಆಡಳಿತವು ಈ ಬಗ್ಗೆ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

Similar News