×
Ad

ಸಮರಾಭ್ಯಾಸಕ್ಕೆ ಪ್ರತಿಯಾಗಿ ಕ್ಷಿಪಣಿ ಪ್ರಯೋಗ ಮುಂದುವರಿಸಿದ ಉತ್ತರ ಕೊರಿಯಾ

Update: 2023-02-20 22:59 IST

ಪೋಂಗ್ಯಾಂಗ್, ಫೆ.20: ಅಮೆರಿಕ ಮತ್ತು ದಕ್ಷಿಣ ಕೊರಿಯಾದ ಜಂಟಿ ಸಮರಾಭ್ಯಾಸಕ್ಕೆ ಪ್ರತಿಯಾಗಿ ಸೋಮವಾರ ಉತ್ತರ ಕೊರಿಯಾವು ತನ್ನ ಪೂರ್ವ ಕರಾವಳಿಯಿಂದ ಎರಡು ಅಲ್ಪಶ್ರೇಣಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪ್ರಯೋಗಿಸಿದೆ.

‌ಸೋಮವಾರ ಬೆಳಿಗ್ಗೆ ಪ್ಯೋಂಗ್ಯಾಂಗ್ ನ ಪಶ್ಚಿಮದಲ್ಲಿರುವ ಕರಾವಳಿ ನಗರದಿಂದ ಎರಡು ಕ್ಷಿಪಣಿಗಳು ಉಡಾವಣೆಗೊಂಡಿರುವುದನ್ನು ಗಮನಿಸಿದ್ದೇನೆ ಎಂದು ದಕ್ಷಿಣ ಕೊರಿಯಾ ಹೇಳಿದೆ. ಎರಡೂ ಕ್ಷಿಪಣಿಗಳು ಕೊರಿಯಾ ಪರ್ಯಾಯ ದ್ವೀಪ ಮತ್ತು ಜಪಾನ್ ನಡುವಿನ ಸಮುದ್ರದ ನೀರಿಗೆ ಅಪ್ಪಳಿಸಿದ್ದು ಯಾವುದೇ ಹಾನಿಯಾಗಿಲ್ಲ ಎಂದು ಜಪಾನ್ ಹೇಳಿದೆ. ಈ ಕ್ಷಿಪಣಿ ಗರಿಷ್ಟ 50ರಿಂದ 100 ಕಿ.ಮೀ ಎತ್ತರದಲ್ಲಿ ಹಾರಿಹೋಗಿದ್ದು ಇವು 400 ಕಿ.ಮೀ ವ್ಯಾಪ್ತಿಯನ್ನು ಹೊಂದಿವೆ ಎಂದು ಜಪಾನ್ ನ ಅಧಿಕಾರಿಗಳು ಹೇಳಿದ್ದಾರೆ.  

ಈ ಮಧ್ಯೆ, ಉತ್ತರ ಕೊರಿಯಾ ರವಿವಾರ ಖಂಡಾಂತರ ಕ್ಷಿಪಣಿಯನ್ನು ಪ್ರಯೋಗಿಸಿರುವುದಾಗಿ ವರದಿಯಾಗಿದೆ. ಇದು ಅಮೆರಿಕ ಮತ್ತು ದಕ್ಷಿಣ ಕೊರಿಯಾಕ್ಕೆ ನೀಡಿರುವ ಎಚ್ಚರಿಕೆಯಾಗಿದೆ. ಅಧ್ಯಕ್ಷರ ತುರ್ತು ಆದೇಶದ ಹಿನ್ನೆಲೆಯಲ್ಲಿ  ಪ್ಯೋಂಗ್ಯಾಂಗ್ ವಿಮಾನನಿಲ್ದಾಣದ ಸೇನಾನೆಲೆಯಿಂದ ಖಂಡಾಂತರ ಕ್ಷಿಪಣಿಯನ್ನು ಪ್ರಯೋಗಿಸಲಾಗಿದೆ ಎಂದು ಉತ್ತರಕೊರಿಯಾದ ಅಧಿಕಾರಿಗಳು ಹೇಳಿದ್ದಾರೆ. ಖಂಡಾಂತರ ಕ್ಷಿಪಣಿ  ಸುಮಾರು 66 ನಿಮಿಷ ಹಾರಾಟ ನಡೆಸಿದ ಬಳಿಕ ತನ್ನ ವಿಶೇಷ ಆರ್ಥಿಕ ವಲಯದ ಬಳಿಯ ಸಮುದ್ರಕ್ಕೆ ಇದು ಅಪ್ಪಳಿಸಿದೆ. ಈ ಕ್ಷಿಪಣಿ ಅಮೆರಿಕಕ್ಕೆ ಅಪ್ಪಳಿಸುವ ಸಾಮರ್ಥ್ಯ ಹೊಂದಿದೆ ಎಂದು ಜಪಾನ್ ಹೇಳಿದೆ.

ಉತ್ತರ ಕೊರಿಯಾದ ಕ್ಷಿಪಣಿ ಪ್ರಯೋಗವು ಈ ಪ್ರದೇಶದ ಶಾಂತಿಗೆ ಮಾತ್ರವಲ್ಲ ಅಂತರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಗೆ ಎದುರಾಗಿರುವ ಬೆದರಿಕೆಯಾಗಿದೆ ಎಂದು ಜಪಾನ್, ದಕ್ಷಿಣ ಕೊರಿಯಾ ಮತ್ತು ಅಮೆರಿಕ ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಉತ್ತರ ಕೊರಿಯಾ ಅಧ್ಯಕ್ಷರ ಸಹೋದರಿ ಕಿಮ್ ಯೊ ಜಾಂಗ್ `ಪೆಸಿಫಿಕ್ ಪ್ರದೇಶದಲ್ಲಿ ನಮ್ಮ ನಿರಂತರ ಕ್ಷಿಪಣಿ ಪ್ರಯೋಗವು ಅಮೆರಿಕ ಸೇನೆಯ ಕೃತ್ಯದ ಸ್ವರೂಪವನ್ನು ಅವಲಂಬಿಸಿದೆ. ಕೊರಿಯಾ ಪರ್ಯಾಯ ದ್ವೀಪದಲ್ಲಿ ಇತ್ತೀಚಿನ ದಿನಗಳಲ್ಲಿ ಅಮೆರಿಕ ಸೇನೆಯ ಚಲನವಲನ ಹೆಚ್ಚುತ್ತಿರುವುದನ್ನು ನಾವು ಗಮನಿಸಿದ್ದೇವೆ. ಅಮೆರಿಕದ ಹುಚ್ಚರ ಸೇನೆ  ನಡೆಸುವ ಯಾವುದೇ ಕೃತ್ಯಕ್ಕೂ ಸರಿಯಾದ ರೀತಿಯಲ್ಲಿ ಇದಿರೇಟು ನೀಡಲು ನಾವು ಸನ್ನದ್ಧರಾಗಿದ್ದೇವೆ' ಎಂದು ಎಚ್ಚರಿಸಿರುವುದಾಗಿ ಉತ್ತರ ಕೊರಿಯಾದ ಮಾಧ್ಯಮ ವರದಿ ಮಾಡಿದೆ.

Similar News