×
Ad

ಆನ್‌ಲೈನ್ ಹಣ ವಂಚನೆ, ಅಶ್ಲೀಲ ಜಾಲತಾಣಗಳ ವಿರುದ್ಧ 3 ವರ್ಷಗಳಲ್ಲಿ 32,746 ಪ್ರಕರಣ ದಾಖಲು

Update: 2023-02-21 10:45 IST

ಬೆಂಗಳೂರು, ಫೆ.20: ಹಣ, ಅಶ್ಲೀಲ ಮತ್ತಿತರ ವಿಷಯಗಳ ಜಾಲತಾಣಗಳ ಕುರಿತಂತೆ ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 32,746 ಪ್ರಕರಣಗಳು ದಾಖಲಾಗಿವೆ. ಅಲ್ಲದೇ ಇದೇ ಅವಧಿಯಲ್ಲಿ 11,125 ಪ್ರಕರಣಗಳು ಸೈಬರ್ ಅಪರಾಧದಡಿಯಲ್ಲಿ ದಾಖಲಾಗಿವೆ ಎಂಬ ಅಂಕಿ ಅಂಶಗಳನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬಹಿರಂಗಪಡಿಸಿದ್ದಾರೆ.

 ಕೋವಿಡ್ ಮೊದಲ ಅವಧಿಯಲ್ಲಿ 3,501 ಸೈಬರ್ ಅಪರಾಧಗಳಿದ್ದರೆ ಹಣ, ಅಶ್ಲೀಲ ಮತ್ತಿತರರ ವಿಷಯಗಳ ಜಾಲತಾಣಗಳ ಕುರಿತಂತೆ ಒಟ್ಟು 10,738 ಪ್ರಕರಣಗಳು ದಾಖಲಾಗಿವೆ ಎಂಬ ಮಾಹಿತಿ ಒದಗಿಸಿದ್ದಾರೆ.

 ವಿಧಾನಪರಿಷತ್ ಸದಸ್ಯ ಡಾ.ಚಂದ್ರಶೇಖರ್ ಬ.ಪಾಟೀಲ್ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸೈಬರ್ ಅಪರಾಧಗಳಲ್ಲಿ ಭಾಗಿಯಾಗಿರುವ ಆರೋಪಿಗಳ ಹೆಸರುಗಳನ್ನು ಬಹಿರಂಗಪಡಿಸಿಲ್ಲ.

ಸೈಬರ್ ಅಪರಾಧಿಗಳಡಿಯಲ್ಲಿ ದಾಖಲಾಗಿರುವ 37,746 ಪ್ರಕರಣಗಳಲ್ಲಿನ ಕೇವಲ 1,503 ಆರೋಪಿಗಳನ್ನಷ್ಟೇ ಬಂಧಿಸಿರುವುದು ಸಚಿವರು ನೀಡಿರುವ ಉತ್ತರದಿಂದ ಗೊತ್ತಾಗಿದೆ.

2021ರಲ್ಲಿ 3,501, 2022ರಲ್ಲಿ 2,701, 2023 (ಜನವರಿ ಅಂತ್ಯ) 172 ಸೈಬರ್ ಅಪರಾಧಗಳು ದಾಖಲಾಗಿದ್ದರೆ 2020ರಲ್ಲಿ 10,738, 2021ರಲ್ಲಿ 8,132, 2022ರಲ್ಲಿ 12,551, 2023 (ಜನವರಿ ಅಂತ್ಯ) 1,325 ಪ್ರಕರಣಗಳು ಹಣ, ಅಶ್ಲೀಲ ಮತ್ತಿತರ ಜಾಲತಾಣಗಳ ಕುರಿತಾಗಿವೆ.

ಕಳೆದೆರಡು ವರ್ಷಗಳಿಂದ ಆನ್‌ಲೈನ್ ಬ್ಯಾಂಕಿಂಗ್ ಮತ್ತು ಮೊಬೈಲ್ ಮೂಲಕ ಹಣ ದೋಚುವ ಸೈಬರ್ ಅಪರಾಧ ಪ್ರಕರಣಗಳು ದ್ವಿಗುಣಗೊಂಡಿದ್ದರೂ ಸೈಬರ್ ಅಪರಾಧಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳ ರಚನೆ ಆಗಿಲ್ಲ. ಕಳೆದೊಂದು ವರ್ಷದಿಂದಲೂ ಪೊಲೀಸ್ ಮಹಾನಿರ್ದೇಶಕರು ವಿಶೇಷ ನ್ಯಾಯಾಲಯ ಸ್ಥಾಪನೆ ಕುರಿತು ಪತ್ರಗಳನ್ನು ಬರೆಯತ್ತಿದ್ದರೂ ಸರಕಾರ ಮಾತ್ರ ಸಕಾರಾತ್ಮಕವಾಗಿ ಸ್ಪಂದಿಸಿಲ್ಲ.

 ವಿಶೇಷ ನ್ಯಾಯಾಲಯಗಳ ಸ್ಥಾಪನೆ ಕುರಿತು ಗಮನಹರಿಸಬೇಕಿದ್ದ ಕಾನೂನು ಇಲಾಖೆಯು ದಿವ್ಯ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ಒಳಾಡಳಿತ ಇಲಾಖೆಯು ಸೈಬರ್ ಅಪರಾಧಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು 2022ರ ಮೇ 31ರಂದು ಪತ್ರವನ್ನು ಬರೆದಿತ್ತು.

 ಸೈಬರ್ ಅಪರಾಧಗಳನ್ನು ಕಟ್ಟುನಿಟ್ಟಾಗಿ ನಿಯಂತ್ರಿಸಲು ಹಾಗೂ ಇಂತಹ ಪ್ರಕರಣಗಳನ್ನು ತಡೆಗಟ್ಟಲು ರಾಜ್ಯದ ಪ್ರತಿ ಜಿಲ್ಲೆ ಹಾಗೂ ನಗರಗಳಲ್ಲಿ ವಿಶೇಷ ಸೈಬರ್, ನಾರ್ಕೋಟಿಕ್ ಇಕಾನಾಮಿಕ್ ಪೊಲೀಸ್ ಠಾಣೆಗಳನ್ನು ಸ್ಥಾಪಿಸಿದೆ. ರಾಜ್ಯದಲ್ಲಿ ಒಟ್ಟು 46 ಸಿಇಎನ್ ಪೊಲೀಸ್ ಠಾಣೆಗಳು ಹಾಗೂ ಇವುಗಳ ಪೈಕಿ ಬೆಂಗಳೂರು ನಗರದಲ್ಲಿ ಮಾತ್ರ 8 ವಿಶೇಷ ಸಿಇಎನ್ಪೊಲೀಸ್ ಠಾಣೆಗಳು ಪ್ರತಿ ವಿಭಾಗಕ್ಕೆ ಒಂದರಂತೆ ಕಾರ್ಯನಿರ್ವಹಿಸುತ್ತಿವೆ.

 ಸೈಬರ್ ಅಪರಾಧಗಳನ್ನು ತಡೆಗಟ್ಟುವ ಸಲುವಾಗಿ ಸಿಐಡಿ ಕಚೇರಿಯಲ್ಲಿ ಸೆಂಟರ್ ಫಾರ್ ಸೈಬರ್ ಕ್ರೈಮ್ ಇನ್ವೆಸ್ಟಿಗೇಷನ್ ಮತ್ತು ಡಿಜಿಟಲ್ ಫ್ಲೋರೆನ್ಸಿಕ್ ಟ್ರೈನಿಂಗ್ ಆ್ಯಂಡ್ ರೀಸರ್ಚ್ ಘಟಕ ಆರಂಭಿಸಿದೆ ಎಂದು ತಿಳಿದುಬಂದಿದೆ.

‘ದೇಶದಲ್ಲಿ ಐಟಿ ಕ್ಷೇತ್ರವು ವ್ಯಾಪಕವಾಗಿ ಅಭಿವೃದ್ಧಿಯಾಗುತ್ತಿದ್ದು, ಕರ್ನಾಟಕ ರಾಜ್ಯವು ಅಗ್ರಸ್ಥಾನದಲ್ಲಿದೆ. ಪ್ರಸ್ತುತ ಸಾರ್ವಜನಿಕರು ದೈನಂದಿನ ವ್ಯವಹಾರಗಳನ್ನು ಹೆಚ್ಚಾಗಿ ಆನ್‌ಲೈನ್ ಬ್ಯಾಂಕಿಂಗ್, ಮೊಬೈಲ್ ಮೂಲಕ ಹಣಕಾಸಿನ ಚಲಾವಣೆ ಮಾಡುತ್ತಿರುವುದರಿಂದ ಸೈಬರ್ ವಂಚಕರ ಸಂಖ್ಯೆಯು ಹೆಚ್ಚಾಗಿ ಸೈಬರ್ ಅಪರಾಧಗಳು 2019ರಿಂದ ದ್ವಿಗುಣಗೊಂಡಿದೆ. ಆದ್ದರಿಂದ ಸೈಬರ್ ಅಪರಾಧಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಕ್ರಮವಹಿಸಬೇಕು’ ಎಂದು ಒಳಾಡಳಿತ ಇಲಾಖೆಯು ಕಾನೂನು ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

Similar News