×
Ad

ತಾಯ್ನುಡಿಗಳನ್ನು ಕಾಪಿಟ್ಟುಕೊಳ್ಳಲು ಎಚ್ಚರಿಸುವ ದಿನ

ಇಂದು ಅಂತರ್‌ರಾಷ್ಟ್ರೀಯ ಮಾತೃಭಾಷಾ ದಿನ

Update: 2023-02-21 16:05 IST

ಬಾಂಗ್ಲಾ ದೇಶದಂತಹ ದೂರದ ನಾಡಿನಲ್ಲಿ ಆಕಾರ ಪಡೆದ ಈ ತಾಯ್ನುಡಿ ದಿನದ ಆಚರಣೆಯನ್ನು ನಾವೇಕೆ ಆಚರಿಸಬೇಕು ಎನ್ನುವ ಪ್ರಶ್ನೆ ಮೂಡುತ್ತದೆ. ಲೋಕದ ಎಲ್ಲೆಡೆ ಇರುವ ಭಾಷಾ ಸಮುದಾಯಗಳು ತಂತಮ್ಮ ನುಡಿಗಳನ್ನು ರಕ್ಷಿಸಿಕೊಳ್ಳಲು ಯಾವ ಬಗೆಯ ಹೋರಾಟಗಳನ್ನು ಹಮ್ಮಿಕೊಳ್ಳಬೇಕು. ತಂತಮ್ಮ ಗುರುತುಗಳಾಗಬೇಕಾದ ತಮ್ಮ ಭಾಷೆಯನ್ನು ಹೇಗೆ ಕಾಯ್ದುಕೊಳ್ಳಬೇಕು ಎಂದು ಗಮನ ಸೆಳೆಯುವುದು ಈ ಆಚರಣೆಯ ಮೂಲೋದ್ದೇಶ. ಇತರ ಭಾಷಾ ಸಂಸ್ಕೃತಿಯಲ್ಲಿ ಅದರಲ್ಲೂ ಯುರೋಪಿನ ಭಾಷಾ ಸಂದರ್ಭದಲ್ಲಿ ನಡೆಯುತ್ತಿರುವ ಚರ್ಚೆಗಳು ನಮಗೆ ಮಾದರಿಯಾಗಬಲ್ಲವು.

ನಾನು 2019ರಲ್ಲಿ ಗಂಟಿಚೋರ ಸಮುದಾಯವನ್ನು ಅಧ್ಯಯನ ಮಾಡಲೆಂದು ಕ್ಷೇತ್ರಕಾರ್ಯ ಕೈಗೊಂಡಿದ್ದೆ. ಆಗ ಗಂಟಿಚೋರ ಸಮುದಾಯದ ಸದಸ್ಯರ ಜತೆ ಮಾತನಾಡುವಾಗ ಅವರ ಒಳಮಾತಿನ ಬಗ್ಗೆ ಹೇಳಿದರು. ನಾನು ಏನದು ಒಳಮಾತು ಅಂದೆ. ಅದಕ್ಕೆ ಅವರು ಸರ್ ‘ನಾವು ನಾವೇ ಇದ್ದಾಗ ಬೇರೆಯವರಿಗೆ ಗೊತ್ತಾಗದ ಹಾಗೆ ಮಾತಾಡುವ ಮಾತು’ ಎಂದರು. ಅದನ್ನವರು ತುಡುಗ್ಮಾತು ಎಂತಲೂ ಕರೆಯುತ್ತಾರೆ. ಇದೊಂದು ಕೋಡ್ಗಳ/ಸಂಕೇತಭಾಷೆ. ಹೇಗೆ ಮಾತಾಡ್ತೀರಿ ಹೇಳಿ ನೋಡೋಣ ಅಂದೆ, ಅವರು ‘ನೀ ಚಪ್ರ ಮಾಡು, ನಾ ಧರಿಸಿಕಂಡು ಬಿಡಸ್ತನಿ’(ನೀ ಕಳವು ಮಾಡು ನಾನು ಅವರಿವರನ್ನು ನೋಡತೀನಿ), ‘ಕೌರಿ ಆಸೇತಿ ತಾಸು’ (ಹೆಣ್ಣಮಗಳ ಕಡೆ ಐತಿ ನೋಡು), ‘ಪೀನ್ಯ ಕಡೆ ಪಣ್ಣೈತಿ ತಾಸು ತಾಸು’ (ಆ ಹುಡುಗನ ಕಡೆ ಹಣ ಇದೆ ನೋಡು) ಈ ತರ ಇರುತ್ತೆ ಸರ್ ಎಂದರು. ನಾನು ಕೂಡಲೇ ಅವರು ಆಡುವ ತುಡುಗ್ಮಾತಿನ ಅಷ್ಟೂ ನುಡಿಗಟ್ಟುಗಳನ್ನು/ಪದ ಬಳಕೆಯ ನೆಲೆಗಳನ್ನೂ ಸಂಗ್ರಹಿಸಿ ಗಂಟಿಚೋರ ಸಮುದಾಯದ ಪುಸ್ತಕದಲ್ಲಿ ದಾಖಲಿಸಿದೆ. ಈಗ ಈ ಭಾಷೆಯ ಬಗ್ಗೆ ಗಂಟಿಚೋರ ಸಮುದಾಯದ ಐವತ್ತೋ ನೂರೋ ಜನ ಹಿರಿಯರಿಗೆ ಮಾತ್ರ ಗೊತ್ತಿದೆ. ಗಂಟಿಚೋರರು ಕಳ್ಳತನ ವೃತ್ತಿಯನ್ನು ಬಿಟ್ಟಿರುವ ಕಾರಣ, ಈ ವೃತ್ತಿಗೆ ಅಂಟಿಕೊಂಡಿದ್ದ ಈ ಭಾಷೆಯೂ ಅಳಿವಿನಂಚಿನಲ್ಲಿದೆ. ಇದು ಗಂಟಿಚೋರ ಸಮುದಾಯವೊಂದರ ಕಥೆ ಮಾತ್ರವಲ್ಲ. ಇಡೀ ಜಗತ್ತಿನ ಬುಡಕಟ್ಟು ಸಮುದಾಯಗಳ ಭಾಷೆಗಳ ಅಳಿವಿನ ಸಂಗತಿಯೂ ಕೂಡ. ಹೀಗೆ ನಶಿಸಿ ಹೋಗುವ ಭಾಷೆಯನ್ನು ಉಳಿಸಿಕೊಳ್ಳುವ ಎಚ್ಚರದ ಗಂಟೆ ಯನ್ನು ಬಾರಿಸುವ ದಿನವೇ ವಿಶ್ವ ತಾಯ್ನುಡಿಯ ದಿನ.

ಯಾವುದೇ ಬುಡಕಟ್ಟು ಸಮುದಾಯವು ಆಂತರಿಕ ರಕ್ಷಣೆಯ ಕಾರಣಕ್ಕೆ ತನ್ನದೇ ಆದ ಭಾಷೆಯೊಂದನ್ನು ಮತ್ತು ತನಗೇ ವಿಶಿಷ್ಠನಾದ ನುಡಿಗಟ್ಟನ್ನು ಕಟ್ಟಿಕೊಂಡಿರುತ್ತದೆ. ಈ ನುಡಿಗಟ್ಟು ಬುಡಕಟ್ಟಿನ ಒಂದು ಚಹರೆ ಕೂಡ ಆಗಿದೆ. ಈ ನುಡಿಗಟ್ಟುಗಳು ಆಯಾ ಸಮುದಾಯದ ವೃತ್ತಿ ಮತ್ತು ದಿನವಹಿ ದುಡಿಮೆಯ ಜತೆ ನಂಟನ್ನು ಬೆಸೆದುಕೊಂಡಿದ್ದವು. ಕಾಲಾನಂತರ ಬುಡಕಟ್ಟುಗಳು ತಮ್ಮ ವೃತ್ತಿಗಳಿಂದ ಸ್ಥಿತ್ಯಂತರ ಹೊಂದಿದಂತೆ ಈ ವೃತ್ತಿಗಳಿಗೆ ಅಂಟಿಕೊಂಡಿದ್ದ ಭಾಷೆ ಮತ್ತು ನುಡಿಗಟ್ಟುಗಳು ಇಲ್ಲವಾಗುತ್ತಿವೆ. ಅಂದರೆ ಸದ್ಯಕ್ಕೆ ಬುಡಕಟ್ಟು ಭಾಷೆಗಳು ಅಳಿವಿನಂಚಿನಲ್ಲಿವೆ. ೧೯೮೦ರಲ್ಲಿ ಜರ್ಮನ್ ನ ವೆರ್ನರ್ ಹೆರ್ಜಾಗ್ ಎನ್ನುವ ನಿರ್ದೇಶಕನ ಚಿತ್ರ ‘ವೇರ್ ದ ಗ್ರೀನ್ ಆಂಟ್ಸ್ ಡ್ರೀಮ್’ ಎನ್ನುವ ಸಿನೆಮಾದಲ್ಲಿ ಬುಡಕಟ್ಟು ಭಾಷೆಯ ಅವಸಾನವನ್ನು ಚಿತ್ರಿಸಿದ್ದಾನೆ. ಆಸ್ಟ್ರೇಲಿಯಾದ ಮರುಭೂಮಿಯಲ್ಲಿ ಬುಡಕಟ್ಟು ವಾಸಿತ ಪ್ರದೇಶದಲ್ಲಿ ಯುರೇನಿಯಂ ಮೈನಿಂಗ್ ಕಂಪೆನಿಯನ್ನು ಆಫ್ರಿಕನ್ ಬುಡಕಟ್ಟುಗಳು ವಿರೋಧಿಸುತ್ತವೆ. ಕೊನೆಗೆ ಕೋರ್ಟಿನಲ್ಲಿ ಒಬ್ಬ ಬುಡಕಟ್ಟಿನ ಮನುಷ್ಯ ತನ್ನ ಮೇಲಿನ ದಬ್ಬಾಳಿಕೆಯನ್ನು ಅವರದೇ ಭಾಷೆಯಲ್ಲಿ ಹೇಳುತ್ತಾನೆ. ಅದು ನ್ಯಾಯಾಧೀಶನಿಗೆ ಅರ್ಥವಾಗುವುದಿಲ್ಲ. ಬುಡಕಟ್ಟಿನ ಜನರನ್ನು ಅನುವಾದ ಮಾಡಲು ಕೇಳಿದರೆ ಸದ್ಯಕ್ಕೆ ಅವನ ಭಾಷೆ ಬರುವುದು ಆತನಿಗೆ ಮಾತ್ರ. ಆ ಭಾಷೆ ಬರುವ ಕೊನೆಯ ಮನುಷ್ಯ ಆತನೇ ಎಂದು ಹೇಳುತ್ತಾರೆ. ಹೀಗೆಯೇ ಬುಡಕಟ್ಟಿನ ನೂರಾರು ಭಾಷೆಗಳು ಅವಸಾನಗೊಂಡಿವೆ.

ಇಂದು ಬುಡಕಟ್ಟುಗಳ ಭಾಷೆಯ ಬಿಕ್ಕಟ್ಟೆಂದರೆ, ಆಯಾ ಭಾಗದ ಬಹುಸಂಖ್ಯಾತರ ಭಾಷೆಯನ್ನು ಬುಡಕಟ್ಟುಗಳು ಅನಿವಾರ್ಯ ಬಳಸಬೇಕಾಗಿದೆ. ಹಾಗಾಗಿ ತಮ್ಮ ವೃತ್ತಿ ಬದುಕಿಗೆ ಅಂಟಿಕೊಂಡಿದ್ದ ಭಾಷೆಗಳನ್ನು ಬುಡಕಟ್ಟುಗಳ ಹೊಸ ತಲೆಮಾರು ಬಳಸುತ್ತಿಲ್ಲ. ಬಳಸುವ ಅಗತ್ಯವೂ ಕಾಣುತ್ತಿಲ್ಲ. ಆದರೆ ಎಷ್ಟೋ ಬಾರಿ ಈ ಬುಡಕಟ್ಟು ಭಾಷೆ ನುಡಿಗಟ್ಟುಗಳು ಆಯಾ ಸಮುದಾಯದ ಚರಿತ್ರೆಯನ್ನೂ ಹೇಳುತ್ತಿರುತ್ತದೆ. ಹೀಗೆ ಬುಡಕಟ್ಟುಗಳ ಭಾಷೆಯೊಂದು ನಶಿಸಿದರೆ, ಅದರ ಜತೆ ಆ ಸಮುದಾಯದ ಚರಿತ್ರೆಯೂ ನಶಿಸಿದಂತೆ. ಈ ಬಗ್ಗೆ ನೋಮ್ ಚೋಮಸ್ಕಿಯನ್ನು ಒಳಗೊಂಡಂತೆ ಜಗತ್ತಿನ ಭಾಷಾತಜ್ಞರು ಎರಡು ದಶಕಗಳಿಂದ ಇಂತಹ ಆತಂಕ ವ್ಯಕ್ತಪಡಿಸುತ್ತಾ ಬಂದಿದ್ದಾರೆ.

ಈ ಮಧ್ಯೆ, ನಶಿಸಲಿರುವ ಬುಡಕಟ್ಟು ಭಾಷೆಯನ್ನು ಸಂಗ್ರಹಿಸುವ ಕೆಲಸವೂ ನಡೆಯುತ್ತಿದೆ. ಬುಡಕಟ್ಟುಗಳ ನುಡಿ ಉಳಿವಿನ ಬಗೆಗೆ ವಿದ್ವಾಂಸರಾದ ಜಿ.ಎನ್. ದೇವಿಯವರು ತುಂಬಾ ಕೆಲಸ ಮಾಡಿದ್ದಾರೆ. ಕರ್ನಾಟಕದ ಸಂದರ್ಭದಲ್ಲಿ ಪ್ರೊ.ಕಿಕ್ಕೇರಿ ನಾರಾಯಣ ಅವರು ಜೇನುಕುರುಬರ ಜೇನುನುಡಿಯ ಬಗ್ಗೆ ತುಂಬಾ ವಿಶೇಷವಾದ ಮತ್ತು ಆಳವಾದ ಅಧ್ಯಯನ ಮಾಡಿದ್ದಾರೆ. ಇದು ಬುಡಕಟ್ಟು ಭಾಷೆಯ ಒಂದು ಮಾದರಿ ಅಧ್ಯಯನವೂ ಆಗಿದೆ. ಅಂತೆಯೇ ಪ್ರೊ. ಕೆ.ಎಂ. ಮೇತ್ರಿ ಅವರು ‘ಮರಗು ಭಾಷೆ’ ಎಂಬ ಹೆಸರಲ್ಲಿ ಪ್ರಕಟಿಸಿದ ಪುಸ್ತಕ ಹಲವು ಬುಡಕಟ್ಟುಗಳ ಗುಪ್ತ ಭಾಷೆಯನ್ನು ಪರಿಚಯಾತ್ಮಕ ನೆಲೆಯಲ್ಲಿ ವಿವರಿಸುತ್ತದೆ. ಉಳಿದಂತೆ ಬುಡಕಟ್ಟುಗಳ ಅಧ್ಯಯನಗಳಲ್ಲಿ ಅಷ್ಟೇನೂ ಸಮಗ್ರವಲ್ಲದ ಬುಡಕಟ್ಟು ನುಡಿಗಟ್ಟುಗಳನ್ನು ಸಂಗ್ರಹಿಸುವ ಕೆಲಸವೂ ನಡೆಯುತ್ತಿದೆ.

ಈ ದಿನಾಚರಣೆಯನ್ನು ಯಾಕೆ ಆಚರಿಸುತ್ತೇವೆ? ಎಂದು ನೋಡಿದರೆ ಇದರ ಮೂಲ ಇಂದಿನ ಬಾಂಗ್ಲಾ ದೇಶದಲ್ಲಿದೆ. ಆಗ ಅದು ಪೂರ್ವ ಪಾಕಿಸ್ತಾನವಾಗಿತ್ತು. ೧೯೫೨ರ ಫೆಬ್ರವರಿ ೨೧ರಂದು ಭಾಷಾ ಚಳವಳಿಗಾರರ ಮೇಲೆ ಪೊಲೀಸರು ಗುಂಡು ಹಾರಿಸಿ ಏಳು ಜನರನ್ನು ಕೊಂದರು. ಅಬುಲ್ ಬರ್ಕತ್ (ಢಾಕಾ ವಿವಿ ವಿದ್ಯಾರ್ಥಿ), ರಫೀಕುದ್ದೀನ್ (ಕಾಲೇಜು ವಿದ್ಯಾರ್ಥಿ), ಅಬ್ದುಲ್ ಜಬ್ಬಾರ್ (ಟೈಲರ್), ಅಬ್ದುಸ್ಸಲಾಂ (ಸರಕಾರಿ ಕಚೇರಿಯ ಜವಾನ), ಶಫೀಉರ್ ರಹಮಾನ್ (ಹೈಕೋರ್ಟ್‌ನ ಉದ್ಯೋಗಿ), ಅಬ್ದುಲ್ ಅವ್ವಾಲ್ (ಹತ್ತು ವರ್ಷದ ಹುಡುಗ) ಮತ್ತು ವಹೀದುಲ್ಲಾ (ಎಂಟು-ಒಂಭತ್ತು ವರ್ಷದ ಹುಡುಗ) ಇವರೇ ಆ ಹುತಾತ್ಮರು. ಇನ್ನೂ ಹಲವರು ತಮ್ಮ ಜೀವನವನ್ನು ಕಳೆದುಕೊಂಡಿದ್ದರೂ ಅವರ ದೇಹವನ್ನು ಪಡೆದುಕೊಳ್ಳಲಾಗಲೀ ಅವರುಗಳ ಹೆಸರನ್ನು ಗುರುತಿಸುವುದಾಗಲೀ ಆಗಲಿಲ್ಲ. ಉರ್ದುವಿನ ಜತೆ ಬಂಗಾಳಿಯನ್ನು ರಾಷ್ಟ್ರಭಾಷೆಯನ್ನಾಗಿ ಪರಿಗಣಿಸಬೇಕೆಂಬುದು ಈ ಹೋರಾಟಗಾರರ ಬೇಡಿಕೆಯಾಗಿತ್ತು. ಈ ಭಾಷಾ ಚಳವಳಿಯ ಸಂದರ್ಭದಲ್ಲಿ ಆಡಳಿತ ಕೇಂದ್ರವಾಗಿದ್ದ ಪಶ್ಚಿಮ ಪಾಕಿಸ್ತಾನದ ಬಗ್ಗೆ ಮೂಡಿದ್ದ ಅಪನಂಬಿಕೆ ಆಕಾರ ತಳೆದು ಬೆಳೆದು ಕೊನೆಗೆ ೧೯೭೧ರಲ್ಲಿ ಬಾಂಗ್ಲಾದೇಶ ಸ್ವತಂತ್ರ ರಾಷ್ಟ್ರವಾಗಲು ಕಾರಣವಾಯಿತು.

ಈ ಹೋರಾಟಕ್ಕೆ ಯುನೆಸ್ಕೋ ಜಾಗತಿಕ ಮನ್ನಣೆಯನ್ನು ಒದಗಿಸಿತು. ಬಹು ಭಾಷಿಕ ಸನ್ನಿವೇಶಗಳ ಘೋಷಣೆಯನ್ನು ಪ್ರೇರೇಪಿಸಲೆಂದು ಫೆಬ್ರವರಿ ೨೧ರಂದು ಲೋಕ ತಾಯ್ನುಡಿ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಬಾಂಗ್ಲಾ ದೇಶದಂತಹ ದೂರದ ನಾಡಿನಲ್ಲಿ ಆಕಾರ ಪಡೆದ ಈ ತಾಯ್ನುಡಿ ದಿನದ ಆಚರಣೆಯನ್ನು ನಾವೇಕೆ ಆಚರಿಸಬೇಕು ಎನ್ನುವ ಪ್ರಶ್ನೆ ಮೂಡುತ್ತದೆ. ಲೋಕದ ಎಲ್ಲೆಡೆ ಇರುವ ಭಾಷಾ ಸಮುದಾಯಗಳು ತಂತಮ್ಮ ನುಡಿಗಳನ್ನು ರಕ್ಷಿಸಿಕೊಳ್ಳಲು ಯಾವ ಬಗೆಯ ಹೋರಾಟಗಳನ್ನು ಹಮ್ಮಿಕೊಳ್ಳಬೇಕು. ತಂತಮ್ಮ ಗುರುತುಗಳಾಗಬೇಕಾದ ತಮ್ಮ ಭಾಷೆಯನ್ನು ಹೇಗೆ ಕಾಯ್ದುಕೊಳ್ಳಬೇಕು ಎಂದು ಗಮನ ಸೆಳೆಯುವುದು ಈ ಆಚರಣೆಯ ಮೂಲೋದ್ದೇಶ. ಇತರ ಭಾಷಾ ಸಂಸ್ಕೃತಿಯಲ್ಲಿ ಅದರಲ್ಲೂ ಯುರೋಪಿನ ಭಾಷಾ ಸಂದರ್ಭದಲ್ಲಿ ನಡೆಯುತ್ತಿರುವ ಚರ್ಚೆಗಳು ನಮಗೆ ಮಾದರಿಯಾಗಬಲ್ಲವು. ೨೦೦೧ನೆಯ ವರ್ಷವನ್ನು ಯುರೋಪಿಯನ್ ಭಾಷೆಗಳ ವರ್ಷವೆಂದು ಘೋಷಿಸಲಾಗಿತ್ತು. ಯುರೋಪಿನಲ್ಲಿ ಬಹುಭಾಷಿಕತೆಯನ್ನು ಪೋಷಿಸಲು ಯುರೋಪಿಯನ್ ಯೂನಿಯನ್ ಮತ್ತು ಕೌನ್ಸಿಲ್ ಆಫ್ ಯುರೋಪ್‌ಗಳು ಎಂಟು ಮಿಲಿಯನ್ ಡಾಲರ್‌ಗಳ ಯೋಜನೆಯೊಂದನ್ನು ರೂಪಿಸಿದ್ದವು. ಈ ಯೋಜನೆಯ ವಿವರಗಳು www.eyl2001.org.uk ಅಂತರ್ಜಾಲದಲ್ಲಿ ದೊರಕುತ್ತವೆ. ಬಹುಭಾಷಿಕತೆಯ ವಾತಾವರಣವನ್ನು ಬೆಳೆಸಲು ಯುರೋಪಿನಲ್ಲಿ ವ್ಯವಸ್ಥಿತವಾದ ಸಾಂಸ್ಥಿಕ ಪ್ರಯತ್ನಗಳು ನಡೆಯುತ್ತಿರುವುದನ್ನು ನಾವು ನೋಡಬಹುದು. ಸೆಪ್ಟಂಬರ್ ೨೬ರಂದು ಯುರೋಪಿಯನ್ ಭಾಷಾ ದಿನವನ್ನಾಗಿ ಆಚರಿಸಲಾಗುತ್ತದೆ. ಉತ್ತರ ಅಮೆರಿಕದ ಕೆಲವು ರಾಜ್ಯಗಳಲ್ಲಿ ನಡೆಯುತ್ತಿರುವ ‘ಇಂಗ್ಲಿಷ್ ಮಾತ್ರ’ ಮತ್ತು ‘ಇಂಗ್ಲಿಷ್ ಜೊತೆಗೆ’ ಮಾದರಿಯ ಚರ್ಚೆಗಳನ್ನೂ ಗಮನಿಸಬೇಕಿದೆ. ಇದಲ್ಲದೆ ದಕ್ಷಿಣ ಆಫ್ರಿಕಾ ಅಳವಡಿಸಿಕೊಂಡ ‘ಶಿಕ್ಷಣದಲ್ಲಿ ಬಹುಭಾಷಿಕತೆ’ಯನ್ನು ಕುರಿತ ಶಾಸನ, ಶ್ರೀಲಂಕಾ ಅಳವಡಿಸಿಕೊಂಡ ‘ತ್ರಿಭಾಷಿಕ ಶಾಂತಿ ಸೂತ್ರ’ ಇವೆಲ್ಲವೂ ನಮ್ಮ ವಿಚಾರಗಳಿಗೆ ಪೂರಕವಾಗಬಲ್ಲವು.

ಕರ್ನಾಟಕದಲ್ಲಿ ಹಿಂದಿ ಹೇರಿಕೆ ಬಗ್ಗೆ ಚರ್ಚೆಗಳು, ಸಂವಾದಗಳು ಮುನ್ನೆಲೆಗೆ ಬರುತ್ತವೆ. ಈ ಚರ್ಚೆಯಲ್ಲಿ ಕನ್ನಡದ ಮೇಲಿನ ದಬ್ಬಾಳಿಕೆಯನ್ನು ಗುರಿಯಾಗಿಟ್ಟುಕೊಳ್ಳಲಾಗುತ್ತದೆ. ಅಂತೆಯೇ ಕನ್ನಡವೂ ಇತರ ಬುಡಕಟ್ಟು ಸಮುದಾಯಗಳ ಭಾಷೆಗಳ ಮೇಲೆಯೂ ಪ್ರಭಾವ ಬೀರುವುದನ್ನೂ ನಾವು ಗಮನಿಸಬೇಕಿದೆ. ಕರ್ನಾಟಕ ಬಹುಭಾಷೆಗಳ ನಾಡಾಗಿದೆ. ಕನ್ನಡವನ್ನು ಪ್ರೀತಿಸುತ್ತಲೇ ಇತರ ಬಹುಭಾಷೆಗಳನ್ನು ಗೌರವಿಸುವ ವಾತಾವರಣವನ್ನೂ ಬೆಳೆಸಬೇಕಾಗಿದೆ. ಅಂತೆಯೇ ಅಳಿವಿನಂಚಿನಲ್ಲಿರುವ ಬುಡಕಟ್ಟು ಸಮುದಾಯಗಳ ಭಾಷೆಗಳನ್ನು ಕಾಪಿಡುವ ಯೋಜನೆಗಳನ್ನೂ ಸರಕಾರ ಕೈಗೊಳ್ಳಬೇಕಿದೆ. ಈ ಬಹುಭಾಷಾ ವಿಷಯ ಯುವ ಜನತೆಯ ಹೊಸ ಬಗೆಯ ಅಸ್ಮಿತೆಯಾಗಬೇಕಿದೆ.

Similar News