×
Ad

94 ಸಿಸಿ ಅರ್ಜಿಗಳನ್ನು ಶೀಘ್ರವೇ ವಿಲೇವಾರಿ ಮಾಡಿ: ಉಡುಪಿ ಡಿಸಿ ಕೂರ್ಮಾರಾವ್

ಕಚ್ಚೂರಿನಲ್ಲಿ ‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’

Update: 2023-02-21 19:24 IST

ಉಡುಪಿ, ಫೆ.21: ಬ್ರಹ್ಮಾವರ ತಾಲೂಕು ವ್ಯಾಪ್ತಿಯಲ್ಲಿ ಸಲ್ಲಿಕೆಯಾಗಿರುವ 94ಸಿಸಿ ಕುರಿತ ಅರ್ಜಿಗಳನ್ನು ಆದಷ್ಟು ಶೀಘ್ರದಲ್ಲಿ ವಿಲೇವಾರಿ ಮಾಡುವಂತೆ ಬ್ರಹ್ಮಾವರ ತಹಶೀಲ್ದಾರ್ ಅವರಿಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸೂಚನೆ ನೀಡಿದ್ದಾರೆ.

ಮಂಗಳವಾರ ಬಾರಕೂರು ಸಮೀಪದ ಕಚ್ಚೂರು ಮಾಲ್ತಿದೇವಿ ಸಭಾಭವನ ದಲ್ಲಿ ನಡೆದ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಸಾರ್ವಜನಿಕರು 94ಸಿಸಿ ಹಾಗೂ ನಿವೇಶನ ನೀಡುವ ಕುರಿತು ಸಲ್ಲಿಸಿದ್ದ ಅರ್ಜಿಗಳನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ವಸತಿ ಮತ್ತು ನಿವೇಶನ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳನ್ನು ಆದ್ಯತೆಯ ಮೇಲೆ ನಿಯಮಾನುಸಾರ ವಿಲೇ ಮಾಡುವಂತೆ ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ ಅವರಿಗೆ ಸೂಚನೆಗಳನ್ನು ನೀಡಿದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕರು ತುಕ್ಕು ಹಿಡಿದಿರುವ ವಿದ್ಯುತ್ ತಂತಿಗಳ ಬದಲಾವಣೆ, ರಸ್ತೆ ಮತ್ತು ಒಳಚರಂಡಿ ಅಭಿವೃದ್ಧಿ, ತೋಡುಗಳಿಗೆ ಕಾಲುಸಂಕ ನಿರ್ಮಾಣ, ಸಾಗುವಳಿ ಚೀಟಿ ನೀಡುವ ಬಗ್ಗೆ, ಹೊಳೆದಂಡೆಗೆ ತಡೆಗೋಡೆ ನಿರ್ಮಾಣ, ಕೃಷಿ ಭೂಮಿಗೆ ಉಪ್ಪುನೀರು ನುಗ್ಗುತ್ತಿರುವ ಬಗ್ಗೆ, ನದಿಗೆ ತ್ಯಾಜ್ಯ ಸೇರುತ್ತಿರುವ ಬಗ್ಗೆ ಸೇರಿದಂತೆ ವಿವಿಧ ಸಮಸ್ಯೆಗಳನ್ನೊಳಗೊಂಡ ಸುಮಾರು 60ಕ್ಕೂ ಅಧಿಕ ಅಹವಾಲುಗಳನ್ನು ಸಲ್ಲಿಸಿದರು.

ಎಲ್ಲಾ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಸ್ಥಳದಲ್ಲಿಯೇ ಇದ್ದ ವಿವಿಧ ಅಧಿಕಾರಿಗಳಿಗೆ ಈ ಸಮಸ್ಯೆಗಳ ಬಗ್ಗೆ ಪರಿಶೀಲಿಸಿ, ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ನೊಂದಾಯಿತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ಉಚಿತವಾಗಿ ನೀಡುವ ಸ್ಕೂಲ್‌ಕಿಟ್‌ಗಳನ್ನು ವಿತರಿಸಲಾಯಿತು.

ಬಾರಕೂರು ಗ್ರಾಮಪಂಚಾಯತ್ ಅಧ್ಯಕ್ಷ ಬಿ.ಶಾಂತಾರಾಮ ಶೆಟ್ಟಿ ಮಾತನಾಡಿ, ಕಚ್ಚೂರು ಗ್ರಾಮದಲ್ಲಿ 117 ಮಂದಿ ವಸತಿ ರಹಿತರಿದ್ದು, ಇವರಿಗೆ ನಿವೇಶನ ನೀಡಲು ಈ ಗ್ರಾಮದಲ್ಲಿ ನಿವೇಶನದ ಕೊರತೆ ಇದೆ.  ಹೊಸಾಳ ಗ್ರಾಮದಲ್ಲಿ ಸಾಕಷ್ಟು ಜಾಗವಿದ್ದು, ಇವರಿಗೆ ಅಲ್ಲಿ ಜಾಗ ಗುರುತಿಸಿ ನಿವೇಶನ ನೀಡುವಂತೆ ಮನವಿ ಮಾಡಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಸನ್ನ ಎಚ್, ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್, ಬ್ರಹ್ಮಾವರ ತಾಪಂ ಕಾರ್ಯ ನಿರ್ವಹಣಾಧಿಕಾರಿ ಇಬ್ರಾಂಪುರ, ಕಚ್ಚೂರು ಮಾಲ್ತಿದೇವಿ ದೇವಾಲಯದ ಮೊಕ್ತೇಸರ ಶಿವಪ್ಪ ಹಾಗೂ ಜಿಲ್ಲಾ ಮಟ್ಟದ ವಿವಿಧ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ನೋಂದಣಿ, ಉಚಿತ ಆರೋಗ್ಯ ತಪಾಸಣೆ, ಆಯುಷ್ ಇಲಾಖೆ ಯಿಂದ ತಪಾಸಣೆ, ಕಾರ್ಮಿಕ ಇಲಾಖೆ ವತಿಯಿಂದ ಇ-ಶ್ರಮ್ ನೋಂದಣಿ ಮತ್ತು ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್‌ಧನ್ ನೋಂದಣಿ ಶಿಬಿರಗಳನ್ನು ಆಯೋಜಿಸಲಾಗಿತ್ತು. ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ ಮೂರ್ತಿ ಸ್ವಾಗತಿಸಿದರು.

"ಬಾರಕೂರು ಗ್ರಾಮ ಪಂಚಾಯತ್ ಚಾರಿತ್ರಿಕ ಹಿನ್ನೆಲೆ ಹೊಂದಿರುವ ಪ್ರದೇಶವಾಗಿದ್ದು, ಇಲ್ಲಿ ಅನೇಕ ಮಹತ್ವದ ಪುರಾತನ ಶಿಲಾ ಶಾಸನಗಳು ಇದ್ದು, ಇವುಗಳನ್ನು ಸಂಗ್ರಹಿಸಿ, ಸೂಕ್ತ ರೀತಿಯಲ್ಲಿ  ಸಂರಕ್ಷಿಸಿ ಇಡಲು ಪ್ರತ್ಯೇಕ ಸ್ಥಳವನ್ನು ಮೀಸಲಿಡಬೇಕಾಗಿದೆ".
-ಬಿ.ಶಾಂತಾರಾಮ ಶೆಟ್ಟಿ, ಬಾರಕೂರು ಗ್ರಾಪಂ ಅಧ್ಯಕ್ಷ

Similar News