×
Ad

ಸೌರ ಶಕ್ತಿ ಕ್ಷೇತ್ರದಲ್ಲಿ ತಂತ್ರಜ್ಞರ ಬೇಡಿಕೆ ಹೆಚ್ಚಲಿದೆ: ಸಚಿನ್ ಪೈ

Update: 2023-02-21 21:49 IST

ಮಣಿಪಾಲ: ಈ ದಶಕದಲ್ಲಿ ಸೌರಶಕ್ತಿ ಕ್ಷೇತ್ರ ಭಾರೀ ಅಭಿವೃದ್ಧಿ ಯನ್ನು ಕಾಣಲಿದೆ. ಇತ್ತೀಚೆಗೆ ವಿವಿಧ ರಾಜ್ಯಗಳಲ್ಲಿ  ವಿದ್ಯುತ್ ಜಾಲಗಳಿಗೆ ಸಂಪರ್ಕಿಸುವ ಬೃಹತ್ ಸೌರ ಸ್ಥಾವರಗಳು ಸ್ಥಾಪನೆಯಾಗುತ್ತಿವೆ. ನಮ್ಮ ದೇಶದ ಮಹಾನಗರಗಳು ಮತ್ತು ಪಟ್ಟಣಗಳಲ್ಲಿ ಹೆಚ್ಚಿನ  ಕಟ್ಟಡಗಳಲ್ಲಿ ಸೌರ ಫಲಕಗಳ ಅಳವಡಿಕೆ ಆದ್ಯತೆಯಲ್ಲಿ ನಡೆಯುತ್ತಿದೆ ಎಂದು ಭಾರತೀಯ ವಿಕಾಸ ಟ್ರಸ್ಟಿನ ವಿಶ್ವಸ್ಥ (ಬಿವಿಟಿ) ಟಿ.ಸಚಿನ್ ಪೈ ಅಭಿಪ್ರಾಯಪಟ್ಟಿದ್ದಾರೆ.

ಮಣಿಪಾಲ ಶಿವಳ್ಳಿಯಲ್ಲಿರುವ ಭಾರತೀಯ ವಿಕಾಸ ಟ್ರಸ್ಟ್‌ನಲ್ಲಿ ಇಂದು ಪ್ರಾರಂಭಗೊಂಡಆರು ದಿನಗಳ ಸೋಲಾರ್ ತಂತ್ರಜ್ಞರ ತರಬೇತಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. 

ಮಣಿಪಾಲದಲ್ಲೇ ಹೆಚ್ಚಿನ ಸಂಸ್ಥೆಗಳು ತಮ್ಮ ಬೇಡಿಕೆಯಲ್ಲಿ ಗಣನೀಯ ಅಂಶದ ವಿದ್ಯುತ್ತನ್ನು ಸೌರ ಶಕ್ತಿಯ ಮೂಲಕವೇ ಪಡೆಯುತ್ತಿವೆ. ಈ ರೀತಿ  ಸೌರ ಶಕ್ತಿ ಕ್ಷೇತ್ರದಲ್ಲಿ ಆಗುತ್ತಿರುವ ಅಭಿವೃದ್ಧಿಗೆ ಪೂರಕವಾಗಿ ತಂತ್ರಜ್ಞರ ಬೇಡಿಕೆಯಲ್ಲೂ ಹೆಚ್ಚಳವನ್ನು ಕಾಣುತಿದ್ದೇವೆ. ೨೦೩೦ರ ಒಳಗೆ ಸುಮಾರು ಒಂದು ಮಿಲಿಯನ್ ಹೊಸ ಉದ್ಯೋಗಗಳು ಈ ಕ್ಷೇತ್ರದಲ್ಲಿ ಸೃಷ್ಟಿಯಾಗುವ ನಿರೀಕ್ಷೆ ಇದೆ ಎಂದವರು ಹೇಳಿದರು.

ಇದೇ ಹಿನ್ನೆಲೆಯಲ್ಲಿ  ಭಾರತೀಯ ವಿಕಾಸ ಟ್ರಸ್ಟಿನಲ್ಲಿ ಜಿಐಝಡ್ ಸಹಕಾರದಲ್ಲಿ ನಡೆಯುತ್ತಿರುವ ೬ ದಿನಗಳ ಸೋಲಾರ್ ತಾಂತ್ರಿಕತೆ ಮತ್ತು ಸ್ವಉದ್ಯೋಗ ತರಬೇತಿಯು ಶಿಬಿರಾರ್ಥಿಗಳಿಗೆ ಸೌರ ಕ್ಷೇತ್ರದಲ್ಲಿ ವಿಪುಲ ಅವಕಾಶಗಳನ್ನು ತೆರೆದಿಡುವಲ್ಲಿ ಸಹಕಾರಿ ಆಗಲಿದೆ ಎಂದು ಅವರು ವಿವರಿಸಿದರು. 

ಪ್ರಾಸ್ತಾವಿಕವಾಗಿ ಮಾತನಾಡಿದ ಬಿವಿಟಿಯ ಹಿರಿಯ ಸಲಹೆಗಾರರಾದ ಜಗದೀಶ್ ಪೈ, ಸಂಸ್ಥೆ ಕಳೆದೆರಡು ದಶಕಗಳಿಂದ ಸೌರ ಕ್ಷೇತ್ರದ ಅಭಿವೃದ್ಧಿಗೆ ನಡೆಸಿದ ಚಟುವಟಿಕೆಗಳ ವಿವರವನ್ನಿತ್ತು ಈ ಯೋಜನೆಯ ಮೂಲಕ ರಾಜ್ಯದ 14 ಜಿಲ್ಲೆಗಳಲ್ಲಿ  ಗ್ರಾಮೀಣ ಪ್ರದೇಗಳ ೫೦೦ ಐಟಿಐ ವಿದ್ಯಾರ್ಥಿಗಳು ಮತ್ತು ಸ್ವಉದ್ಯೋಗಾಕಾಂಕ್ಷಿ ಗಳಿಗೆ ಈ ತರಬೇತಿಯನ್ನು ಆಯೋಜಿಸಲಾ ಗುತ್ತಿದೆ. ತರಬೇತಿಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಶಿಬಿರಾರ್ಥಿಗಳಿಗೆ ಕರೆ ಇತ್ತರು.

ಮುಖ್ಯ ಅತಿಥಿಯಾಗಿ ಇಂದಿರಾ ಶಿವರಾವ್ ಪಾಲಿಟೆಕ್ನಿಕ್ ಪ್ರಾಂಶುಪಾಲೆ ಪವಿತ್ರಾ ಡಿ. ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ  ಬಿವಿಟಿ ತರಬೇತಿಗಾಗಿ ಮುದ್ರಿಸಿದ ಸೌರ ತಾಂತ್ರಿಕತೆಯ ಕೈಪಿಡಿಯನ್ನು ಟಿ.ಸಚಿನ್ ಪೈ ಬಿಡುಗಡೆ ಗೊಳಿಸಿದರು.

ಬಿವಿಟಿ ಮುಖ್ಯ ವ್ಯವಸ್ಥಾಪಕ ಮನೋಹರ ಕಟ್ಗೇರಿ ವಂದಿಸಿದರು. ಯೋಜನೆಯ ಸಂಯೋಜಕಿ ಪ್ರತಿಮಾ ಕಾರ್ಯಕ್ರಮ  ನಿರೂಪಿಸಿದರು. 

Similar News