ರೂ. 10,000 ಕೋಟಿ ಬಂಡವಾಳ ಹೂಡಿಕೆಯನ್ನು ಪುನರ್ ಪರಿಶೀಲಿಸಲು ನಿರ್ಧರಿಸಿದ ಅದಾನಿ ಗ್ರೀನ್ ಎನರ್ಜಿ

Update: 2023-02-22 08:31 GMT

ಹೊಸದಿಲ್ಲಿ: 2023-24ನೇ ಸಾಲಿನಲ್ಲಿ ವೆಚ್ಚ ಮಾಡಲು ಉದ್ದೇಶಿಸಿದ್ದ ರೂ. 10,000 ಕೋಟಿ ಬಂಡವಾಳ ಹೂಡಿಕೆಯ ಬಗ್ಗೆ ಪುನರ್ ಪರಿಶೀಲಿಸಲು ಅದಾನಿ ಗ್ರೀನ್ ಎನರ್ಜಿ ನಿರ್ಧರಿಸಿದೆ ಎಂದು Business Standard ವರದಿ ಮಾಡಿದೆ. ಈ ಕಂಪನಿಯು ಭಾರತದ ಅತಿ ದೊಡ್ಡ ಹಸಿರು ಇಂಧನ ಕಂಪನಿಯಾಗಿದೆ.

ತನ್ನ ಕಂಪನಿಯ ಬಾಂಡ್ ವಾರಸುದಾರರೊಂದಿಗೆ ಮೂರನೆಯ ತ್ರೈಮಾಸಿಕೊತ್ತರ ಫಲಿತಾಂಶವನ್ನು ಹಂಚಿಕೊಂಡ ಕಂಪನಿಯ ಆಡಳಿತ ಮಂಡಳಿಯು, ತನ್ನ ಈ ನಿರ್ಧಾರವನ್ನು ಪ್ರಕಟಿಸಿದೆ.

Business Standard ಪ್ರಕಾರ, "ಅಲ್ಪಾವಧಿಯ ಬಂಡವಾಳ ವೆಚ್ಚವನ್ನು (12-18 ತಿಂಗಳು) ಪುನರ್ ಪರಿಶೀಲಿಸಲಾಗುವುದು. ನಮ್ಮ ಗುರಿಯಲ್ಲಿ ಹಿಂಜರಿತವಾಗುವ ಸಾಧ್ಯತೆಯಿದೆ. ನಾವು ನಮ್ಮ ವಿವೇಚನಾ ಬಂಡವಾಳ ವೆಚ್ಚದ ಕುರಿತು ಮರು ಅವಲೋಕನ ನಡೆಸುತ್ತೇವೆ ಮತ್ತು ಮುಂದಿನ ಅವಧಿಯಲ್ಲಿ ಬಂಡವಾಳ ವೆಚ್ಚವನ್ನು ಕಡಿತಗೊಳಿಸುತ್ತೇವೆ" ಎಂದು ಫೆ.16ರಂದು ಸ್ಥಿರ ಆದಾಯ ಹೂಡಿಕೆದಾರರೊಂದಿಗೆ ನಡೆಸಿದ ಸಭೆಯಲ್ಲಿ ಕಂಪನಿಯ ಆಡಳಿತ ಮಂಡಳಿಯು ತಿಳಿಸಿದೆ.

"ಬಂಡವಾಳ ವೆಚ್ಚ ಮೊತ್ತದ ಕುರಿತ ಮಾತುಕತೆ ಇನ್ನೂ ಪರಿಶೀಲನೆಯಲ್ಲಿದೆ. ಈ ಬಂಡವಾಳ ವೆಚ್ಚದ ಬಹು ಭಾಗ ವಿವೇಚನಾ ಬಂಡವಾಳ ವೆಚ್ಚವಾಗಿರುವ ಸಾಧ್ಯತೆ ಇದೆ" ಎಂದೂ ಕಂಪನಿ ತಿಳಿಸಿದೆ.

ಅಮೆರಿಕಾ ಮೂಲದ ಕಿರು ಅವಧಿಯ ಮಾರಾಟ ಸಂಸ್ಥೆ ಹಿಂಡೆನ್‌ಬರ್ಗ್ ಸಂಶೋಧನಾ ಸಂಸ್ಥೆಯು ಅದಾನಿ ಸಮೂಹವು ದೊಡ್ಡ ಪ್ರಮಾಣದ ಶೇರು ಹಾಗೂ ಮೌಲ್ಯಮಾಪನದ ಅಕ್ರಮ ನಡೆಸಿದೆ ಎಂದು ಆರೋಪಿಸಿದ ಬೆನ್ನಿಗೇ ಅದಾನಿ ಸಮೂಹದ ಶೇರು ಮೌಲ್ಯವು ನಾಟಕೀಯವಾಗಿ ಕುಸಿತ ಕಂಡು, ಅದಾನಿ ಸಮೂಹ ಹಾಗೂ ಅದರೆಲ್ಲ ಕಂಪನಿಗಳು ತೀವ್ರ ಪರಿಶೋಧನೆಗೆ ಒಳಪಟ್ಟಿವೆ. ಇದರ ಬೆನ್ನಿಗೇ ಕಳೆದ ವಾರ, ಡಿಬಿ ಪವರ್ ಹರಾಜು ಪ್ರಕ್ರಿಯೆಯಲ್ಲಿ ತಾನು ಕಳೆದ ವರ್ಷವೇ ಗೆಲುವು ಸಾಧಿಸಿದ್ದರೂ, ತಾನು ಈ ಹಿಂದೆ ಯೋಜಿಸಿದಂತೆ ಡಿಬಿ ಪವರ್ ಸಂಸ್ಥೆಯನ್ನು ಖರೀದಿಸುವುದಿಲ್ಲ ಎಂದು ಅದಾನಿ ಪವರ್ ಪ್ರಕಟಿಸಿತ್ತು. ಇದಲ್ಲದೆ ಅದಾನಿ ರೋಡ್ ಟ್ರಾನ್ಸ್‌ಪೋರ್ಟ್‌ ಕೂಡಾ ನೂತನ ರಸ್ತೆ ಯೋಜನೆಗಳಿಗೆ ನಿಗದಿಯಾಗಿದ್ದ ಬಂಡವಾಳ ಹೂಡಿಕೆಯನ್ನು ತಡೆ ಹಿಡಿಯಲಾಗಿದೆ ಎಂದು ಪ್ರಕಟಿಸಿತ್ತು.

ದೊಡ್ಡ ಪ್ರಮಾಣದ ಬಂಡವಾಳ ವೆಚ್ಚ ಯೋಜನೆ ಹಾಗೂ ಅಧೀನ ಸಂಸ್ಥೆಗಳ ಸಾಲ ಅಥವಾ ಶೇರುದಾರರ ಸಾಲ ಪ್ರಾಯೋಜಕತ್ವದ ಮೇಲಿನ ಅವಲಂಬನೆಯ ಕಾರಣಕ್ಕೆ ರೇಟಿಂಗ್ ಸಂಸ್ಥೆಯಾದ ಮೂಡೀಸ್, ಇತ್ತೀಚೆಗೆ ಅದಾನಿ ಗ್ರೀನ್ ಎನರ್ಜಿಯ ಮುನ್ನೋಟವನ್ನು ನಕಾರಾತ್ಮಕ ಸೂಚ್ಯಂಕಕ್ಕೆ ತಗ್ಗಿಸಿತ್ತು.

ಇದನ್ನು ಓದಿ: ಹಿಜಾಬ್‌ ಪ್ರಕರಣದ ತುರ್ತು ವಿಚಾರಣೆಗೆ ಸುಪ್ರೀಂಕೋರ್ಟ್‌ ಸಮ್ಮತಿ

Similar News