ದಲಿತರಿಗೆ ಪಕ್ಷಪಾತ ವಿವಾದವನ್ನು ಮಾತುಕತೆಯ ಮೂಲಕ ಬಗೆಹರಿಸಿ: ಐಐಟಿಗೆ ಸೂಚಿಸಿದ ಸುಪ್ರೀಂಕೋರ್ಟ್

Update: 2023-02-22 09:13 GMT

ಹೊಸ ದಿಲ್ಲಿ: "ಅಧ್ಯಾಪಕರ ದೈನಂದಿನ ವರ್ತನೆಗಳನ್ನು ಸಂಸ್ಥೆಯಲ್ಲಿನ ವಿದ್ಯಾರ್ಥಿಗಳೂ ಅನುಸರಿಸುವುದರಿಂದ ಅವರ ದೈನಂದಿನ ನಡವಳಿಕೆ ಮಾದರಿಯಾಗಿರಬೇಕು" ಎಂದು ಅಭಿಪ್ರಾಯ ಪಟ್ಟಿರುವ ಸುಪ್ರೀಂಕೋರ್ಟ್, ದಲಿತ ಸಹಾಯಕ ಪ್ರಾಧ್ಯಾಪಕ ಹಾಗೂ ಇತರ ನಾಲ್ಕು ಮಂದಿ ಸಿಬ್ಬಂದಿ ಸದಸ್ಯರ ನಡುವಿನ ಜಾತಿಯಾಧಾರಿತ ಕಿರುಕುಳ ಆರೋಪದ ಕಾನೂನು ಮೊಕದ್ದಮೆಯನ್ನು ಪರಸ್ಪರ ಮಾತುಕತೆಯ ಮೂಲಕ ಬಗೆಹರಿಸಲು ಗವರ್ನರ್‌ಗಳ ಮಂಡಳಿಯು ಮುಂದಾಗಬೇಕು ಎಂದು ಕಾನ್ಪುರದ ಐಐಟಿಗೆ ಸುಪ್ರೀಂಕೋರ್ಟ್ ಸೂಚಿಸಿದೆ ಎಂದು telegraphindia.com ವರದಿ ಮಾಡಿದೆ.

ಚಂದ್ರಶೇಖರ್ ಮತ್ತು ಇನ್ನಿತರ ಮೂವರು ನನ್ನ ದಲಿತ ಹಿನ್ನೆಲೆಯ ಕಾರಣಕ್ಕೆ ಅವಮಾನಿಸುತ್ತಿದ್ದಾರೆ ಮತ್ತು ನಾನು ಸಲ್ಲಿಸಿರುವ ಪ್ರಬಂಧದ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಹಾಯಕ ಪ್ರಾಧ್ಯಾಪಕ ಸುಬ್ರಹ್ಮಣ್ಯಂ ಸದೇರ್ಲಾ ಎಂಬುವವರು ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳ ವಿರುದ್ಧದ ಪ್ರಕರಣವನ್ನು ಅಲಹಾಬಾದ್ ಹೈಕೋರ್ಟ್ ವಜಾಗೊಳಿಸಿದ ನಂತರ ಸದೇರ್ಲಾ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ. ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಕ್ರಿಮಿನಲ್ ಪ್ರಕರಣದ ವಿಚಾರಣೆ ಮುಂದುವರಿಸುವುದರಿಂದ ಸಹಾಯಕ ಪ್ರಾಧ್ಯಾಪಕ ಹಾಗೂ ಇತರ ನಾಲ್ವರ ಮಧ್ಯೆ ಸೌಹಾರ್ದತೆಯನ್ನು ಮರು ಸ್ಥಾಪಿಸಲು ತೊಡಕುಂಟಾಗಬಹುದು ಎಂದು ಕಳವಳ ವ್ಯಕ್ತಪಡಿಸಿತು.

ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ಜೆ.ಕೆ.ಮಾಹೇಶ್ವರಿ ಅವರನ್ನೊಳಗೊಂಡಿದ್ದ ದ್ವಿಸದಸ್ಯ ನ್ಯಾಯಪೀಠವವು ಮೇಲಿನಂತೆ ಆದೇಶಿಸಿ, ಅಲಹಾಬಾದ್ ಹೈಕೋರ್ಟ್ ತೀರ್ಪಿನ ವಿರುದ್ಧ ಸದೇರ್ಲಾ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಲೇವಾರಿ ಮಾಡಿತು.

Similar News