ವಿವಾಹ ಆರತಕ್ಷತೆಗೂ ಮುನ್ನವೇ ರಕ್ತದ ಮಡುವಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವಧು-ವರ
ರಾಯ್ಪುರ: ವಿವಾಹ ಆರತಕ್ಷತೆಗೂ ಮುನ್ನವೆ ನವ ವಿವಾಹಿತ ಜೋಡಿಯೊಂದು ಚಾಕು ಇರಿತದಿಂದ ಹತ್ಯೆಗೊಳಗಾಗಿ ತಾವು ವಾಸಿಸುತ್ತಿದ್ದ ಕೋಣೆಯಲ್ಲಿ ಪತ್ತೆಯಾಗಿರುವ ಘಟನೆ ಛತ್ತೀಸ್‌ಗಢದ ರಾಜಧಾನಿ ರಾಯ್ಪುರದಲ್ಲಿ ನಡೆದಿದೆ ಎಂದು ಬುಧವಾರ ಪೊಲೀಸರು ತಿಳಿಸಿದ್ದಾರೆ ಎಂದು ndtv.com ವರದಿ ಮಾಡಿದೆ.
ದಂಪತಿಗಳ ನಡುವೆ ಜಗಳ ಸ್ಫೋಟಗೊಂಡಿರುವುದರಿಂದ, ಮೊದಲು ಪತ್ನಿಗೆ ಪತಿಯು ಇರಿದು ಕೊಂದು, ನಂತರ ತಾನೂ ಇರಿದುಕೊಂಡು ಸಾವನ್ನಪ್ಪಿದ್ದಾನೆ ಎಂದು ಘಟನೆಯ ಕುರಿತು ಪೊಲೀಸರು ಶಂಕಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿಯೊಬ್ಬರು, ಘಟನೆಯು ಮಂಗಳವಾರ ತಡ ರಾತ್ರಿ ತಿಕ್ರಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬ್ರಿಜ್‌ಗರ್‌ನಲ್ಲಿ ಸಂಭವಿಸಿದೆ ಎಂದು ತಿಳಿಸಿದ್ದಾರೆ.
"ಅಸ್ಲಾಂ (24) ಹಾಗೂ ಕಾಕ್ಷಾ ಬಾನೊ (22) ಇಬ್ಬರೂ ರವಿವಾರ ವಿವಾಹವಾಗಿದ್ದರು. ನಂತರ ಅವರ ವಿವಾಹ ಆರತಕ್ಷತೆಯು ಮಂಗಳವಾರ ರಾತ್ರಿ ನಿಗದಿಯಾಗಿತ್ತು. ಅವರು ಸಮಾರಂಭಕ್ಕಾಗಿ ಸಿದ್ಧವಾಗುವಾಗ ಅವರಿಬ್ಬರ ಕೊಠಡಿಯಿಂದ ವಧು ಚೀರಾಡುವುದು ವರನ ತಾಯಿಯ ಕಿವಿಗೆ ಬಿದ್ದಿತು. ಕೂಡಲೇ ಅವರು ಅಲ್ಲಿಗೆ ಧಾವಿಸಿದಾಗ ಕೊಠಡಿಗೆ ಒಳಗಿನಿಂದ ಚಿಲಕ ಹಾಕಿರುವುದು ಕಂಡು ಬಂದಿತು. ಅವರು ತಮ್ಮ ಬಂಧುಗಳ ಕರೆಗೆ ಪ್ರತಿಕ್ರಿಯಿಸದಿದ್ದಾಗ ಕುಟುಂಬದ ಸದಸ್ಯರು ಕಿಟಕಿಯಿಂದ ಇಣುಕಿ ನೋಡಿದ್ದಾರೆ. ಆಗ ಅವರಿಬ್ಬರೂ ಪ್ತಜ್ಞಾಹೀನರಾಗಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡು ಬಂದಿದೆ. ಇದರ ಬೆನ್ನಿಗೇ ಅವರು ಪೊಲೀಸರಿಗೆ ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ" ಎಂದು ಅವರು ತಿಳಿಸಿದ್ದಾರೆ.
ಸ್ಥಳಕ್ಕೆ ಧಾವಿಸಿದ ಪೊಲೀಸರು, ಕೊಠಡಿಯ ಬಾಗಿಲು ಒಡೆದು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದರು. ನಂತರ ಸ್ಥಳದಲ್ಲಿದ್ದ ಚಾಕುವೊಂದನ್ನು ವಶಪಡಿಸಿಕೊಳ್ಳಲಾಯಿತು ಎಂದು ಅವರು ಹೇಳಿದ್ದಾರೆ.
ಸಾಂದರ್ಭಿಕ ಸಾಕ್ಷ್ಯಾಧಾರಗಳ ಪ್ರಕಾರ, ದಂಪತಿಗಳ ನಡುವೆ ಜಗಳ ನಡೆದು, ಪತಿಯು ತನ್ನ ಪತ್ನಿಯ ಮೇಲೆ ಚಾಕುವಿನಿಂದ ಇರಿದು, ನಂತರ ತನಗೂ ಇರಿದುಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಹೀಗಿದ್ದೂ ಘಟನೆಯ ಕುರಿತು ತನಿಖೆಯನ್ನು ಮುಂದುವರಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.