ದಿಲ್ಲಿಯ ನೂತನ ಮೇಯರ್ ಆಗಿ ಆಪ್ ನ ಶೆಲ್ಲಿ ಒಬೆರಾಯ್ ಆಯ್ಕೆ; ಬಿಜೆಪಿಗೆ ಮುಖಭಂಗ
ಗೂಂಡಾಗಳಿಗೆ ಸೋಲಾಗಿದೆ ಎಂದ ಕೇಜ್ರಿವಾಲ್
ಹೊಸದಿಲ್ಲಿ: ಆಮ್ ಆದ್ಮಿ ಪಕ್ಷದ ಶೆಲ್ಲಿ ಒಬೆರಾಯ್ ಅವರು ದಿಲ್ಲಿಯ ನೂತನ ಮೇಯರ್ ಆಗಿ ಆಯ್ಕೆಯಾಗಿದ್ದು, ಬಿಜೆಪಿಯ ರೇಖಾ ಗುಪ್ತಾ ಅವರನ್ನು 34 ಮತಗಳಿಂದ ಸೋಲಿಸಿ, ಮೂರು ಬಾರಿ ರದ್ದಾಗಿದ್ದ ಚುನಾವಣೆಯಲ್ಲಿ ಜಯ ಗಳಿಸಿದ್ದಾರೆ ಎಂದು ಅಧಿಕಾರಿಗಳು ಬುಧವಾರ ಪ್ರಕಟಿಸಿದ್ದಾರೆ.
ಸುಪ್ರೀಂ ಕೋರ್ಟ್‌ನಲ್ಲಿ ಆಪ್‌ಗೆ ದೊರಕಿದ ನಿರ್ಣಾಯಕ ಗೆಲುವಿನ ನಂತರ ನಡೆದ ಚುನಾವಣೆಯಲ್ಲಿ ಒಟ್ಟು 266 ಮತಗಳ ಪೈಕಿ ರೇಖಾ ಗುಪ್ತಾ 116 ಮತಗಳನ್ನು ಪಡೆದರೆ ಶೆಲ್ಲಿ ಒಬೆರಾಯ್ 150 ಮತಗಳನ್ನು ಪಡೆದರು.
ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಒಬೆರಾಯ್ ಮತ್ತು ಪಕ್ಷದ ಕಾರ್ಯಕರ್ತರನ್ನು ಅಭಿನಂದಿಸಿದ್ದಾರೆ. "ಗೂಂಡಾಗಳು ಸೋತಿದ್ದಾರೆ, ಸಾರ್ವಜನಿಕರು ಗೆದ್ದಿದ್ದಾರೆ. ಇಂದು ದಿಲ್ಲಿಯ ಮುನ್ಸಿಪಲ್ ಕಾರ್ಪೊರೇಶನ್‌ನಲ್ಲಿ, ದಿಲ್ಲಿಯ ಜನರು ಗೆದ್ದಿದ್ದಾರೆ ಮತ್ತು ಗೂಂಡಾಗಿರಿಯನ್ನು ಸೋಲಿಸಿದ್ದಾರೆ" ಎಂದು ಕೇಜ್ರಿವಾಲ್ ಹೇಳಿದರು.
ಎಎಪಿ ಮತ್ತು ಬಿಜೆಪಿ ನಡುವಿನ ಸುದೀರ್ಘ ಜಗಳದ ನಡುವೆ ಮೇಯರ್ ಚುನಾವಣೆಯನ್ನು ಮೂರು ಬಾರಿ ಮುಂದೂಡಲಾಗಿತ್ತು.
ಕಳೆದ ವರ್ಷ ಎಂಸಿಡಿ ವಿಲೀನ ಮತ್ತು ಕ್ಷೇತ್ರಗಳ ಮರುವಿನ್ಯಾಸದ ನಂತರ ನಡೆದ ಮೊದಲ ಪುರಸಭೆ ಚುನಾವಣೆಯಲ್ಲಿ 250 ವಾರ್ಡ್‌ಗಳಲ್ಲಿ 134 ಅನ್ನು ಎಎಪಿ ಗೆದ್ದಿದೆ. 15 ವರ್ಷಗಳ ಕಾಲ ನಾಗರಿಕ ಸಂಸ್ಥೆಯನ್ನು ನಿಯಂತ್ರಿಸಿದ ಬಿಜೆಪಿ ಎರಡನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ವಿವಾಹ ಆರತಕ್ಷತೆಗೂ ಮುನ್ನವೇ ರಕ್ತದ ಮಡುವಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ವಧು-ವರ