ಮಣಿಪಾಲ: ಶಿವಪಾಡಿ ದೇವಸ್ಥಾನದಲ್ಲಿ ಅತಿರುದ್ರ ಮಹಾಯಾಗ ಪ್ರಾರಂಭ

Update: 2023-02-22 16:55 GMT

ಮಣಿಪಾಲ : ಇಲ್ಲಿನ ಶಿವಪಾಡಿ ಶ್ರೀಉಮಾಮಹೇಶ್ವರ ದೇವಸ್ಥಾನದ ಅಭಿವೃದ್ಧಿ ಟ್ರಸ್ಟ್ ಹಾಗೂ ಅತಿರುದ್ರ ಮಹಾಯಾಗ ಸಮಿತಿಯ ಜಂಟಿ ಆಶ್ರಯದಲ್ಲಿ ಮಾ.5ರವರೆಗೆ ಕರಾವಳಿಯಲ್ಲಿ ಮೊದಲ ಬಾರಿ ನಡೆಯುವ ಅತಿರುದ್ರ ಮಹಾಯಾಗ ಬುಧವಾರದಂದು ಋತ್ವಿಜರಿಂದ ಪೂಜೆಯೊಂದಿಗೆ ಶುಭಾರಂಭಗೊಂಡಿತು.

ಶೃಂಗೇರಿ ಶಾರದಾ ಪೀಠದ ಶ್ರೀಭಾರತೀತೀರ್ಥ ಮಹಾಸ್ವಾಮಿಗಳ ನೇತೃತ್ವದಲ್ಲಿ ಈ ಯಾಗ ನಡೆಯಲಿದೆ. ಬೆಳಗ್ಗೆ ಅತಿರುದ್ರ ಯಾಗಮಂಟಪದಲ್ಲಿ ಮಹಾನ್ಯಾಸಪೂರ್ವಕ ರುದ್ರ ಪುರಶ್ಚರಣ ಮತ್ತು ಶತಚಂಡಿಕಾ ಯಾಗ ಮಂಟಪದಲ್ಲಿ ಶತಚಂಡಿಕಾ ಯಾಗ ಪ್ರಾರಂಭಗೊಂಡಿತು. ಇದರೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೂ ನಡೆದವು.

ಈ ಸಂದರ್ಭದಲ್ಲಿ ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಶಾಸಕ ರಘುಪತಿ ಭಟ್, ಶಿವಪಾಡಿ ಶ್ರೀಉಮಾಮಹೇಶ್ವರ ದೇವಸ್ಥಾನ ಅಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಮಹೇಶ್ ಠಾಕೂರ್, ಬೆಂಗಳೂರಿನ ಮಾಜಿ ವಿಧಾನಸಭಾ ಸದಸ್ಯ ದಯಾನಂದ ರೆಡ್ಡಿ, ಡಾ.ಜಿ.ಶಂಕರ್, ನಟ ರಕ್ಷಿತ್ ಶೆಟ್ಟಿ ಉಪಸ್ಥಿತರಿದ್ದರು.

ಅಪರಾಹ್ನ ವಿವಿಧ ಭಜನಾ ಮಂಡಳಿಗಳಿಂದ ಭಕ್ತಿ ಮಾಧುರ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಊರ ಪರವೂರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅಪರೂಪದ ಅತಿರುದ್ರ ಮಹಾಯಾಗಕ್ಕೆ ಸಾಕ್ಷಿಯಾಗುತ್ತಿದ್ದಾರೆ. ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀಭಾರತೀತೀರ್ಥ ಮಹಾಸ್ವಾಮಿಗಳ ಆಶೀರ್ವಾದ ಹಾಗೂ ನೇತೃತ್ವ ದೊಂದಿಗೆ ಫೆ.22ರಿಂದ ಅತಿರುದ್ರ ಮಹಾ ಯಾಗ ಮಾ.5ರವರೆಗೆ ನಡೆಯಲಿದೆ. 

ಅತಿರುದ್ರ ಮಹಾಯಾಗವು 121 ಋತ್ವಿಜರ ನೇತೃತ್ವದಲ್ಲಿ 11 ಕುಂಡಗಳಲ್ಲಿ 12 ದಿನಗಳ ಕಾಲ ನಡೆಯಲಿದೆ. ಇದಕ್ಕಾಗಿ ಯಾಗದ ವೇದಿಕೆ, ಯಾಗ ಮಂಟಪವನ್ನು ರಚಿಸಲಾಗಿದೆ. ಪ್ರತಿದಿನ ನಡೆಯುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು 2000 ವೀಕ್ಷಿಸಲು ಸಾಧ್ಯವಾಗುವಂತೆ ಬಾರತೀತೀರ್ಥ ಸಭಾಮಂಟಪವನ್ನು ಸಜ್ಜುಗೊಳಿಸಲಾಗಿದೆ.

ಈ ಯಾಗದಲ್ಲಿ ಭಾಗವಹಿಸಲು ಶೃಂಗೇರಿಯಿಂದ ಆಗಮಿಸುವ 180 ಮಂದಿ ಋತ್ವಿಜರ ವಾಸ್ತವ್ಯಕ್ಕಾಗಿ ‘ಈಶಾವಾಸ್ಯಂ’ ವಸತಿಗೃಹವನ್ನು ನಿರ್ಮಿಸ ಲಾಗಿದೆ. ಜಿಲ್ಲೆಯಲ್ಲಿ ಮಹಾಯಾಗ ನಡೆದಿದೆ. ಆದರೆ ಅತಿರುದ್ರ ಮಹಾಯಾಗ ಈವರೆಗೆ ನಡೆದಿಲ್ಲ. ಶೃಂಗೇರಿಯಲ್ಲಿ ಮಾತ್ರ ಈ ಯಾಗ ನಡೆದಿರುವ ಮಾಹಿತಿ ಇದ್ದು, ಶೃಂಗೇರಿಯ ವೈದಿಕರೇ ಅತಿರುದ್ರ ಮಹಾಯಾಗವನ್ನು ನಡೆಸುವವರಾಗಿದ್ದು, ಶೃಂಗೇರಿ ಪೀಠಾಧಿಪತಿಗಳ ಪೂರ್ಣ ಸಮ್ಮತಿ ಯೊಂದಿಗೆ ಅವರ ಉಪಸ್ಥಿತಿಯಲ್ಲೇ ಇದು ನಡೆಯಲಿದೆ ಎಂದು ಅತಿರುದ್ರ ಮಹಾಯಾಗ ಸಮಿತಿಯ ಅಧ್ಯಕ್ಷರಾದ ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ. 

Similar News