ಅದಾನಿ ಗ್ರೂಪ್ ನಲ್ಲಿ ಕೋಟ್ಯಂತರ ಡಾಲರ್ ಹೂಡಿಕೆ; ಆಸ್ಟ್ರೇಲಿಯದ ಪಿಂಚಣಿ ನಿಧಿ ಕಂಪೆನಿಗಳಿಗೆ ಸಂಕಷ್ಟ
ಗಾರ್ಡಿಯನ್ ವರದಿ
ಹೊಸದಿಲ್ಲಿ,ಫೆ.22: ಅದಾನಿ ಸಮೂಹ(Adani Group)ದ ಶೇರುಧಾರಣೆಗಳ ಪತನವು ಆ ಕಂಪೆನಿಗಳಲ್ಲಿ ಹೂಡಿಕೆ ಮಾಡಿರುವ ಆಸ್ಟ್ರೇಲಿಯದ ಹಲವಾರು ಪಿಂಚಣಿ ನಿಧಿ ಕಂಪೆನಿಗಳ ಕೋಟ್ಯಂತರ ಡಾಲರ್ ಮೌಲ್ಯದ ಹಣವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಗಾರ್ಡಿಯನ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಆಸ್ಟ್ರೇಲಿಯದ ಹಲವಾರು ಬೃಹತ್ ನಿವೃತ್ತಿ ಉಳಿತಾಯ ನಿಧಿ ಕಂಪೆನಿಗಳು, ಆದಾನಿ ಗ್ರೂಪ್ ನ ಕಂಪೆನಿಗಳಲ್ಲಿ ಹಣವನ್ನು ಹೂಡಿಕೆ ಮಾಡಿದೆ ಎಂದು ವರದಿ ತಿಳಿಸಿದೆ. ಕ್ವೀನ್ಸ್‌ಲ್ಯಾಂಡ್(Queensland)ನ ಸರಕಾರಿ ಉದ್ಯೋಗಿಗಳು ಹಾಗೂ ಕಾಮನ್ವೆಲ್ತ್ ಬ್ಯಾಂಕ್(Commonwealth Bank) ನ ನೌಕರರ ಪಿಂಚಣಿ ನಿಧಿಗಳು ಕೂಡಾ ಇವುಗಳಲ್ಲಿ ಸೇರಿವೆ ಎಂದು ಅದು ಹೇಳಿದೆ,
‘‘ಸದಸ್ಯರ ಪಿಂಚಣಿ ನಿಧಿಗಳನ್ನು ಅನಾಹುತಕಾರಿಯಾದ ಕಾರ್ಮೈಕೆಲ್ ಗಣಿ ಸೇರಿದಂತೆ ಅದಾನಿಯ ಕಲ್ಲಿದ್ದಲು ಗಣಿ ವಿಸ್ತರಣಾ ಯೋಜನೆಗಳ ಬೆಳವಣಿಗೆಗೆ ಬಳಸಿಕೊಳ್ಳಲಾಗಿದೆ. ಹಿಂಡನ್ ಬರ್ಗ್ ವರದಿ ಬೆಳಕಿಗೆ ಬರುವ ಮೊದಲು, ಇಂತಹ ಹೂಡಿಕೆಯಲ್ಲಿರುವ ಅಪಾಯಗಳನ್ನು ಅರಿತುಕೊಳ್ಳಲು ಈ ಕಂಪೆನಿಗಳು ವಿಫಲವಾಗಿವೆ’’ ಎಂದು ಮಾರುಕಟ್ಟೆ ಶಕ್ತಿಗಳ ಸಂಪತ್ತು ನಿರ್ವಹಣಾ ಮ್ಯಾನೇಜರ್ ವಿಲ್ ವಾನ್ ಡಿ ಪೊಲ್, ದಿ ಗಾರ್ಡಿಯನ್ ಪತ್ರಿಕೆಗೆ ತಿಳಿಸಿದ್ದಾರೆ.
ಹಿಂಡನ್ ಬರ್ಗ್ ವರದಿ ಬಿಡುಗಡೆಗೆ ಮುನ್ನ ಬ್ರಿಸ್ಬೇನ್ ಮೂಲದ ಆಸ್ಟ್ರೇಲಿಯದ ನಿವೃತ್ತಿವೇತನ ಟ್ರಸ್ಟ್ ಆದಾನಿ ಗ್ರೂಪ್ ಗೆ ಸೇರಿದ ಕನಿಷ್ಠ ಆರು ಕಂಪೆನಿಗಳಲ್ಲಿ ಮಿಲಿಯಗಟ್ಟಲೆ ಡಾಲರ್ ಗಳನ್ನು ಹೂಡಿಕೆ ಮಾಡಿರುವುದಾಗಿ ಗಾರ್ಡಿಯನ್ ತಿಳಿಸಿದೆ.
ಇದರ ಜೊತೆಗೆ ಪಿಂಚಣಿ ಸಂಸ್ಥೆಯಾದ ‘ಫ್ಯೂಚರ್ ಫಂಡ್’ ಕೂಡಾ ಅದಾನಿ ಸಮೂಹದ ಎರಡು ಕಂಪೆನಿಗಳಲ್ಲಿ 33.1 ದಶಲಕ್ಷ ಡಾಲರ್ ಹೂಡಿಕೆ ಮಾಡಿರುವುದು ಆಸ್ಟ್ರೇಲಿಯದ ಮಾಜಿ ಸೆನೆಟರ್ ರೆಕ್ಸ್ ಪ್ಯಾಟ್ರಿಕ್ ಅವರು ಮಾಹಿತಿ ಸ್ವಾತಂತ್ರದಡಿ ಸಲ್ಲಿಸಿದ ಅರ್ಜಿಯಿಂದ ಬೆಳಕಿಗೆ ಬಂದಿರುವುದಾಗಿ ಗಾರ್ಡಿಯನ್ ವರದಿ ತಿಳಿಸಿದೆ.