ದಲಿತ ಯುವಕ ಆತ್ಮಹತ್ಯೆ: ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ವಿಶೇಷ ನ್ಯಾಯಾಲಯ ನಿರ್ದೇಶ
ಇಂದೋರ್, ಫೆ. 22: ಪೊಲೀಸರ ಚಿತ್ರಹಿಂಸೆಯಿಂದ 21 ವರ್ಷದ ದಲಿತ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಲಾದ ಘಟನೆಗೆ ಸಂಬಂಧಿಸಿ ಪ್ರಥಮ ಮಾಹಿತಿ ವರದಿ ದಾಖಲಿಸುವಂತೆ ಇಂದೋರ್‌ನ ವಿಶೇಷ ನ್ಯಾಯಾಲಯ ಆದೇಶಿಸಿದೆ. ಬ್ರಾಹ್ಮಣ ಯುವತಿಯನ್ನು ಪ್ರೀತಿಸಿ, ಆಕೆಯೊಂದಿಗೆ ಓಡಿ ಹೋಗಿರುವುದರಿಂದ ಪೊಲೀಸರು ಆತನಿಗೆ ಚಿತ್ರಹಿಂಸೆ ನೀಡಿದ್ದಾರೆ ಎಂದು ಆತ್ಮಹತ್ಯೆ ಮಾಡಿಕೊಂಡ ಯುವಕನ ಕುಟುಂಬ ಆರೋಪಿಸಿದೆ.
ಈ ಆತ್ಮಹತ್ಯೆಯನ್ನು ತನಿಖೆ ನಡೆಸಲು ಪೊಲೀಸರು ನಿರಾಕರಿಸಿದ್ದಾರೆ. ಆದುದರಿಂದ ಕುಟುಂಬ ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆ ಪ್ರಕರಣಗಳ ವಿಶೇಷ ನ್ಯಾಯಾಲಯದ ಮೆಟ್ಟಿಲೇರಿತು ಎಂದು ಕುಟುಂಬದ ಪರ ವಕೀಲ ನೀರಜ್ ಕುಮಾರ್ ಸೋನಿ ಹೇಳಿದ್ದಾರೆ. ಪ್ರಕರಣ ದಾಖಲಿಸುವಂತೆ ಹಾಗೂ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ವಿಶೇಷ ನ್ಯಾಯಾಧೀಶ ಮನೋಜ್ ಕುಮಾರ್ ತಿವಾರಿ ಅವರು ಇಲ್ಲಿ ಶೆಡ್ಯುಲ್ಡ್ ಕಾಸ್ಟ್ ವೆಲ್ಫೇರ್ ಪೊಲೀಸ್ ಠಾಣೆಗೆ ಆದೇಶಿಸಿದರು.
ಬಿಕಾಂ ವಿದ್ಯಾರ್ಥಿಯಾಗಿದ್ದ ದಲಿತ ಯುವಕ ಬಡಿಯಾ ತನ್ನ ಬ್ರಾಹ್ಮಣ ಗೆಳತಿಯೊಂದಿಗೆ ವಿವಾಹವಾಗುವ ಉದ್ದೇಶದಿಂದ 2022 ಫೆಬ್ರವರಿ 9ರಂದು ಮನೆ ತ್ಯಜಿಸಿದ್ದ ಎಂದು ದೂರಿನಲ್ಲಿ ಹೇಳಲಾಗಿದೆ. ಬಾಲಕಿಯ ಮಾವನಂತೆ ಸೋಗು ಹಾಕಿದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವಿಕಾಸ್ ಶರ್ಮಾ ಅದೇ ದಿನ ಯುವಕನ ಮನೆಗೆ ಭೇಟಿ ನೀಡಿದ್ದರು. ಅಲ್ಲದೆ, ಜಾತಿ ನಿಂದಿಸಿ, ಕುಟುಂಬದ ಸದಸ್ಯರಿಗೆ ಬೆದರಿಕೆ ಒಡ್ಡಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.