ಉಡುಪಿ ಜಿಲ್ಲೆಯಾದ್ಯಂತ ಮಂಜು ಮುಸುಕಿದ ವಾತಾವರಣ

Update: 2023-02-23 03:07 GMT

ಉಡುಪಿ: ಜಿಲ್ಲೆಯಾದ್ಯಂತ ವಾತಾವರಣದಲ್ಲಿ ಬದಲಾವಣೆ ಕಂಡು ಬಂದಿದ್ದು ಇಂದು ಬೆಳಗ್ಗಿನಿಂದ ಕಾಣಿಸಿಕೊಂಡ ಮಂಜು ಮುಸುಕಿದ ವಾತಾವರಣದ ಬಗ್ಗೆ ಜನರಲ್ಲಿ‌ ಕುತೂಹಲ ಮೂಡಿದೆ.

ಎಲ್ಲಾ ಕಡೆ ಮಂಜು ವ್ಯಾಪಿಸಿದ್ದು ದೂರದಲ್ಲಿ ಬರುವ ವಾಹನಗಳು ಹಾಗೂ ಬೃಹತ್ ಕಟ್ಟಡಗಳ ಮತ್ತು ಮರಗಳ ಮೇಲ್ಭಾಗ ಕಾಣದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ವಾತಾವರಣದಿಂದ ವಾಹನ ಸಂಚಾರಕ್ಕೂ ಅಡ್ಡಿ ಉಂಟಾಗಿದ್ದು ವಾಹನಗಳು ಹೆಡ್ ಲೈಟ್ ಹಾಕಿ ಸಂಚರಿಸುತ್ತಿದೆ.

ಸೂರ್ಯೋದಯದ ನಂತರ ಕಂಡು ಬಂದ ಈ ವಾತಾವರಣ ಬೆಳಿಗ್ಗೆ 8:30ರ ವರೆಗೂ ಮುಂದುವರೆದಿತ್ತು. ಈ ದಿಡೀರ್ ವಾತಾವರಣದಲ್ಲಿನ ಬದಲಾವಣೆ ಜನರಲ್ಲಿ ಆತಂಕ ಹಾಗೂ ಕುತೂಹಲ ಮೂಡಿಸಿದೆ. ಕಳೆದ ವರ್ಷವೂ ಇದೇ ರೀತಿಯ ವಾತಾವರಣ ಮಾರ್ಚ್ ಮೊದಲ ವಾರದಲ್ಲಿ ಕಂಡು ಬಂದಿತ್ತು. 

'ವಾತಾವರಣದಲ್ಲಿ ಈ ರೀತಿಯ ವ್ಯತ್ಯಾಸ ಆಗುತ್ತವೆ. ಇದಕ್ಕೆ ನಿಖರವಾದ ಕಾರಣ ಹೇಳಲು ಆಗುವುದಿಲ್ಲ. ಎರಡು ಮೂರು ದಿನಗಳಿಂದ ವಿಪರೀತ ಉರಿ ಬಿಸಿಲು ಇತ್ತು. ಆದರೆ ಇವತ್ತು ದಿಡೀರ್ ಮಂಜು ಆವರಿಸಿದೆ. ಈ ರೀತಿ ವಾತಾವರಣದಲ್ಲಿ ವ್ಯತ್ಯಾಸ ಕಂಡು ಬಂದಿದೆ. ಉಡುಪಿಯಲ್ಲಿ ಇವತ್ತು ಕಂಡು ಬಂದಿರುವ ಮಂಜು ವಿಶೇಷವಾಗಿದೆ. ಈವರೆಗೂ ಇಷ್ಟು ಪ್ರಮಾಣದಲ್ಲಿ ಮಂಜು ಕಂಡು ಬಂದಿರಲಿಲ್ಲ' ಎನ್ನುತ್ತಾರೆ ಖಗೋಳ ಶಾಸ್ತ್ರಜ್ಞ ಡಾ.ಎ.ಪಿ.ಭಟ್ .

Similar News