ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ವಿರುದ್ಧ ಸಿಬಿಐ ಪ್ರಕರಣ

Update: 2023-02-23 06:37 GMT

ಲಕ್ನೋ: ಅಲಹಾಬಾದ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಸ್.ಎನ್.ಶುಕ್ಲಾ ವಿರುದ್ದ ಸಿಬಿಐನ ಭ್ರಷ್ಟಾಚಾರ ವಿರೋಧಿ ಶಾಖೆ ಬುಧವಾರ ಆದಾಯಕ್ಕಿಂದ ಅಧಿಕ ಆಸ್ತಿ ಪ್ರಕರಣ ದಾಖಲಿಸಿದೆ.

ನ್ಯಾಯಮೂರ್ತಿ ಶುಕ್ಲಾ ಅವರು ದೊಡ್ಡ ಪ್ರಮಾಣದ ಆಸ್ತಿ ಹೊಂದಿದ್ದು, 2014ರ ಏಪ್ರಿಲ್ 1 ರಿಂದ 2019ರ ಡಿಸೆಂಬರ್ 6ರವರೆಗೆ ನಾಲ್ಕು ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ ಸಂಬಂಧ ಮತ್ತೊಂದು ಪ್ರಕರಣ ದಾಖಲಿಸಿದೆ. ಆದಾಗ್ಯೂ ಈ ಅವಧಿಯಲ್ಲಿ ಎಲ್ಲ ಮೂಲಗಳಿಂದ ಅವರ ಆದಾಯ 1.5 ಕೋಟಿ ರೂಪಾಯಿ ಎಂದು ಸಿಬಿಐ ಪ್ರತಿಪಾದಿಸಿದೆ.

ಭ್ರಷ್ಟಾಚಾರ ತಡೆ ಕಾಯ್ದೆಯಡಿ ನ್ಯಾಯಮೂರ್ತಿ ಶುಕ್ಲಾ, ಅವರ ಎರಡನೇ ಪತ್ನಿ ಸುಚಿತಾ ತಿವಾರಿ ಹಾಗೂ ಭಾವ ಸಾಯಿದೀನ್ ತಿವಾರಿವಿರುದ್ಧ ಹಾಗೂ ಇತರ ಹಲವು ಮಂದಿ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ನ್ಯಾಯಮೂರ್ತಿ ಶುಕ್ಲಾ ಹಾಗೂ ಸುಚಿತಾ, ಭಾವ ಸಾಯಿದೀನ್ ಅವರ ಮನೆಗಳ ಮೇಳೆ ದಾಳಿ ನಡೆಸಿದ ಬಳಿಕ ಈ ಕ್ರಮ ಕೈಗೊಂಡಿದೆ. ಸಾಯಿದೀನ್ ಅವರ ಹೆಸರಿನಲ್ಲಿ ನ್ಯಾಯಮೂರ್ತಿ ಆಸ್ತಿಗಳನ್ನು ಹೊಂದಿದ್ದಾರೆ ಎಂದೂ ಸಿಬಿಐ ಆಪಾದಿಸಿದೆ. "ಭೂ ವ್ಯವಹಾರದ ಬಗ್ಗೆ ಪರಿಶೀಲನೆ ನಡೆಸಲಾಗಿದೆ. 2012ರಲ್ಲಿ 3.6 ಲಕ್ಷ ರೂಪಾಯಿ ಮೌಲ್ಯದ ಭೂಮಿ ಖರೀದಿಸಿ 2014ರಲ್ಲಿ 30 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಮತ್ತೊಂದು ಜಮೀನನ್ನು 2013ರಲ್ಲಿ 3 ಲಕ್ಷಕ್ಕೆ ಖರೀದಿಸಿ 2017ರಲ್ಲಿ 70 ಲಕ್ಷಕ್ಕೆ ಮಾರಾಟ ಮಾಡಲಾಗಿದೆ. ಎರಡೂ ಜಮೀನುಗಳನ್ನು ಶೈನ್‌ಸಿಟಿ ಇನ್‌ಫ್ರಾ ಪ್ರಾಜೆಕ್ಟ್‌ಗೆ ಮಾರಾಟ ಮಾಡಲಾಗಿದೆ" ಎಂದು ಸಿಬಿಐ ಹೇಳಿದೆ.

ಸಾಯಿದೀನ್ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿಲ್ಲ ಹಾಗೂ ಕಚೇರಿಗೆ ಮಾಹಿತಿ ನೀಡಿಲ್ಲ ಎಂದು ಆಪಾದಿಸಲಾಗಿದೆ.

Similar News