ಕಾಂಗ್ರೆಸ್‌ ನಾಯಕ ಪವನ್ ಖೇರಾರನ್ನು ರಾಯ್‌ಪುರಕ್ಕೆ ತೆರಳದಂತೆ ತಡೆದ ಪೊಲೀಸರು

ದಿಲ್ಲಿ ವಿಮಾನ ನಿಲ್ದಾಣದಲ್ಲಿ ಪಕ್ಷದ ಪ್ರತಿಭಟನೆ

Update: 2023-02-23 07:41 GMT

ಹೊಸದಿಲ್ಲಿ: ಕಾಂಗ್ರೆಸ್‌ನ ನಾಯಕ ಪವನ್ ಖೇರಾ ಅವರನ್ನು ಗುರುವಾರ ಬೆಳಗ್ಗೆ ದಿಲ್ಲಿಯಿಂದ  ಛತ್ತೀಸ್ ಗಢದ ರಾಜಧಾನಿ ರಾಯ್‌ಪುರಕ್ಕೆ ತೆರಳದಂತೆ ಪೊಲೀಸರು ತಡೆದಿದ್ದಾರೆ.  ಪೊಲೀಸರ ಈ ಕ್ರಮವನ್ನು ಖಂಡಿಸಿ ಕಾಂಗ್ರೆಸ್ ನಾಯಕರು ವಿಮಾನದ ಸಮೀಪವೇ ಭಾರೀ ಸಂಖ್ಯೆಯಲ್ಲಿ ಜಮಾಯಿಸಿ  ಪ್ರತಿಭಟನೆ ನಡೆಸಿದ್ದಾರೆ.

ಹಿರಿಯ ಕಾಂಗ್ರೆಸ್ ವಕ್ತಾರರಾದ ಪವನ್ ಖೇರಾ  ಅವರು  ವಿಮಾನವನ್ನು ಹತ್ತಿದ ನಂತರ,  ಬೋರ್ಡಿಂಗ್ ಪಾಸ್ ಇದ್ದ ಹೊರತಾಗಿಯೂ ಇಂಡಿಗೋ ವಿಮಾನದಿಂದ ನಿರ್ಗಮಿಸುವಂತೆ ಒತ್ತಾಯಿಸಲಾಯಿತು. ಕಾಂಗ್ರೆಸ್ ನಾಯಕ ಖೇರ ಅವರು  ಪಕ್ಷದ ಪ್ರಮುಖ  ಸಭೆಯಲ್ಲಿ ಭಾಗವಹಿಸಲು ರಾಯಪುರಕ್ಕೆ ತೆರಳುತ್ತಿದ್ದರು.

" ಅವರು ನನಗೆ ವಿಮಾನದಲ್ಲಿ ತೆರಳಲು  ಸಾಧ್ಯವಿಲ್ಲ ಎಂದು ಹೇಳಿದರು. ನಂತರ ಅವರು ಡಿಸಿಪಿ (ಪೊಲೀಸ್ ಉಪ ಆಯುಕ್ತರು) ನಿಮ್ಮನ್ನು ಭೇಟಿ ಮಾಡುತ್ತಾರೆ ಎಂದು ಹೇಳಿದರು. ನಾನು ಬಹಳ ಸಮಯದಿಂದ ಕಾಯುತ್ತಿದ್ದೇನೆ. ಕಾನೂನು ಮತ್ತು ಸುವ್ಯವಸ್ಥೆಯ ಯಾವುದೇ ಲಕ್ಷಣಗಳಿಲ್ಲ" ಎಂದು ಪವನ್ ಖೇರಾ ಹೇಳಿದರು.

ನೂರಾರು ಕಾಂಗ್ರೆಸ್ ನಾಯಕರು ವಿಮಾನದಿಂದ ಇಳಿದು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಪ್ರತಿಭಟಿಸಿದರು, ಘೋಷಣೆಗಳನ್ನು ಕೂಗಿದರು ಹಾಗೂ  ವಿಮಾನದ ಪಕ್ಕದಲ್ಲಿಯೇ ಧರಣಿ ನಡೆಸಿದರು.

ಬಂಧನ ವಾರಂಟ್ ಇಲ್ಲದೆ ಪವನ್ ಖೇರಾ ಅವರನ್ನು ತಡೆಯಲಾಗಿದೆ ಎಂದು ಪಕ್ಷ ಆರೋಪಿಸಿದೆ.

ಪವನ್ ಖೇರಾ ವಿರುದ್ಧ ಪ್ರಕರಣವಿರುವುದರಿಂದ ಅವರನ್ನು ವಿಮಾನದಲ್ಲಿ ಅನುಮತಿಸದಂತೆ ಸೂಚನೆಗಳಿವೆ ಎಂದು ಇಂಡಿಗೋ ಏರ್‌ಲೈನ್ಸ್ ಅಧಿಕಾರಿಯೊಬ್ಬರು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಮಾನಿಸಿದ ಆರೋಪದ ಮೇಲೆ ಖೇರಾ ಅವರನ್ನು ಬಂಧಿಸುವಂತೆ ಬಿಜೆಪಿ ಒತ್ತಾಯಿಸಿದೆ. ಬಿಜೆಪಿ ಮುಖಂಡರೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.

"ದಿಲ್ಲಿ-ರಾಯಪುರ ವಿಮಾನದಿಂದ ಪವನ್ ಖೇರಾ ಅವರನ್ನು ಕೆಳಗಿಳಿಸಿ, ಎಐಸಿಸಿ ಸಭೆಯಲ್ಲಿ ಭಾಗವಹಿಸದಂತೆ ಮಾಡಿರುವ ಮೋದಿ ಸರಕಾರವು ಗೂಂಡಾಗಳಂತೆ  ವರ್ತಿಸುತ್ತಿದೆ. ಕ್ಷುಲ್ಲಕ ಎಫ್‌ಐಆರ್ ಬಳಸಿ ಅವರ ಓಡಾಟವನ್ನು ನಿರ್ಬಂಧಿಸಿ ಮೌನವಾಗಿರಿಸುವುದು ನಾಚಿಕೆಗೇಡಿನ, ಸ್ವೀಕಾರಾರ್ಹವಲ್ಲದ ಕೃತ್ಯವಾಗಿದೆ. ಇಡೀ ಪಕ್ಷವು ಪವನ್ ಜೀ ಜೊತೆ ನಿಲ್ಲುತ್ತದೆ'' ಎಂದು ಕಾಂಗ್ರೆಸ್ ಹಿರಿಯ ನಾಯಕ ಕೆ.ಸಿ. ವೇಣು ಗೋಪಾಲ್ ಟ್ವೀಟ್ ಮಾಡಿದ್ದಾರೆ.

Similar News