ಹಟ್ಟಿಯಂಗಡಿ ಗ್ರಾಮದ ವಿಎ ವಿರುದ್ಧ ಪ್ರತಿಭಟನಾ ಧರಣಿ
ಕುಂದಾಪುರ: ಎಸ್ಸಿ-ಎಸ್ಟಿ ಮತ ಪಡೆದು ಸ್ಥಳೀಯ ಸಂಸ್ಥೆಗೆ ಆರಿಸಿ ಬಂದವರ ಪೈಕಿ ಹಲವು ಗ್ರಾಮಪಂಚಾಯತಿ ಗಳಲ್ಲಿ ಧ್ಬನಿಯಿಲ್ಲದ ಸಮಾಜಕ್ಕೆ ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳು ಧ್ವನಿಯಾಗಿದ್ದು ಹಟ್ಟಿಯಂಗಡಿ ಗ್ರಾಪಂ ಆಡಳಿತ ಮಾತ್ರ ಇದಕ್ಕೆ ತದ್ವಿರುದ್ಧವಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆಯ ರಾಜ್ಯ ಮುಖಂಡ ಉದಯಕುಮಾರ ತಲ್ಲೂರು ಆರೋಪಿಸಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆಯ ಕುಂದಾಪುರ ತಾಲೂಕು ಸಮಿತಿ ವತಿಯಿಂದ ಹಟ್ಟಿಯಂಗಡಿ ಗ್ರಾಮದ ಗ್ರಾಮಲೆಕ್ಕಾಧಿಕಾರಿ ವಿರುದ್ಧ ವಿ.ಎ ಕಚೇರಿಯೆದುರು ಗುರುವಾರ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಅವರು ಮಾತನಾಡುತ್ತಿದ್ದರು.
ದಲಿತರು ಬಂದು ಪ್ರತಿಭಟನೆ ನಡೆಸುತ್ತಿದ್ದರೂ ಕೂಡ ಜಾಣ ಕುರುಡು ಪ್ರದರ್ಶಿಸಿ ಗ್ರಾಪಂ ದಲಿತ ವಿರೋಧಿಯಾಗಿ ವರ್ತಿಸುತ್ತಿರುವುದು ಸರಿಯಲ್ಲ. ಸ್ಥಳೀಯವಾಗಿ ಒಂದಷ್ಟು ಕಡೆಗಳಲ್ಲಿ ಸರಕಾರಿ ಭೂಮಿ ಒತ್ತುವರಿಯಾಗಿದ್ದು ಅದನ್ನು ತೆರವು ಮಾಡುವ ಕೆಲಸ ಅಧಿಕಾರಿಗಳು ಮಾಡಲಿ ಎಂದ ಉದಯ ಕುಮಾರ್ ತಲ್ಲೂರು, ಪರಿಶಿಷ್ಟ ಜಾತಿ-ಪಂಗಡದ ವ್ಯಕ್ತಿಗಳು ಸರಕಾರಿ ಭೂಮಿಯಲ್ಲಿ ಮನೆ ಕಟ್ಟಿ ಕೂತಾಗ, ಆ ವಸತಿ ಕೆಡವಿದರೆ ದಲಿತ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ ಎಂಬುದನ್ನು ಅಧಿಕಾರಿಗಳಿಗೆ ನೆನಪಿಸಿದರು.
ದಲಿತರಿಗೆ ಸಿಗಬೇಕಾದ ಮೂಲಸೌಕರ್ಯಗಳು, ವಿದ್ಯಾರ್ಥಿಗಳಿಗೆ ಸಿಗಬೇಕಾದ ಯೋಜನೆಗಳನ್ನು ನೀಡುವ ಕೆಲಸ ಗ್ರಾಪಂ ಮಾಡಬೇಕಿದೆ. ಬದಲಾಗಿ ಭ್ರಷ್ಟರಿಗೆ ಮಣೆಹಾಕುವ ಕೆಲಸ ಮಾಡಬಾರದು. ಬಡವರಿಗೆ ಭೂಮಿ ಕೊಡಿ ಎಂದು ಅವರು ಆಗ್ರಹಿಸಿದರು.
ಈ ಸಂದರ್ಭ ದಸಂಸ ಭೀಮಘರ್ಜನೆಯ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರ್, ತಾಲೂಕು ಸಂಘಟನಾ ಸಂಚಾಲಕ ಕೆ.ಎಸ್ ವಿಜಯ್, ದಲಿತ ಮುಖಂಡ ಚಂದ್ರಮ ತಲ್ಲೂರು, ಜಿಲ್ಲಾ ಸಂಘಟನಾ ಸಂಚಾಲಕ ರಾಘು ಶಿರೂರು, ಚಂದ್ರಶೇಖರ ಗುಲ್ವಾಡಿ, ಮಹಿಳಾ ಸಂಚಾಲಕಿ ಮಹಾಲಕ್ಷ್ಮೀ, ಮುಖಂಡರಾದ ಸುರೇಶ್ ಬಾಬು ಕುಂದಾಪುರ, ಉಮೇಶ್ ಗುಡ್ಡೆಯಂಗಡಿ, ಶೀನ ಗುಡ್ಡೆಯಂಗಡಿ, ಹಟ್ಟಿಯಂಗಡಿ ಗ್ರಾಪಂ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಸಾಧು, ಹೆಮ್ಮಾಡಿ ಗ್ರಾಪಂ ಸದಸ್ಯೆ ಶಕಿಲಾ, ಉಡುಪಿ ತಾಲೂಕು ಸಂಚಾಲಕ ಪ್ರಶಾಂತ್ ಸಿ, ಗೋಪಾಲ್ ವಿ. ಕುಂದಾಪುರ ಉಪಸ್ಥಿತರಿದ್ದರು.
ಪ್ರತಿಭಟನಾ ಸ್ಥಳಕ್ಕೆ ತಾಲೂಕು ಆಡಳಿತದ ಪರವಾಗಿ ಅಧಿಕಾರಿ ನಾಗರಾಜ ನಾಯ್ಕ್ ಆಗಮಿಸಿ ಧರಣಿ ನಿರತರಿಂದ ಮನವಿಯನ್ನ ಸ್ವೀಕರಿಸಿದರು.ಗುಲ್ವಾಡಿ ಗ್ರಾಪಂ ಉಪಾಧ್ಯಕ್ಷೆ ಶೋಭಾ ಚಂದ್ರಶೇಖರ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.
ಭೀಮಘರ್ಜನೆ ತಾಲೂಕು ಸಂಚಾಲಕ ಹಾಗೂ ಹಟ್ಟಿಯಂಗಡಿ ಗ್ರಾಪಂ ಸದಸ್ಯ ಮಂಜುನಾಥ್ ಜಿ. ಗುಡ್ಡೆಯಂಗಡಿ ಗ್ರಾಮಾಧಿಕಾರಿ ಮಹೇಶ್ ವಿರುದ್ಧ ಘೋಷಣೆ ಕೂಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ದಲಿತ ಕಲಾ ಮಂಡಳಿಯ ವಸಂತ್ ವಂಡ್ಸೆ ಕ್ರಾಂತಿಗೀತೆ ಹಾಡಿ ಸ್ವಾಗತಿಸಿದರು.
ವಿಎ ಮೇಲಿನ ಆರೋಪ....
ಗ್ರಾಪಂ ವ್ಯಾಪ್ತಿಯ ಕನ್ಯಾನ ಗ್ರಾಮದ ಅಂಡಾರುಕಟ್ಟೆ ಸಮೀಪ ಸರ್ವೆ ನಂಬರ್ ೧೩೧ರಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಚಂದ್ರ ಕೊರಗ ಎನ್ನುವ ನಿವೇಶನ ರಹಿತರೊಬ್ಬರು ಸರಕಾರಿ ಭೂಮಿಯಲ್ಲಿ ಗುಡಿಸಲು ಕಟ್ಟಿದ್ದಕ್ಕೆ ಹಟ್ಟಿಯಂಗಡಿ ಗ್ರಾಮಲೆಕ್ಕಾಧಿಕಾರಿಗಳು ಚಂದ್ರ ಅವರಿಗೆ ಗುಡಿಸಲು ತೆರವುಗೊಳಿಸಬೇಕೆಂದು ಬೆದರಿಕೆ ಯೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಬಗ್ಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮಘರ್ಜನೆ)ಯ ಉದಯಕುಮಾರ್ ತಲ್ಲೂರು ನೇತೃತ್ವದಲ್ಲಿ ಹಟ್ಟಿಯಂಗಡಿ ಗ್ರಾಮಕರಣಿಕರ ಕಚೇರಿ ಎದುರೆ ಬೃಹತ್ ಪ್ರತಿಭಟನೆ ನಡೆಸಲಾಯಿತು. ಸಂಬಂದಪಟ್ಟ ಅಧಿಕಾರಿಯನ್ನು ಸೇವೆಯಿಂದ ವಜಾ ಮಾಡಬೇಕು ಎಂದು ಆಗ್ರಹಿಸಲಾಯಿತು.