×
Ad

ದಿಲ್ಲಿಯಲ್ಲಿ ದಂಪತಿಯನ್ನು ಬಂಧಿಸಿದ ಉ.ಪ್ರ ಪೊಲೀಸರು: CCTV ದೃಶ್ಯ ಸಲ್ಲಿಸಲು ದಿಲ್ಲಿ ಪೊಲೀಸರಿಗೆ ಹೈಕೋರ್ಟ್ ಸೂಚನೆ

Update: 2023-02-23 21:26 IST

ಹೊಸದಿಲ್ಲಿ, ಫೆ. 23: ಕಳೆದ ವಾರ ದಿಲ್ಲಿ ಪೊಲೀಸರಿಗೆ ಮಾಹಿತಿ ನೀಡದೆ ಉತ್ತರಪ್ರದೇಶ ಪೊಲೀಸರು ದಂಪತಿಯೊಂದನ್ನು ಅವರ ದಿಲ್ಲಿಯ ಮನೆಯಿಂದ ಬಂಧಿಸಿ ಘಾಝಿಯಾಪುರಕ್ಕೆ ಕರೆತಂದ ಪ್ರಕರಣಕ್ಕೆ ಸಂಬಂಧಿಸಿ, ದಂಪತಿಯ ಮನೆ ಮತ್ತು ಅದರ ಸುತ್ತಮುತ್ತಲಿನ ಸಿಸಿಟಿವಿ ಚಿತ್ರಗಳನ್ನು ಸಲ್ಲಿಸುವಂತೆ ದಿಲ್ಲಿ ಹೈಕೋರ್ಟ್ ಪೊಲೀಸರಿಗೆ ಸೂಚಿಸಿದೆ.

ಪೊಲೀಸ್ ಎನ್ನುವುದು ರಾಜ್ಯ ವಿಷಯ ಎಂದು ಸಂವಿಧಾನದ ಏಳನೇ ಶೆಡ್ಯೂಲ್ ಹೇಳುತ್ತದೆ. ಅಂದರೆ ಪೊಲೀಸರ ಕಾರ್ಯಾಚರಣೆಗೆ ಸಂಬಂಧಿಸಿದ ವಿಚಾರವನ್ನು ರಾಜ್ಯ ಸರಕಾರ ನಿರ್ಧರಿಸುತ್ತದೆ. ಆದರೂ, ಕೆಲವು ಪ್ರಕರಣಗಳಲ್ಲಿ, ಪೊಲೀಸರು ಇನ್ನೊಂದು ರಾಜ್ಯದಲ್ಲಿ ಬಂಧನಗಳನ್ನು ನಡೆಸಬಹುದಾಗಿದೆ. ಆದರೆ, ಅದಕ್ಕೆ ನ್ಯಾಯಾಲಯದಿಂದ ವಾರಂಟ್ ಪಡೆಯಬೇಕಾಗುತ್ತದೆ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕಾಗುತ್ತದೆ.

ಘಟನೆ ನಡೆದ ಫೆಬ್ರವರಿ 16ರಂದು ದಂಪತಿಯ ಮನೆಯನ್ನು ಯಾರು ಪ್ರವೇಶಿಸಿದರು ಮತ್ತು ಅಲ್ಲಿಂದ ಯಾರು ಹೊರ ಹೋದರು ಎನ್ನುವುದನ್ನು ಪತ್ತೆಹಚ್ಚುವುದಕ್ಕಾಗಿ ಸಿಸಿಟಿವಿ ಚಿತ್ರಗಳನ್ನು ಸಂಗ್ರಹಿಸುವಂತೆ ದಿಲ್ಲಿ ಪೊಲೀಸ್‌ನ ಸಬ್ ಇನ್ಸ್‌ಪೆಕ್ಟರ್ ಒಬ್ಬರಿಗೆ ಹೈಕೋರ್ಟ್ ಸೂಚನೆ ನೀಡಿದೆ.

ಹುಡುಗಿಯ ಕುಟುಂಬದವರಿಂದ ಕೊಲೆ ಬೆದರಿಕೆ ಇದೆ, ಹಾಗಾಗಿ ತಮಗೆ ರಕ್ಷಣೆ ನೀಡಬೇಕು ಎಂದು ಕೋರಿವಿವಾಹಿತ ದಂಪತಿ- 21 ವರ್ಷದ ಪುರುಷ ಮತ್ತು 19 ವರ್ಷದ ಮಹಿಳೆ- ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ಅನೂಪ್ ಜೈರಾಮ್ ಭಂಭಾನಿ ಫೆಬ್ರವರಿ 18ರಂದು ಈ ಆದೇಶ ನೀಡಿದರು.

ತಾವು ಹಿಂದೂ ಸಂಪ್ರದಾಯದಂತೆ ದಿಲ್ಲಿಯ ಶಹ್ದಾರ ಪ್ರದೇಶದಲ್ಲಿ ಮದುವೆಯಾಗಿರುವುದಾಗಿ ಫೆಬ್ರವರಿ 16ರಂದು ದಂಪತಿ ನ್ಯಾಯಾಲಯಕ್ಕೆ ತಿಳಿಸಿದ್ದರು. ಅವರು ಫೆಬ್ರವರಿ 13ರ ದಿನಾಂಕ ಹೊಂದಿದ ವಿವಾಹ ಪ್ರಮಾಣಪತ್ರವನ್ನೂ ಸಲ್ಲಿಸಿದ್ದರು.

ಆಗ, ದಂಪತಿಯ ಸುರಕ್ಷತೆಯನ್ನು ಖಾತರಿಪಡಿಸುವಂತೆ ದಿಲ್ಲಿಯ ಆನಂದ್ ಪರ್ಬತ್ ಪೊಲೀಸ್ ಠಾಣೆಯ ಮುಖ್ಯಾಧಿಕಾರಿಗೆ ನ್ಯಾಯಾಲಯ ಸೂಚಿಸಿತು. ನೆರವಿಗಾಗಿ ದಂಪತಿಗೆ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರ ಫೋನ್ ಸಂಖ್ಯೆಯನ್ನೂ ನೀಡುವಂತೆ ಪೊಲೀಸ್ ಅಧಿಕಾರಿಗೆ ಸೂಚಿಸಿತ್ತು.

ಎರಡು ದಿನಗಳ ಬಳಿಕ, ನ್ಯಾಯಾಲಯಕ್ಕೆ ಬಂದ ದಂಪತಿ, ಪೊಲೀಸ್ ಅಧಿಕಾರಿಗಳೆನ್ನಲಾದ ಕೆಲವರು ತಮ್ಮನ್ನು ಬಂಧಿಸಿ ಉತ್ತರಪ್ರದೇಶದ ಘಾಝಿಯಾಬಾದ್‌ನಲ್ಲಿರುವ ಮೋದಿ ನಗರ್ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎಂದು ಆರೋಪಿಸಿದರು ಹಾಗೂ ಈ ಪ್ರಕರಣದ ತುರ್ತು ವಿಚಾರಣೆ ನಡೆಸುವಂತೆ ಕೋರಿದರು.

ಗಂಡನು ರಾತ್ರಿಯನ್ನು ಲಾಕ್-ಅಪ್‌ನಲ್ಲಿ ಕಳೆಯಬೇಕಾಯಿತು ಹಾಗೂ ಹೆಂಡತಿಯನ್ನು ಸ್ಥಳೀಯ ನ್ಯಾಯಾಲಯವೊಂದರಲ್ಲಿ ಹಾಜರುಪಡಿಸಲಾಯಿತು ಎಂದು ದಂಪತಿ ಹೇಳಿದರು. ಹೆಂಡತಿಯ ಹೇಳಿಕೆಯನ್ನು ನ್ಯಾಯಾಲಯದಲ್ಲಿ ದಾಖಲಿಸಲಾಯಿತು. ಹೆಂಡತಿಯನ್ನು ಬಳಿಕ ಜೈಲಿಗೆ ಕರೆ ತಂದ ಬಳಿಕ ಇಬ್ಬರನ್ನೂ ಹೋಗಲು ಬಿಡಲಾಯಿತು ಎಂದರು.

ತಾವು ಆನಂದ್ ಪರ್ಬತ್ ಪೊಲೀಸ್ ಠಾಣೆಯ ಮುಖ್ಯಾಧಿಕಾರಿ ಮತ್ತು ಕಾನ್ಸ್‌ಟೇಬಲ್‌ಗೆ ಫೋನ್ ಮಾಡಿದರೂ ಅವರು ಕರೆ ಸ್ವೀಕರಿಸಲಿಲ್ಲ ಎಂದು ದಂಪತಿ ಆರೋಪಿಸಿದರು. ಆಗ ನ್ಯಾಯಾಲಯದಲ್ಲಿ ಹಾಜರಿದ್ದ ಸಬ್ ಇನ್ಸ್‌ಪೆಕ್ಟರ್, ಫೆಬ್ರವರಿ 16ರ ರಾತ್ರಿ ನಡೆಸಿದ ಕಾರ್ಯಾಚರಣೆ ಬಗ್ಗೆ ಉತ್ತರಪ್ರದೇಶ ಪೊಲೀಸರು ತಮಗೆ ಮಾಹಿತಿ ನೀಡಿಲ್ಲ ಎಂದು ಹೇಳುವ ವರದಿಯೊಂದನ್ನು ಸಲ್ಲಿಸಿದರು.

Similar News