ಇ.ಪಳನಿಸ್ವಾಮಿ ಪರ ಸುಪ್ರೀಂ ತೀರ್ಪು ಹಿನ್ನಡೆಯಲ್ಲ: ಓ.ಪನ್ನೀರ್ ಸೆಲ್ವಂ

Update: 2023-02-24 14:49 GMT

ಚೆನ್ನೈ, ಫೆ.24: ಇ.ಕೆ.ಪಳನಿಸ್ವಾಮಿ ಪರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದ ತನಗೆ ಹಿನ್ನಡೆಯಾಗಿಲ್ಲ ಎಂದು ಉಚ್ಚಾಟಿತ ಎಐಎಡಿಎಂಕೆ ನಾಯಕ ಓ.ಪನ್ನೀರ್ ಸೆಲ್ವಂ ಅವರು ಶುಕ್ರವಾರ ಹೇಳಿದರು.

ಪಳನಿಸ್ವಾಮಿ ಎಐಎಡಿಎಂಕೆಯ ಮಧ್ಯಂತರ ಪ್ರಧಾನಿ ಕಾರ್ಯದರ್ಶಿಯಾಗಲು ಅವಕಾಶ ಕಲ್ಪಿಸಿದ್ದ ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶವನ್ನು ಸರ್ವೋಚ್ಚ ನ್ಯಾಯಾಲಯವು ಗುರುವಾರ ಎತ್ತಿ ಹಿಡಿದಿತ್ತು.

ಕಳೆದ ವರ್ಷ ಪಳನಿಸ್ವಾಮಿ ಮಧ್ಯಂತರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಗೊಂಡ ಮತ್ತು ಪನ್ನೀರ್ಸ್ವಾಮಿಯವರನ್ನು ಪಕ್ಷವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ್ದ ಆರೋಪದಲ್ಲಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದ ಬಳಿಕ ಪಕ್ಷದ ಈ ಇಬ್ಬರು ಹಿರಿಯ ನಾಯಕರು ನಾಯಕತ್ವ ಕಚ್ಚಾಟದಲ್ಲಿ ತೊಡಗಿದ್ದಾರೆ.

ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಳಿಕ ಜನರ ಬಳಿಗೆ ಹೋಗಿ ನ್ಯಾಯವನ್ನು ಕೇಳುತ್ತೇನೆ ಎಂದು ಶುಕ್ರವಾರ ಹೇಳಿದ ಪನ್ನೀರ್ಸೆಲ್ವಂ,‘ಈ ತೀರ್ಪಿನ ನಂತರವೇ ನಮ್ಮ ಪಕ್ಷದ ಕಾರ್ಯಕರ್ತರು ಹೆಚ್ಚು ಉತ್ಸಾಹಿತರಾಗಿದ್ದಾರೆ ’ ಎಂದರು.

ಪನ್ನೀರ್ಸೆಲ್ವಂ ಮತ್ತು ಅವರ ತಂಡ ಡಿಎಂಕೆಯ ‘ಬಿ ಟೀಮ್ ’ ಆಗಿದ್ದಾರೆ ಎಂಬ ಆರೋಪಗಳ ಕುರಿತಂತೆ ಮಾಜಿ ಮುಖ್ಯಮಂತ್ರಿ,ತಮ್ಮ ವಿರುದ್ಧ ಯಾವುದೇ ಆರೋಪಗಳನ್ನು ಹೊರಿಸಲು ಸಾಧ್ಯವಿಲ್ಲ ಎಂದರು. ಎಐಎಡಿಎಂಕೆ ಒಡೆಯದಂತೆ ನೋಡಿಕೊಳ್ಳಲು ಪಕ್ಷದ ಶಿಸ್ತು ಬಯಸಿದೆ ಎಂದು ಪರಿಗಣಿಸಿರುವುದರಿಂದ ತಾನು ಮತ್ತು ತನ್ನ ಬೆಂಬಲಿಗರು ತಾಳ್ಮೆಯಿಂದಿದ್ದೇವೆ ಎಂದು ಪನ್ನೀರ್ಸೆಲ್ವಂ ಹೇಳಿದರು.

Similar News