ಕಾಶ್ಮೀರ್‌ ಫೈಲ್ಸ್‌ ಗೆ ದಾದಾಸಾಹೇಬ್‌ ಫಾಲ್ಕೆ ʼಅತ್ಯುತ್ತಮ ಚಿತ್ರʼ ಪ್ರಶಸ್ತಿ ನೀಡಲಾಗಿದೆಯೇ?

Update: 2023-02-24 16:03 GMT

ಹೊಸದಿಲ್ಲಿ: ಫೆಬ್ರವರಿ 21, 2023 ರಂದು, ವಿವಾದಿತ ಚಲನಚಿತ್ರ ದಿ ಕಾಶ್ಮೀರ್ ಫೈಲ್ಸ್‌ನ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರು ಟ್ವಿಟ್ಟರ್‌ನಲ್ಲಿ ಕಾಶ್ಮೀರ್‌ ಫೈಲ್ಸ್‌ ಚಿತ್ರವು ದಾದಾಸಾಹೇಬ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ 2023 ರಲ್ಲಿ 'ಅತ್ಯುತ್ತಮ ಚಲನಚಿತ್ರ' ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದು ಘೋಷಿಸಿದರು. ಆದರೆ ಇದು ಸರಕಾರ ನೀಡುವ ಪ್ರತಿಷ್ಠಿತ ದಾದಾ ಸಾಹೇಬ್‌ ಫಾಲ್ಕೆ ಅವಾರ್ಡ್‌ ಗೆ ಸಂಬಂಧಪಟ್ಟಿಲ್ಲ ಎಂದು ವರದಿಗಳು ತಿಳಿಸಿವೆ.

ವಿವೇಕ್‌ ಅಗ್ನಿಹೋತ್ರಿಯವರ ಘೋಷಣೆಯು ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಸಂಬಂಧಿಸಿದಂತೆ ಸಾಮಾಜಿಕ ತಾಣಗಳಲ್ಲಿ ಹೆಚ್ಚಿನ ಗೊಂದಲಕ್ಕೆ ಕಾರಣವಾಯಿತು. ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿಗಳನ್ನು ಫೆಬ್ರವರಿ 20, 2023 ರಂದು ಘೋಷಿಸಲಾಯಿತು.

ವಿವೇಕ್ ಅಗ್ನಿಹೋತ್ರಿ ದಾದಾಸಾಹೇಬ್ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ 2023 ರ ಪ್ರಶಸ್ತಿ ಪ್ರದಾನ ಸಮಾರಂಭದ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಟ್ವೀಟ್‌ಗೆ ಶೀರ್ಷಿಕೆ ಇದೆ, "ಅನೌನ್ಸ್‌ಮೆಂಟ್: #TheKashmirFiles #DadaSahebPhalkeAwards2023 ರಲ್ಲಿ 'ಅತ್ಯುತ್ತಮ ಚಲನಚಿತ್ರ' ಪ್ರಶಸ್ತಿಯನ್ನು ಗೆದ್ದಿದೆ. "ಈ ಪ್ರಶಸ್ತಿಯನ್ನು ಭಯೋತ್ಪಾದನೆಯ ಎಲ್ಲಾ ಸಂತ್ರಸ್ತರಿಗೆ ಮತ್ತು ನಿಮ್ಮ ಆಶೀರ್ವಾದಕ್ಕಾಗಿ ಭಾರತದ ಎಲ್ಲಾ ಜನರಿಗೆ ಸಮರ್ಪಿಸಲಾಗಿದೆ" ಎಂದು ಬರೆದುಕೊಂಡಿದ್ದಾರೆ.

ಕಾಶ್ಮೀರ ಫೈಲ್ಸ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿದೆ ಎಂದು ಇನ್ನಿತರ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದರು.

ದಾದಾಸಾಹೇಬ್ ಫಾಲ್ಕೆ ಅಂತರಾಷ್ಟ್ರೀಯ ಚಲನಚಿತ್ರೋತ್ಸವದ (DPIFF) ವೆಬ್‌ಸೈಟ್‌ನ ಬಗ್ಗೆ thelogicalindia ಪರಿಶೀಲನೆ ನಡೆಸಿದ್ದು, “ಭಾರತೀಯ ಚಿತ್ರರಂಗದ ಪಿತಾಮಹ ದಾದಾಸಾಹೇಬ್ ಫಾಲ್ಕೆ ಎಂದು ಪ್ರೀತಿಯಿಂದ ಕರೆಯಲ್ಪಡುವ ದಿವಂಗತ ಧುಂಡಿರಾಜ್ ಗೋವಿಂದ್ ಫಾಲ್ಕೆ ಅವರ ಪರಂಪರೆಯನ್ನು ಮುಂದುವರಿಸಲು ಚಲನಚಿತ್ರೋತ್ಸವವನ್ನು 2012 ರಲ್ಲಿ ಸ್ಥಾಪಿಸಲಾಯಿತು ಮತ್ತು 2016 ರಲ್ಲಿ ಕಾರ್ಯರೂಪಕ್ಕೆ ತರಲಾಯಿತು ಎಂದು ವೆಬ್‌ಸೈಟ್‌ ಟಿಪ್ಪಣಿ ತಿಳಿಸಿದೆ.

ಫೆಬ್ರವರಿ 21, 2023 ರಂದು ಇಂಡಿಯನ್ ಎಕ್ಸ್‌ಪ್ರೆಸ್ ಪ್ರಕಟಿಸಿದ ಲೇಖನದ ಪ್ರಕಾರ, DPIFF ಈ ವರ್ಷದ ಆವೃತ್ತಿಯಲ್ಲಿ 30 ವಿಭಾಗಗಳಲ್ಲಿ ವ್ಯಕ್ತಿಗಳಿಗೆ ಮತ್ತು ಸಿನಿಮಾಗಳಿಗೆ ಪ್ರಶಸ್ತಿ ನೀಡಿದೆ. ಹಿರಿಯ ನಟಿ ರೇಖಾ ಅವರು ಚಿತ್ರರಂಗಕ್ಕೆ ನೀಡಿದ ಅತ್ಯುತ್ತಮ ಕೊಡುಗೆಗಾಗಿ ಪ್ರಶಸ್ತಿಯನ್ನು ಪಡೆದರು. ಬಾಲಿವುಡ್ ಸೆಲೆಬ್ರಿಟಿಗಳಾದ ವರುಣ್ ಧವನ್, ರೇಖಾ, ಆಲಿಯಾ ಭಟ್, ಅನುಪಮ್ ಖೇರ್, ರೋನಿತ್ ರಾಯ್, ಶ್ರೇಯಸ್ ತಲ್ಪಾಡೆ ಮತ್ತು ಆರ್. ಬಾಲ್ಕಿ ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಸರ್ಕಾರವು ನೀಡಿದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯೊಂದಿಗೆ ಈ ಚಲನಚಿತ್ರೋತ್ಸವ ಮತ್ತು ಪ್ರಶಸ್ತಿಗಳ ನಡುವಿನ ಯಾವುದೇ ನಂಟನ್ನು DPIFF ವೆಬ್‌ಸೈಟ್ ಉಲ್ಲೇಖಿಸಿಲ್ಲ.

ಇನ್ನು, ಸರಕಾರ ನೀಡುವ ಅತ್ಯುನ್ನತ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯ ಅಧಿಕೃತ ವೆಬ್‌ಸೈಟ್‌ನ ಪ್ರಕಾರ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು "ಸಿನಿಮಾ ಕ್ಷೇತ್ರದಲ್ಲಿ ಅತ್ಯುನ್ನತ ಪ್ರಶಸ್ತಿ" ಎಂದು ಗುರುತಿಸಲಾಗಿದೆ. ಭಾರತೀಯ ಚಿತ್ರರಂಗದ ಬೆಳವಣಿಗೆ ಮತ್ತು ಅಭಿವೃದ್ಧಿಗೆ ನೀಡಿದ ಅತ್ಯುತ್ತಮ ಕೊಡುಗೆಗಳನ್ನು ಪರಿಗಣಿಸಿ ಕೆಲವು ಪ್ರಮುಖರನ್ನು ಈವರೆಗೆ ಈ ಪ್ರಶಸ್ತಿಗಾಗಿ ಗುರುತಿಸಲಾಗಿದೆ. ಪುರಸ್ಕೃತರಿಗೆ ಸ್ವರ್ಣ ಕಮಲ (ಗೋಲ್ಡನ್ ಲೋಟಸ್) ಪದಕ, ಶಾಲು ಮತ್ತು ₹10 ಲಕ್ಷ ನಗದು ಬಹುಮಾನ ನೀಡಲಾಗುತ್ತದೆ.

ತೀರಾ ಇತ್ತೀಚಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು 2020 ರಲ್ಲಿ ಭಾರತೀಯ ನಟಿ, ಚಲನಚಿತ್ರ ನಿರ್ದೇಶಕಿ ಮತ್ತು ನಿರ್ಮಾಪಕಿ ಆಶಾ ಪರೇಖ್ ಅವರಿಗೆ ನೀಡಲಾಯಿತು. ಶ್ಯಾಮ್ ಬೆನಗಲ್, ಅಮಿತಾಬ್ ಬಚ್ಚನ್, ಅಡೂರ್ ಗೋಪಾಲಕೃಷ್ಣನ್, ಲತಾ ಮಂಗೇಶ್ಕರ್ ಮತ್ತು ಗುಲ್ಜಾರ್ ಸೇರಿದಂತೆ ಕೆಲ ಪ್ರಮುಖರು ಪ್ರಶಸ್ತಿಯನ್ನು ಗೆದ್ದಿದ್ದಾರೆ.

ಈ ಪ್ರಶಸ್ತಿಯನ್ನು ಭಾರತ ಸರ್ಕಾರವು ನೀಡುವ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಸಮಾನವಾಗಿ ನೋಡಲಾಗುತ್ತಿದೆ ಎಂದು ಚಲನಚಿತ್ರ ವಿಮರ್ಶಕ ಮತ್ತು ಸಂಶೋಧಕ ಬ್ರಹ್ಮಾತ್ಮಜ್ ಟ್ವೀಟ್ ಮಾಡಿದ್ದಾರೆ. ಈ ಪ್ರಶಸ್ತಿಯನ್ನು ತಡೆಹಿಡಿಯುವಂತೆ ಅವರು ಭಾರತ ಸರ್ಕಾರಕ್ಕೆ ಟ್ವೀಟ್‌ ಮೂಲಕ ಮನವಿ ಮಾಡಿದ್ದಾರೆ.

ಇತ್ತೀಚೆಗೆ ನಡೆದ ದಾದಾಸಾಹೇಬ್ ಫಾಲ್ಕೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕಾಶ್ಮೀರ ಫೈಲ್ಸ್‌ಗೆ ‘ಅತ್ಯುತ್ತಮ ಚಲನಚಿತ್ರ’ ಪ್ರಶಸ್ತಿಯನ್ನು ನೀಡಲಾಯಿತು ಎಂದು ಕಂಡುಕೊಳ್ಳಲಾಗಿದೆ. ಆದರೆ ಅದನ್ನು ಭಾರತ ಸರ್ಕಾರವು ನೀಡಿದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯೊಂದಿಗೆ ತಪ್ಪಾಗಿ ಗ್ರಹಿಸಲಾಗಿದೆ. ದಿ ಕಾಶ್ಮೀರ್ ಫೈಲ್ಸ್‌ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಲಾಗಿದೆ ಎಂಬ ವಿವೇಕ್ ಅಗ್ನಿಹೋತ್ರಿ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಗೊಂದಲಕ್ಕೆ ಕಾರಣವಾಗಿದೆ.

Similar News