×
Ad

ನೂಕಾಟ, ತಳ್ಳಾಟ ನಡುವೆ ದಿಲ್ಲಿ ಪಾಲಿಕೆ ಸ್ಥಾಯಿ ಸಮಿತಿ ಚುನಾವಣೆ: ಫಲಿತಾಂಶ ಘೋಷಣೆಗೆ ಬಿಜೆಪಿ ಸದಸ್ಯರ ಅಡ್ಡಿ

Update: 2023-02-24 21:37 IST

ಹೊಸದಿಲ್ಲಿ, ಫೆ. 24: ನೂಕಾಟ, ತಳ್ಳಾಟಗಳ ನಡುವೆಯೇ ಶುಕ್ರವಾರ ದಿಲ್ಲಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಆರು ಸ್ಥಾನಗಳಿಗೆ ಚುನಾವಣೆ ನಡೆಯಿತು. ಆದರೆ, ಮೇಯರ್ ಒಂದು ಮತವನ್ನು ಅಸಿಂಧುಗೊಳಿಸಿ ಫಲಿತಾಂಶ ಪ್ರಕಟನೆಗೆ ಮುಂದಾದಾಗ ಬಿಜೆಪಿ ವಿರೋಧಿಸಿತು ಹಾಗೂ ಮತಗಳ ಎಣಿಕೆಗೆ ಅಡ್ಡಿ ಪಡಿಸಿತು.

ಅಸಿಂಧು ಮತವನ್ನು ಹೊರಗಿಟ್ಟು ಫಲಿತಾಂಶವನ್ನು ಪ್ರಕಟಿಸುವುದಾಗಿ ಮೇಯರ್ ಪಟ್ಟು ಹಿಡಿದರು. ಆಗ, ಮೇಯರ್ ಫಲಿತಾಂಶವನ್ನು ಘೋಷಿಸಿದರೆ ನ್ಯಾಯಾಲಯಕ್ಕೆ ಹೋಗುವುದಾಗಿ ಬಿಜೆಪಿ ಹೇಳಿತು.

ಇದೇ ವಿಷಯದಲ್ಲಿ ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಆಪ್) ಮತ್ತು ಪ್ರತಿಪಕ್ಷ ಬಿಜೆಪಿಯ ಸದಸ್ಯರು ಮೇಜುಗಳನ್ನು ಏರಿ ಪರಸ್ಪರರ ವಿರುದ್ಧ ಘೋಷಣೆಗಳನ್ನು ಕೂಗಿದರು. ತಾವು ಮರು ಮತ ಎಣಿಕೆಗೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.

‘‘ಒಂದು ಬಣ ಮರು ಮತ ಎಣಿಕೆಗೆ ಸಿದ್ಧವಾಗಿದೆ, ಆದರೆ ಇನ್ನೊಂದು ಬಣ ಸಿದ್ಧವಾಗಿಲ್ಲ. ಹಾಗಾಗಿ, ನಾನು ಮರು ಮತ ಎಣಿಕೆ ಮಾಡುತ್ತಿಲ್ಲ. ಅಸಿಂಧು ಮತವನ್ನು ಹೊರಗಿಟ್ಟು ಫಲಿತಾಂಶವನ್ನು ಘೋಷಿಸಲಾಗುತ್ತದೆ’’ ಎಂದು ಮೇಯರ್ ಶೆಲ್ಲಿ ಒಬೆರಾಯ್ ಹೇಳಿದರು. ಅವರು ಎರಡು ದಿನಗಳ ಹಿಂದೆ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಆರು ಸದಸ್ಯರನ್ನು ಆರಿಸಲು ಪಾಲಿಕೆಯ ಚುನಾಯಿತ 250 ಕೌನ್ಸಿಲರ್ಗಳ ಪೈಕಿ ಕನಿಷ್ಠ 242 ಮಂದಿ ಮತದಾನ ಮಾಡಿದ್ದಾರೆ. ಪ್ರಭಾವಿ ಸ್ಥಾಯಿ ಸಮಿತಿಯು ಹಣವನ್ನು ಹೇಗೆ ಮತ್ತು ಯಾವ ಯೋಜನೆಗಳಿಗೆ ಬಳಸಬೇಕು ಎನ್ನುವುದನ್ನು ನಿರ್ಧರಿಸುತ್ತದೆ.

► ‘ಜೈ ಶ್ರೀರಾಮ್’, ‘ಅರವಿಂದ್ ಕೇಜ್ರಿವಾಲ್ ಜಿಂದಾಬಾದ್’!

ಒಂದು ಮತ ಅಸಿಂಧುವಾಗಿದೆ ಎಂದು ಮೇಯರ್ ಘೋಷಿಸಿದಾಗ, ಬಿಜೆಪಿ ಕೌನ್ಸಿಲರ್ಗಳು ಅವರ ವಿರುದ್ಧ ಹರಿಹಾಯ್ದರು. ‘‘ನೀವು ಸ್ಥಿಮಿತ ಕಳೆದುಕೊಂಡಿದ್ದೀರಿ’’ ಎಂಬುದಾಗಿ ಬಿಜೆಪಿ ಕೌನ್ಸಿಲರ್ಗಳು ಕೂಗಾಡಿದರು.

ಕೆಲವು ಬಿಜೆಪಿ ಕೌನ್ಸಿಲರ್ಗಳು ‘ಜೈ ಶ್ರೀರಾಮ್’ ಎಂಬ ಘೋಷಣೆಗಳನ್ನು ಕೂಗಿದರು ಮತ್ತು ಪ್ರಧಾನಿ ನರೇಂದ್ರ ಮೋದಿಗೆ ಜೈಕಾರ ಹಾಕಿದರು. ಪ್ರತಿಯಾಗಿ ಆಪ್ ಕೌನ್ಸಿಲರ್ಗಳೂ, ‘‘ಆಮ್ ಆದ್ಮಿ ಪಾರ್ಟಿ ಜಿಂದಾಬಾದ್, ಅರವಿಂದ್ ಕೇಜ್ರಿವಾಲ್ ಜಿಂದಾಬಾದ್’’ ಎಂಬ ಘೋಷಣೆಗಳನ್ನು ಕೂಗಿದರು.

Similar News