×
Ad

ಭ್ರಷ್ಟಾಚಾರದಿಂದ ದೇಶದ ಜನಸಾಮಾನ್ಯರು ಕಷ್ಟಪಡುತ್ತಿದ್ದಾರೆ: ಸುಪ್ರೀಂ ಕೋರ್ಟ್‌

Update: 2023-02-25 14:54 IST

ಹೊಸದಿಲ್ಲಿ: "ಭ್ರಷ್ಟಾಚಾರದಿಂದ ದೇಶದ ಜನಸಾಮಾನ್ಯರು ಕಷ್ಟಪಡುತ್ತಿದ್ದಾರೆ ಹಾಗೂ ಪ್ರತಿ ಹಂತದಲ್ಲೂ ಇದಕ್ಕೆ ಸಂಬಂಧಿತರನ್ನು  ಹೊಣೆಗಾರರನ್ನಾಗಿಸುವುದು ಅಗತ್ಯವಾಗಿದೆ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿರುವವರನ್ನು ಚುನಾವಣೆ ಸ್ಪರ್ಧಿಸುವುದರಿಂದ ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಮೇಲಿನಂತೆ ಅಭಿಪ್ರಾಯ ಪಟ್ಟಿದೆ.

ದೇಶವು ತನ್ನ ಗುರಿಯನ್ನು ಈಡೇರಿಸಲು ಸಾಧ್ಯವಾಗಬೇಕಾದರೆ ತನ್ನ ಮೂಲಭೂತ ಮೌಲ್ಯಗಳಿಗೆ ಹಿಂತಿರುಗುವ ಅಗತ್ಯವಿದೆ ಎಂದೂ ಉನ್ನತ ನ್ಯಾಯಾಲಯ ಹೇಳಿದೆ.

"ಭ್ರಷ್ಟಾಚಾರದಿಂದ ಜನಸಾಮಾನ್ಯ ಕಂಗಾಲಾಗಿದ್ದಾನೆ. ಯಾವುದೇ ಸರ್ಕಾರಿ ಕಚೇರಿಗೆ ಹೋದರೂ ಇದೇ ಸಮಸ್ಯೆ. ಖ್ಯಾತ ವಕೀಲ ನಾನಿ ಪಾಲ್ಖಿವಾಲ ತಮ್ಮ ಕೃತಿ ʼವಿ ದಿ ಪೀಪಲ್‌ʼನಲ್ಲಿ ಇದರ ಬಗ್ಗೆ ಬಗ್ಗೆ ಬರೆದಿದ್ದಾರೆ. ನಾವು ನಮ್ಮ ಮೂಲಭೂತ ಮೌಲ್ಯಗಳಿಗೆ ಮರಳಿದಾಗ ನಮ್ಮ ದೇಶ ಯಾವ ಉದ್ದೇಶಕ್ಕೆ ಶ್ರಮಿಸುತ್ತಿದೆಯೋ ಆ ಉದ್ದೇಶ ಈಡೇರಿಸಬಹುದು," ಎಂದು ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್‌ ಮತ್ತು ಬಿ ವಿ ನಾಗರತ್ನ ಅವರ ಪೀಠ ಹೇಳಿದೆ.

ಅರ್ಜಿಯನ್ನು ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ್ದರು. ಚುನಾವಣಾ ಆಯೋಗದ ಪರ ಹಾಜರಿದ್ದ ವಕೀಲ ಅಮಿತ್‌ ಶರ್ಮ ಮಾತನಾಡಿ, ರಾಜಕೀಯದ ಅಪರಾಧೀಕರಣದ ಬಗ್ಗೆ ಆಯೋಗ ಈಗಾಗಲೇ ಕಳವಳ ಹೊಂದಿದೆ. ಈಗಿನ ಕಾನೂನಿನಂತೆ ಅಪರಾಧ ಪ್ರಕರಣಗಳಲ್ಲಿ ದೋಷಿ ಎಂದು ಘೋಷಿತರಾಗಿ ಎರಡು ವರ್ಷಕ್ಕಿಂತ ಹೆಚ್ಚು ಕಾಲ ಜೈಲು ಶಿಕ್ಷೆ ಅನುಭವಿಸಿದವರು ಚುನಾವಣೆ ಸ್ಪರ್ಧಿಸುವಂತಿಲ್ಲ ಎಂದರು. ಪ್ರಕರಣ ಎದುರಿಸುತ್ತಿರುವವರು ಚುನಾವಣೆ ಸ್ಪರ್ಧಿಸದಂತೆ ಮಾಡಬೇಕು ಎಂಬ ಕೋರಿಕೆ ಕುರಿತಂತೆ ಸಂಸತ್ತು ನಿರ್ಧಾರ ಕೈಗೊಳ್ಳಬೇಕು ಎಂಬುದು ನಮ್ಮ ನಿಲುವು ಎಂದು ಅವರು ಹೇಳಿದರು.

ಇದನ್ನೂ ಓದಿ: ಇಬ್ಬರು ಯುವಕರ ಹತ್ಯೆ ಪ್ರಕರಣದ ಆರೋಪಿಗಳನ್ನು ಬೆಂಬಲಿಸಿ ನಡೆದ ಮಹಾಪಂಚಾಯತ್ ಬೆನ್ನಲ್ಲೇ‌ ಇನ್ನೆರಡು ದ್ವೇಷದ ದಾಳಿಗಳು

Similar News