ಇಬ್ಬರು ಯುವಕರ ಹತ್ಯೆ ಪ್ರಕರಣದ ಆರೋಪಿಗಳನ್ನು ಬೆಂಬಲಿಸಿ ನಡೆದ ಮಹಾಪಂಚಾಯತ್ ಬೆನ್ನಲ್ಲೇ ಇನ್ನೆರಡು ದ್ವೇಷದ ದಾಳಿಗಳು

ಹೊಸದಿಲ್ಲಿ: ರಾಜಸ್ಥಾನಿ ನಿವಾಸಿಗಳಾದ ಜುನೈದ್ ಮತ್ತು ನಾಸಿರ್ ಎಂಬವರ ಮೃತದೇಹಗಳು ಹರ್ಯಾಣಾದ ಭಿವಾನಿ ಜಿಲ್ಲೆಯಲ್ಲಿ ಎಸ್‌ಯುವಿಯೊಂದರಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಯುವಕರ ಹತ್ಯೆಯ ಆರೋಪಿಗಳ ಪರವಾಗಿ ಬಜರಂಗದಳವು ಪಲ್ವಾಲ್ ಮತ್ತು ಗುರುಗ್ರಾಮ್‌ನಲ್ಲಿ ಮುಸ್ಲಿಂ ವಿರೋಧಿ ಮಹಾಪಂಚಾಯತುಗಳು ನಡೆದ ಬೆನ್ನಿಗೇ ಇನ್ನೂ ಎರಡು ಶಂಕಿತ ದ್ವೇಷದ ದಾಳಿಗಳು ನಡೆದಿವೆ ಎಂದು ವರದಿಯಾಗಿದ್ದು ಈ ಘಟನೆಗಳಲ್ಲಿ ಮೂವರಿಗೆ ಗಾಯಗಳಾಗಿವೆ ಎಂದು thewire.in ವರದಿ ಮಾಡಿದೆ.
ಮೊದಲ ಪ್ರಕರಣದಲ್ಲಿ ಮಡೋಖ್ರ ಗ್ರಾಮದ ನಾದಿರ್ ಎಂಬಾತನ ಮೇಲೆ ಪಲ್ವಾಲ್ ಹತಿನ್ ಕ್ರಾಸಿಂಗ್‌ನಲ್ಲಿ ಆತ ಪ್ರಯಾಣಿಸುತ್ತಿದ್ದ ಆಟೋರಿಕ್ಷಾದ ಚಾಲಕನ ನೇತೃತ್ವದ ಗುಂಪು ಫೆಬ್ರವರಿ 22 ರ ಸಂಜೆ ದಾಳಿ ನಡೆಸಿತ್ತು. ಆಟೋ ಪ್ರಯಾಣಿಕ ಮುಸ್ಲಿಂ ಎಂದು ದೃಢೀಕರಿಸಿ ಈ ದಾಳಿ ನಡೆದು ನಂತರ ಅವನನ್ನು ಪೊದೆಗಳೆಡೆಯಲ್ಲಿ ಬಿಟ್ಟು ದುಷ್ಕರ್ಮಿಗಳು ಪರಾರಿಯಾಗಿದ್ದರು. ಮೊದಲು ಸಫ್ದರ್‌ಜಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಈತ ಈಗ ತನ್ನ ಊರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಎರಡನೇ ಘಟನೆಯಲ್ಲಿ ಜಾನುವಾರು ಖರೀದಿಸಲೆಂದು ತೆರಳುತ್ತಿದ್ದ ಸಲೀಂ ಮತ್ತು ಮುಜಾಹಿದ್ ಎಂಬವರನ್ನು ತಡೆದ ಜನರ ಒಂದು ಗುಂಪು ಮನ್ಪುರ್ ಗ್ರಾಮದಲ್ಲಿ ಹಲ್ಲೆ ನಡೆಸಿತ್ತು. ದಾಳಿಕೋರರು ಬಲಪಂಥಿಯ ಸಂಘಟನೆಯ ಕಾರ್ಯಕರ್ತರೆಂದು ಹೇಳಲಾಗಿದ್ದು ಘಟನೆ ಫೆಬ್ರವರಿ 23ರ ಬೆಳಿಗ್ಗೆ ನಡೆದಿದೆ. ಸಲೀಂಗೆ ಗಾಯವಾಗಿದ್ದರೆ ಮುಜಾಹಿದ್ ದಾಳಿಕೋರರಿಂದ ತಪ್ಪಿಸಿಕೊಂಡಿದ್ದ. ಈ ಘಟನೆ ಬಗ್ಗೆ ಮುಟ್ಕೈ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದರೂ ಇದು ದ್ವೇಷದ ಅಪರಾಧವಲ್ಲ ಬದಲು ಒಂದು ಸಣ್ಣ ಘಟನೆ ಎಂದು ಠಾಣಾಧಿಕಾರಿ ಹೇಳಿದ್ದಾರೆನ್ನಲಾಗಿದೆ.







