ಬಗೆಹರಿಯದ ಮೊಬೈಲ್ ನೆಟ್‌ವರ್ಕ್ ಸಮಸ್ಯೆ: ಹೊಸಂಗಡಿ ಭಾಗಿಮನೆ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ

Update: 2023-02-25 14:48 GMT

ಬೈಂದೂರು: ಮೊಬೈಲ್ ನೆಟ್‌ವರ್ಕ್ ಸಮಸ್ಯೆಯಿಂದ ಪರಿತಪಿಸುತ್ತಿರುವ ಹೊಸಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೈಂದೂರು ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ಭಾಗಿಮನೆ ಗ್ರಾಮದ ಗ್ರಾಮಸ್ಥರು ಈ ಬಾರಿ ಚುನಾವಣೆ ಬಹಿಷ್ಕಾರದ ಎಚ್ಚರಿಕೆಯನ್ನು ನೀಡಿದ್ದಾರೆ.

ಭಾಗಿಮನೆ ಪ್ರದೇಶದಲ್ಲಿ ಸುಮಾರು 70ಕ್ಕೂ ಅಧಿಕ ಮನೆಗಳಿದ್ದು ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ಪ್ರಮುಖ ಬೇಡಿಕೆಯಾಗಿರುವ ಮೊಬೈಲ್ ನೆಟ್‌ವರ್ಕ್ ಸಮಸ್ಯೆಯನ್ನು ನಿವಾರಿಸಲು ಗ್ರಾಪಂ, ಜಿಪಂ, ಶಾಸಕ, ಸಂಸದರ ಸಹಿತ ಬೇಡಿಕೆ ಇಟ್ಟಿದ್ದರೂ ಈವರೆಗೆ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಜನರ ಬವಣೆಯೂ ನೀಗಿಲ್ಲ. ಊರಿನ ನೆಟ್‌ವರ್ಕ್ ಸಮಸ್ಯೆಗೆ ಮುಕ್ತಿ ದೊರೆಯದ ಹಿನ್ನೆಲೆಯಲ್ಲಿ ಮುಂದಿನ ಯಾವುದೆ ಚುನಾವಣೆಯಲ್ಲಿ ಮತ ಚಲಾಯಿಸದಿರಲು ನಿರ್ಧರಿಸಿದ್ದಾರೆ.

ಚುನಾವಣಾ ಪ್ರಚಾರಕ್ಕೆ ಭಾಗಿಮನೆ ಊರಿಗೆ ರಾಜಕಾರಣಿಗಳಿಗೆ ನಿಷೇಧಿಸಿ, ಊರಿನ ಗ್ರಾಮಸ್ಥರು ಸೇರಿ ಚುನಾವಣಾ ಬಹಿಷ್ಕಾರಕ್ಕೆ ನಿರ್ಧರಿಸಿ ‘ನಾವು ಯಾವುದೇ ರಾಜಕೀಯ ಪಕ್ಷದ ಪರ ಹಾಗೂ ವಿರೋಧಿಗಳಲ್ಲ’ ಎಂಬ ವಾಕ್ಯದಡಿಯಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ. ಭಾಗಿಮನೆ ಗ್ರಾಮಸ್ಥರ ಹೆಸರಿನಲ್ಲಿ ಈ ಬ್ಯಾನರ್ ಅಳವಡಿಸಲಾಗಿದೆ.

‘ಯಾರಿಗಾದರೂ ರಾತ್ರಿ ವೇಳೆ ಆರೋಗ್ಯ ಸಮಸ್ಯೆ ಕಾಡಿ ಆಸ್ಪತ್ರೆಗೆ ಕರೆದು ಕೊಂಡು ಹೋಗಲು ಒಂದು ಆಟೋ ರಿಕ್ಷಾಕ್ಕೆ ಕರೆ ಮಾಡಿ ಬರಲು ಹೇಳ ಬೇಕೆಂದರೆ ಅಸಾಧ್ಯವಾದ ಪರಿಸ್ಥಿತಿ ನಮ್ಮ ಗ್ರಾಮದಲ್ಲಿದೆ. ಮೂಲಭೂತ ಸೌಕರ್ಯದಷ್ಟೆ ಅತಿ ಅವಶ್ಯಕವಾಗಿರುವ ನೆಟ್‌ವರ್ಕ್‌ನಿಂದ ವಂಚಿತರಾಗಿದ್ದು, ನಮ್ಮ ಊರಿನ ಬಹು ದಿನದ ಬೇಡಿಕೆಯಾಗಿರುವ ಈ ಸಮಸ್ಯೆಯನ್ನು ಸಂಬಂಧ ಪಟ್ಟ ಚುನಾಯಿತ ಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಿದರೂ ಯಾವುದೇ ಫಲ ದೊರೆಯದ ಹಿನ್ನೆಲೆಯಲ್ಲಿ ಚುನಾವಣೆ ಬಹಿಸ್ಕರಿಸಲು ತೀರ್ಮಾನ ಮಾಡಿದ್ದೇವೆ ಎಂದು ಸ್ಥಳೀಯರಾದ ಮಹೇಶ್ ರಾಜ್ ಶೆಟ್ಟಿ ತಿಳಿಸಿದ್ದಾರೆ.

ಪರಿಶಿಷ್ಟ ಪಂಗಡದ ಮರಾಠಿ ಜನಾಂಗದ ಮನೆಗಳಿರುವ ಹೊಸಂಗಡಿ ಗ್ರಾಮದ ಬಾಗೀಮನೆ ಎಂಬ ಪ್ರದೇಶದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಇಂದು ನಿನ್ನೆಯದಲ್ಲ. ಈ ವಿಷಯವಾಗಿ ಹಲವಾರು ಬಾರಿ ಶಾಸಕರು ಸಂಸದರು ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದು ಚುನಾವಣಾ ಸಮಯದಲ್ಲಿ ಈ ಭಾಗದ ಜನರ ಬೇಡಿಕೆ ಈಡೇರಿಸುವ ಭರವಸೆ ಇನ್ನೂ ಈಡೇರಿಲ್ಲ. ನೆಟ್‌ವರ್ಕ್ ಸಮಸ್ಯೆ ಊರನ್ನೇ ಕಾಡುತ್ತಿದೆ. ತುರ್ತು ಸಂದರ್ಭದಲ್ಲಿ ಮನೆಯಿಂದ ಹೊರ ಹೋಗಿ ದೂರದ ಗುಡ್ಡ ಹತ್ತಿ ಕರೆ ಮಾಡಬೇಕಾದ ಅನಿವಾರ್ಯತೆಯಿದ್ದು ಸಮಸ್ಯೆ ಬಗೆಹರಿಸದಿದ್ದರೆ ಈ ಬಾರಿ ಚುನಾವಣೆಗೆ ಮತ ಹಾಕಲು ಹೋಗದೆ ಮತ ಬಹಿಷ್ಕಾರ ಮಾಡುತ್ತೇವೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇನ್ನಾದರೂ ಈ ಜನರ ಬಗ್ಗೆ ಕಾಳಜಿ ವಹಿಸಿ ತುರ್ತುಕ್ರಮ ವಹಿಸಲಿ.
-ಕೆ.ಆನಂದ ಕಾರೂರು, ದಲಿತ ಮುಖಂಡರು,

Similar News