ಬಿಜೆಪಿ ದ್ವೇಷದ ಬೆಂಕಿಗೆ ತುಪ್ಪ ಸುರಿಯುತ್ತಿದೆ: ಸೋನಿಯಾ ಗಾಂಧಿ

Update: 2023-02-25 16:21 GMT

ನವರಾಯಪುರ, ಫೆ. 25: ಬಿಜೆಪಿ ದ್ವೇಷದ ಬೆಂಕಿಗೆ ತುಪ್ಪು ಸುರಿಯುತ್ತಿದೆ, ಅಲ್ಪ ಸಂಖ್ಯಾತರು, ಬುಡಕಟ್ಟು ಜನರು, ದಲಿತರು ಹಾಗೂ ಮಹಿಳೆಯನ್ನು ಗುರಿ ಮಾಡುತ್ತಿದೆ ಎಂದು ಕಾಂಗ್ರೆಸ್ನ ಮಾಜಿ ವರಿಷ್ಠೆ ಸೋನಿಯಾ ಗಾಂಧಿ ಶನಿವಾರ ಹೇಳಿದ್ದಾರೆ.

ಪ್ರಸಕ್ತ ಆಡಳಿತವನ್ನು ಹುರುಪಿನಿಂದ ನಿಭಾಯಿಸಬೇಕು ಹಾಗೂ ಪಕ್ಷದ ಸಂದೇಶವನ್ನು ಜನರಿಗೆ ತಲುಪಿಸಬೇಕು ಎಂದು ಅವರು ಕಾಂಗ್ರೆಸ್ ಕಾರ್ಯಕರ್ತರನ್ನು ಆಗ್ರಹಿಸಿದರು. ಇಲ್ಲಿ ನಡೆದ ಪಕ್ಷದ 85ನೇ ಪೂರ್ಣಾಧಿವೇಶದನಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಉದ್ಯಮಿ ಗೌತಮ್ ಅದಾನಿ ಅವರ ವ್ಯಾಪಾರ ಸಾಮ್ರಾಜ್ಯದ ವಿವಾದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. 

ನಿರ್ದಿಷ್ಟ ಉದ್ಯಮಿಗೆ ಅನುಕೂಲ ಮಾಡಿ ಕೊಡುವ ಮೂಲಕ ಸರಕಾರ ಆರ್ಥಿಕ ನಾಶಕ್ಕೆ ಕಾರಣವಾಗಿದೆ ಎಂದರು. ಈ ನಿರ್ಣಾಯಕ ಕಾಲಘಟ್ಟದಲ್ಲಿ ಕಾಂಗ್ರೆಸ್ ನ ಪ್ರತಿಯೋರ್ವ ಕಾರ್ಯಕರ್ತರು ಪಕ್ಷ ಹಾಗೂ ದೇಶದ ಬಗ್ಗೆ ವಿಶೇಷ ಜವಾಬ್ದಾರಿ ವಹಿಸಬೇಕು ಎಂದು ಅವರು ಹೇಳಿದರು. ಕಾಂಗ್ರೆಸ್ ಕೇವಲ ರಾಜಕೀಯ ಪಕ್ಷವಲ್ಲ. ಅದು ಎಲ್ಲಾ ಧರ್ಮ, ಜಾತಿ ಹಾಗೂ ಲಿಂಗಗಳ ಧ್ವನಿಯನ್ನು ಪ್ರತಿಬಿಂಬಿಸುತ್ತದೆ. ಅದು ಎಲ್ಲರ ಕನಸುಗಳನ್ನು ನನಸಾಗಿಸುತ್ತದೆ ಎಂದು ಅವರು ಪ್ರತಿಪಾದಿಸಿದರು. 

ಇಂದು ಕಾಂಗ್ರೆಸ್ ಹಾಗೂ ದೇಶಕ್ಕೆ ಸವಾಲಿನ ಕಾಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ದೇಶದ ಸಂಸ್ಥೆಗಳನ್ನು ವಶಕ್ಕೆ ತೆಗೆದುಕೊಂಡಿದೆ. ಇಂದಿನ ಪರಿಸ್ಥಿತಿ ತಾನು ಸಂಸತ್ತನ್ನು ಪ್ರವೇಶಿಸಿದ ಸಂದರ್ಭವನ್ನು ನೆನಪಿಸುತ್ತದೆ ಎಂದು ಅವರು ಹೇಳಿದರು. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವ ಗುರಿಯನ್ನು ಸಾಧಿಸುವಂತೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆ ನೀಡಿದರು.

Similar News