×
Ad

ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸುವ ನಮ್ಮ ಸಂಸ್ಥೆಗಳು ಎಲ್ಲಿ ದಾರಿ ತಪ್ಪಿವೆ?:ಸಿಜೆಐ ಚಂದ್ರಚೂಡ್

Update: 2023-02-25 22:02 IST

ಹೈದರಾಬಾದ್, ಫೆ. 25: ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳ ಬಗ್ಗೆ ಶನಿವಾರ ಕಳವಳ ವ್ಯಕ್ತಪಡಿಸಿರುವ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ಸಾವನ್ನಪ್ಪಿದ ವಿದ್ಯಾರ್ಥಿಗಳ ಕುಟುಂಬದ ನೋವು ತನಗೆ ಅರ್ಥವಾಗುತ್ತದೆ ಎಂದಿದ್ದಾರೆ. ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತೆ ಬಲವಂತಪಡಿಸುವ ನಮ್ಮ ಸಂಸ್ಥೆಗಳು ಎಲ್ಲಿ ದಾರಿ ತಪ್ಪಿವೆ ಎಂದು ತನಗೆ ಅಚ್ಚರಿಯಾಗುತ್ತದೆ ಎಂದು ಅವರು ಹೇಳಿದ್ದಾರೆ. ಐಐಟಿ ಬಾಂಬೆಯಲ್ಲಿ ಇತ್ತೀಚೆಗೆ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಉಲ್ಲೇಖಿಸಿದ ಅವರು, ಅಂಚಿನಲ್ಲಿರುವ ಸಮುದಾಯಗಳ ಸಂತ್ರಸ್ತರನ್ನು ಒಳಗೊಂಡ ಇಂತಹ ಘಟನೆಳು ಸಾಮಾನ್ಯವಾಗುತ್ತಿವೆ ಎಂದರು.

ಇಲ್ಲಿನ ದಿ ನ್ಯಾಷನಲ್ ಅಕಾಡೆಮಿ ಆಫ್ ಲೀಗಲ್ ಸ್ಟಡೀಸ್ ಆ್ಯಂಡ್ ರಿಸರ್ಚ್ (ಎನ್ಎಎಲ್ಎಸ್ಎಆರ್)ನಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಸಾಮಾಜಿಕ ಬದಲಾವಣೆಗೆ ಒತ್ತಾಯಿಸಲು ನ್ಯಾಯಾಲಯದ ಒಳಗೆ ಹಾಗೂ ಹೊರಗೆ ಸಮಾಜದೊಂದಿಗೆ ಸಂವಾದ ನಡೆಸುವಲ್ಲಿ ಭಾರತದ ನ್ಯಾಯಾಧೀಶರು ನಿರ್ಣಾಯಕ ಪಾತ್ರ ಹೊಂದಿದ್ದಾರೆ ಎಂದರು.

ನಾನು ಇತ್ತೀಚೆಗಷ್ಟೇ ಐಐಟಿ ಬಾಂಬೆಯಲ್ಲಿ ದಲಿತ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಕುರಿತು ಓದಿದೆ. ಕಳೆದ ವರ್ಷ ಒಡಿಶಾ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದಲ್ಲಿ ಆದಿವಾಸಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಇದು ನನಗೆ ನೆನಪಿಸಿತು ಎಂದು ಅವರು ಹೇಳಿದರು. ಈ ನಿದರ್ಶನಗಳಲ್ಲಿ ಅಂಚಿನಲ್ಲಿರುವ ಸಮುದಾಯಗಳ ವಿದ್ಯಾರ್ಥಿಗಳ ಆತ್ಮಹತ್ಯೆ ಸಾಮಾನ್ಯವಾಗಿವೆ. ಈ ಸಂಖ್ಯೆಗಳು ಕೇವಲ ಅಂಕಿ-ಅಂಶವಲ್ಲ. ಇವರ ಹಿಂದೆ ಸಾವಿರಾರು ವರ್ಷಗಳ ಹೋರಾಟದ ಕಥೆಗಳಿವೆ. ನಾವು ಈ ಸಮಸ್ಯೆಯನ್ನು ಪರಿಹರಿಸಲು ಬಯಸುವುದಾದರೆ, ಸಮಸ್ಯೆಯನ್ನು ಗುರುತಿಸುವುದು ಮೊದಲ ಹಂತ ಎಂದು ಭಾವಿಸುತ್ತೇನೆ ಎಂದು ಅವರು ಹೇಳಿದರು.

Similar News