ಜೈಲಿಗೆ ಹೋಗುತ್ತೇನೆಂಬ ಭಯ ನನಗಿಲ್ಲ: ಸಿಬಿಐ ವಿಚಾರಣೆಗೆ ತೆರಳುವ ಮೊದಲು ಮನೀಶ್ ಸಿಸೋಡಿಯಾ ಟ್ವೀಟ್

Update: 2023-02-26 04:49 GMT

ಹೊಸದಿಲ್ಲಿ: ದಿಲ್ಲಿ ಮದ್ಯ ನೀತಿ ಅನುಷ್ಟಾನ ಪ್ರಕರಣದಲ್ಲಿ ಸಿಬಿಐ ಮುಂದೆ ಹಾಜರಾಗುವ ಕೆಲವೇ ಗಂಟೆಗಳ ಮೊದಲು ದಿಲ್ಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ (Manish Sisodia )ಅವರು ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ನೆನಪಿಸಿಕೊಂಡಿದ್ದಾರೆ. ಜೈಲಿಗೆ ಹೋಗುತ್ತೇನೆಂಬ ಭಯ ನನಗಿಲ್ಲ ಎಂದು ಹೇಳಿದ್ದಾರೆ.

“ಇಂದು ಮತ್ತೆ ಸಿಬಿಐ ವಿಚಾರಣೆಗೆ ಹೋಗುತ್ತೇನೆ, ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ, ಲಕ್ಷಾಂತರ ಮಕ್ಕಳ ಪ್ರೀತಿ, ಕೋಟ್ಯಂತರ ದೇಶವಾಸಿಗಳ ಆಶೀರ್ವಾದ ನನ್ನ ಮೇಲಿದೆ.  ಕೆಲವು ತಿಂಗಳು ಜೈಲಿನಲ್ಲಿ ಕಳೆದರೂ ಪರವಾಗಿಲ್ಲ. ನಾನು ಭಗತ್ ಸಿಂಗ್ ಅವರ ಅನುಯಾಯಿ, ದೇಶಕ್ಕಾಗಿ ಭಗತ್ ಸಿಂಗ್ ಅವರನ್ನು ನೇಣಿಗೇರಿಸಲಾಯಿತು, ಇಂತಹ ಸುಳ್ಳು ಆರೋಪಗಳಿಗಾಗಿ ಜೈಲಿಗೆ ಹೋಗುವುದು ದೊಡ್ಡ ವಿಷಯವಲ್ಲ”ಎಂದು ಸಿಸೋಡಿಯಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಸಿಸೋಡಿಯಾ ಕಳೆದ ರವಿವಾರ ಕೇಂದ್ರ ತನಿಖಾ ಸಂಸ್ಥೆಯ ಮುಂದೆ ಹಾಜರಾಗಬೇಕಿತ್ತು, ಆದರೆ ಅವರು ಹೆಚ್ಚಿನ ಸಮಯವನ್ನು ಕೋರಿದ್ದರು. ಆಗ ಅವರು ದಿಲ್ಲಿಯ ಹಣಕಾಸು ಸಚಿವರಾಗಿ, ಅವರು ಬಜೆಟ್ ತಯಾರಿಯಲ್ಲಿ ನಿರತರಾಗಿದ್ದೇನೆ ಹಾಗೂ  ಈ ಹಂತದಲ್ಲಿ ತನ್ನ ಬಂಧನವು ಆ ಕೆಲಸವನ್ನು ಹಳಿ ತಪ್ಪಿಸುತ್ತದೆ ಎಂದು ಹೇಳಿದ್ದರು. ನಂತರ ಸಿಬಿಐ ಹೊಸದಾಗಿ ಸಮನ್ಸ್ ಜಾರಿ ಮಾಡಿದೆ.

ರಾಷ್ಟ್ರ ರಾಜಧಾನಿಯಲ್ಲಿ ಹೊಸ ಮದ್ಯ ಮಾರಾಟ ನೀತಿಯನ್ನು ತರುವಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿ ಸಿಸೋಡಿಯಾ ಅವರನ್ನು ಸಿಬಿಐ ತನಿಖೆ ನಡೆಸುತ್ತಿದೆ. ಸಿಬಿಐ ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ಸಿಸೋಡಿಯಾರನ್ನು ಇನ್ನೂ ಆರೋಪಿ ಎಂದು ಹೆಸರಿಸಲಾಗಿಲ್ಲ.

Similar News