×
Ad

ಜಾರ್ಖಂಡ್‌: ಪ್ರಮುಖ ಉಪಚುನಾವಣೆಗೆ ಮುಂಚಿತವಾಗಿ ಕಾಂಗ್ರೆಸ್ ನಾಯಕನ ಗುಂಡಿಕ್ಕಿ ಹತ್ಯೆ

Update: 2023-02-26 11:49 IST

ರಾಂಚಿ:  ರಾಮಗಢ ಜಿಲ್ಲೆಯಲ್ಲಿ ಉಪಚುನಾವಣೆಗೆ ಎರಡು ದಿನಗಳಿರುವಾಗ ಜಾರ್ಖಂಡ್‌ನ ರಾಮಗಢದಲ್ಲಿ 35 ವರ್ಷದ ಕಾಂಗ್ರೆಸ್ ಮುಖಂಡನನ್ನು ಕ್ರಿಮಿನಲ್‌ಗಳು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ರಾಜ್ಯ ರಾಜಧಾನಿ ರಾಂಚಿಯಿಂದ ಸುಮಾರು 50 ಕಿ.ಮೀ. ದೂರದಲ್ಲಿರುವ ಸೌಂದ ಪ್ರದೇಶದ ಭುರ್ಕುಂದ-ಪತ್ರಾಟು ರಸ್ತೆಯಲ್ಲಿರುವ ಹಳೆಯ ಪೆಟ್ರೋಲ್ ಪಂಪ್ ಬಳಿ ಶನಿವಾರ ರಾತ್ರಿ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೈಕ್ ನಲ್ಲಿ ಬಂದ ಮೂವರು ಕ್ರಿಮಿನಲ್ ಗಳಿಂದ ಹತ್ಯೆಯಾದ ಕಾಂಗ್ರೆಸ್ ಮುಖಂಡನನ್ನು ರಾಜ್ ಕಿಶೋರ್ ಬೌರಿ ಅಲಿಯಾಸ್ ಬಿಟ್ಕಾ ಬೌರಿ ಎಂದು ಗುರುತಿಸಲಾಗಿದೆ, ಅವರು ಬಾರ್ಕಗಾಂವ್‌ನ ಕಾಂಗ್ರೆಸ್ ಶಾಸಕ ಅಂಬಾ ಪ್ರಸಾದ್ ಅವರ ಪತ್ರಾಟು ಬ್ಲಾಕ್ ಪ್ರತಿನಿಧಿಯಾಗಿದ್ದರು.

ಬೌರಿ ಅವರನ್ನು ಭುರ್ಕುಂಡದ ಸಿಸಿಎಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು ಎಂದು ಅಧಿಕಾರಿ ಹೇಳಿದರು.

"ನಾವು ಕೊಲೆಯ ಕುರಿತು ತನಿಖೆ ಆರಂಭಿಸಿದ್ದೇವೆ ಹಾಗೂ ಕೃತ್ಯದಲ್ಲಿ ಭಾಗಿಯಾಗಿರುವ ಕ್ರಿಮಿನಲ್ ಗಳನ್ನು ಪತ್ತೆಹಚ್ಚಲು ಶೋಧ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ" ಎಂದು ಭುರ್ಕುಂದ ಪೊಲೀಸ್ ಠಾಣೆಯ ಉಸ್ತುವಾರಿ ಅಮಿತ್ ಕುಮಾರ್ ಹೇಳಿದ್ದಾರೆ.

ರಾಮಗಢ ವಿಧಾನಸಭಾ ಕ್ಷೇತ್ರಕ್ಕೆ ಫೆಬ್ರವರಿ 27 ರಂದು ಉಪಚುನಾವಣೆ ನಡೆಯಲಿದ್ದು, ಮಾರ್ಚ್ 2 ರಂದು ಮತ ಎಣಿಕೆ ನಡೆಯಲಿದೆ. ಈ ಚುನಾವಣೆಗೆ ಎರಡು ದಿನ ಮುಂಚಿತವಾಗಿ ಈ ಕೊಲೆ ನಡೆದಿದೆ.

Similar News