ಮಂಗಳೂರು| ಬಾಲಕನಿಗೆ ಥಳಿಸಿರುವ ಹಳೆಯ ವಿಡಿಯೋ ವೈರಲ್: ದ.ಕ. ಜಿಲ್ಲಾ ಎಸ್ಪಿ ಸ್ಪಷ್ಟನೆ

Update: 2023-02-26 07:21 GMT

ಮಂಗಳೂರು: ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕನಿಗೆ ಥಳಿಸಿದ ಘಟನೆಗೆ ಸಂಬಂಧಿಸಿದ ಹಳೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಎಸ್ಪಿ ಡಾ. ಅಮಟೆ ವಿಕ್ರಂ  ತಿಳಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮೂಲಕ ಸ್ಟಷ್ಟನೆ ನೀಡಿರುವ ಎಸ್ಪಿ ಡಾ. ಅಮಟೆ ವಿಕ್ರಂ, ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಗೆ ಸಂಬಂಧಿಸಿದಂತೆ ಬಾಲಕನೋರ್ವನಿಗೆ ಕೆಲ ಯುವಕರು ಥಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಘಟನೆಯು ದಿನಾಂಕ 27/10/2021ರಂದು ಸುಬ್ರಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ 77/2021 ರಂತೆ ಪ್ರಕರಣ ದಾಖಲಿಸಿಕೊಂಡು 10 ಜನ ಆರೋಪಿಗಳ ವಿರುದ್ಧ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಪ್ರಸ್ತುತ ಈ ಪ್ರಕರಣವು ನ್ಯಾಯಾಂಗ ವಿಚಾರಣೆಯಲ್ಲಿರುತ್ತದೆ. ಈ ರೀತಿಯ ಹಳೆಯ ವಿಡಿಯೋಗಳನ್ನು ಅದರ ಪೂರ್ವಾಪರತೆ ಪರಿಶೀಲನೆ ‌ಮಾಡದೇ ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

Similar News