ಕೊಲೆ ಪ್ರಕರಣದ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಹತ್ಯೆಯಲ್ಲಿ ಬಿಜೆಪಿ ಮುಖಂಡನ ಸಹೋದರನ ಹೆಸರು
ಹೊಸದಿಲ್ಲಿ: 2005ರಲ್ಲಿ ನಡೆದ ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಬಿಜೆಪಿ ನಾಯಕ ರಾಹೀಲ್ ಹಸನ್ ಸಹೋದರ ಗುಲಾಮ್ ಹೆಸರು ಕೇಳಿಬಂದಿದೆ ಎಂದು indiatoday ವರದಿ ಮಾಡಿದೆ.
ಗುಲಾಂನನ್ನು ಪಕ್ಷದಿಂದ ತೆಗೆದುಹಾಕಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಗಣೇಶ್ ಕೇಶರವಾಣಿ ಇಂಡಿಯಾ ಟುಡೇಗೆ ತಿಳಿಸಿದ್ದಾರೆ. ಆದರೆ, ಇನ್ನೂ ಅಧಿಕೃತವಾಗಿ ಪದಚ್ಯುತಿ ಪತ್ರ ನೀಡಿಲ್ಲ ಎಂದು ತಿಳಿದು ಬಂದಿದೆ.
ಶುಕ್ರವಾರ ಉಮೇಶ್ ಪಾಲ್ ಅವರ ನಿವಾಸದ ಮುಂದೆ ಏಳು ಮಂದಿ ದುಷ್ಕರ್ಮಿಗಳು ಬುಲೆಟ್ ಮತ್ತು ಕಚ್ಚಾ ಬಾಂಬ್‌ಗಳಿಂದ ದಾಳಿ ನಡೆಸಿದ್ದರು. ತೀವ್ರವಾಗಿ ಗಾಯಗೊಂಡ ಉಮೇಶ್ ಪಾಲ್ ಅವರನ್ನು ಸ್ವರೂಪ್ ರಾಣಿ ನೆಹರು ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ವೇಳೆ ಅವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ದಾಳಿಯಲ್ಲಿ ಪಾಲ್‌ನ ಒಬ್ಬ ಬಂದೂಕುಧಾರಿಯೂ ಮೃತಪಟ್ಟಿದ್ದ.
ಶವಪರೀಕ್ಷೆಯ ವರದಿಯ ಪ್ರಕಾರ, ಪಾಲ್ ಅವರ ದೇಹದ ಮೇಲೆ ಏಳು ಗುಂಡುಗಳು ಮತ್ತು 13 ಗಾಯದ ಗುರುತುಗಳಿವೆ. ಎಲ್ಲಾ ಬುಲೆಟ್‌ಗಳನ್ನು ಪಿಸ್ತೂಲ್‌ನಿಂದ ಹಾರಿಸಲಾಗಿದೆ ಎಂದು ವರದಿ ತಿಳಿಸಿದೆ. 2005ರಲ್ಲಿ ನಡೆದ ಬಹುಜನ ಸಮಾಜ ಪಕ್ಷದ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಆಗಿದ್ದ. ಕೊಲೆಯ ಪ್ರಮುಖ ಆರೋಪಿ, ರಾಜಕಾರಣಿ ಅತೀಕ್ ಅಹ್ಮದ್, ಪ್ರಸ್ತುತ ಗುಜರಾತ್‌ನ ಜೈಲಿನಲ್ಲಿದ್ದಾನೆ.