ನೋಟಿನಲ್ಲಿ ಗಾಂಧಿ ಫೋಟೊ ಬದಲು ಸಾವರ್ಕರ್‌ ಭಾವಚಿತ್ರ ಬಳಸುವಂತೆ ಹಿಂದೂ ಮಹಾಸಭಾ ಒತ್ತಾಯ

Update: 2023-02-26 13:28 GMT

ಮೀರತ್:‌ ಭಾರತದ ಕರೆನ್ಸಿ ನೋಟುಗಳಲ್ಲಿ ಮಹಾತ್ಮಾ ಗಾಂಧಿಯ (Mahatma Gandhi) ಫೋಟೊ ಬದಲು ಸಾವರ್ಕರ್‌ (Savarkar) ಅಥವಾ ಇತರ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರ ಅಳವಡಿಸುವಂತೆ ಅಖಿಲ ಭಾರತ ಹಿಂದೂ ಮಹಾಸಭಾ (All India Hindu Mahasabha) ಆಗ್ರಹಿಸಿದೆ. ಕೇಂದ್ರ ಸರಕಾರಕ್ಕೆ ಬರೆದ ಪತ್ರವೊಂದರಲ್ಲಿ, ಕರೆನ್ಸಿ ನೋಟುಗಳಲ್ಲಿನ ಗಾಂಧಿ ಫೋಟೊ ಬದಲಾಯಿಸುವಂತೆ ಹಾಗೂ ಪಾರ್ಲಿಮೆಂಟ್‌ ನ ರಸ್ತೆಯನ್ನು ಸಾವರ್ಕರ್‌ ಹೆಸರಿನಲ್ಲಿ ಮರುನಾಮಕರಣ ಮಾಡಬೇಕು ಎಂದು ಒತ್ತಾಯಿಸಿದೆ.

"ಇದು ಹಿಂದೂ ಮಹಾಸಭಾದ ಮಾಜಿ ಅಧ್ಯಕ್ಷರು ಹಾಗೂ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್‌ ಅವರಿಗೆ ಮೋದಿ ಸರಕಾರ ಸಲ್ಲಿಸುವ ನಿಜವಾದ ಗೌರವವಾಗಿದೆ" ಎಂದು ತನ್ನ ಪತ್ರದಲ್ಲಿ ಅದು ಉಲ್ಲೇಖಿಸಿದೆ. ರವಿವಾರದಂದು ಮೀರತ್‌ ನ ಶಾರದಾ ರಸ್ತೆಯಲ್ಲಿರುವ ತನ್ನ ಕಚೇರಿಯಲ್ಲಿ ಅಖಿಲಭಾರತ ಹಿಂದೂ ಮಹಾಸಭಾ ಸಾವರ್ಕರ್‌ ರ 58ನೇ ತಿಥಿಯನ್ನು ಪೂಜೆ ಮತ್ತು ಹವನದ ಮೂಲಕ ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಿಂದೂ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಪಂಡಿತ್ ಅಶೋಕ್ ಶರ್ಮಾ, ಸಾವರ್ಕರ್ ಒಬ್ಬ ಮಹಾನ್ ಐತಿಹಾಸಿಕ ಕ್ರಾಂತಿಕಾರಿ ವ್ಯಕ್ತಿಯಾಗಿದ್ದಾರೆ ಎಂದು ಕೊಂಡಾಡಿದರು.

Similar News