ಭಾರತದ ಯುಪಿಐ ವ್ಯವಸ್ಥೆಯು ಹಲವು ದೇಶಗಳನ್ನು ಆಕರ್ಷಿಸಿದೆ: 'ಮನ್ ಕಿ ಬಾತ್' ನಲ್ಲಿ ಪ್ರಧಾನಿ ಮೋದಿ

Update: 2023-02-26 17:22 GMT

ಹೊಸದಿಲ್ಲಿ: ವಿಶ್ವದ ಹಲವು ದೇಶಗಳು ಭಾರತದ ಯುಪಿಐ ವ್ಯವಸ್ಥೆಯಿಂದ ಆಕರ್ಷಿತಗೊಂಡಿವೆ ಎಂದು ದೇಶದ ಡಿಜಿಟಲ್ ಸಾಧನೆಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ತನ್ನ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ನ 98ನೇ ಆವೃತ್ತಿಯಲ್ಲಿ ಮಾತನಾಡುತ್ತಿದ್ದ ಮೋದಿ, ಯುಪಿಐ (ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್) ವ್ಯವಸ್ಥೆ ಮತ್ತು ಇ-ಸಂಜೀವನಿ ಆ್ಯಪ್ ಡಿಜಿಟಲ್ ಇಂಡಿಯಾದ ಶಕ್ತಿಗೆ ಉಜ್ವಲ ನಿದರ್ಶನಗಳಾಗಿವೆ ಎಂದರು. ವಿಶ್ವದ ಹಲವು ದೇಶಗಳು ಭಾರತದ ಯುಪಿಐ ವ್ಯವಸ್ಥೆಯಿಂದ ಆಕರ್ಷಿತಗೊಂಡಿವೆ. ಕೆಲವೇ ದಿನಗಳ ಹಿಂದೆ ಭಾರತ ಮತ್ತು ಸಿಂಗಾಪುರ್ ನಡುವೆ ಯುಪಿಐ-ಪೇನೌ ಲಿಂಕ್ ಆರಂಭಗೊಂಡಿದೆ. ಈಗ ಸಿಂಗಾಪುರ ಮತ್ತು ಭಾರತದಲ್ಲಿಯ ಜನರು ತಮ್ಮ ಆಯಾ ದೇಶಗಳಲ್ಲಿ ಮಾಡುವ ರೀತಿಯಲ್ಲಿಯೇ ತಮ್ಮ ಮೊಬೈಲ್ ಫೋನ್ಗಳ ಮೂಲಕ ಉಭಯ ರಾಷ್ಟ್ರಗಳ ನಡುವೆ ಹಣವನ್ನು ವರ್ಗಾಯಿಸಬಹುದು ಎಂದು ಹೇಳಿದರು.

‘ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಇ-ಸಂಜೀವನಿ ಆ್ಯಪ್ ಜನತೆಗೆ ದೊಡ್ಡ ವರದಾನವಾಗಿ ಸಾಬೀತಾಗಿದ್ದನ್ನು ನಾವು ನೋಡಿದ್ದೇವೆ’ ಎಂದು ಹೇಳಿದ ಮೋದಿ, ‘ಈ ಆ್ಯಪ್ ಮೂಲಕ ನೀವು ಇರುವಲ್ಲಿಂದಲೇ ಟೆಲಿಕನ್ಸಲ್ಟೇಷನ್ ಅಥವಾ ವೀಡಿಯೊ ಕಾನ್ಫರೆನ್ಸ್ ಮೂಲಕ ನಿಮ್ಮ ಅನಾರೋಗ್ಯದ ಕುರಿತು ವೈದ್ಯರೊಂದಿಗೆ ಸಮಾಲೋಚಿಸಬಹುದು. ಈವರೆಗೆ ಈ ಆ್ಯಪ್ ಅನ್ನು ಬಳಸುತ್ತಿರುವ ಟೆಲಿಕನ್ಸಲ್ಟಂಟ್ಗಳ ಸಂಖ್ಯೆ 10 ಕೋಟಿಯನ್ನು ದಾಟಿದೆ. ರೋಗಿ ಮತ್ತು ವೈದ್ಯರ ನಡುವಿನ ಈ ಅದ್ಭುತ ಬಾಂಧವ್ಯವು ದೊಡ್ಡ ಸಾಧನೆಯಾಗಿದೆ. ಈ ಸಾಧನೆಗಾಗಿ ಈ ಸೌಲಭ್ಯವನ್ನು ಬಳಸಿಕೊಂಡ ಎಲ್ಲ ವೈದ್ಯರು ಮತ್ತು ರೋಗಿಗಳನ್ನು ನಾನು ಅಭಿನಂದಿಸುತ್ತೇನೆ. ಭಾರತದ ಜನರು ಹೇಗೆ ತಂತ್ರಜ್ಞಾನವನ್ನು ತಮ್ಮ ಬದುಕಿನ ಭಾಗವನ್ನಾಗಿಸಿಕೊಂಡಿದ್ದಾರೆ ಎನ್ನುವುದಕ್ಕೆ ಇದು ಜ್ವಲಂತ ಉದಾಹರಣೆಯಾಗಿದೆ ’

ಕಾರ್ಯಕ್ರಮದಲ್ಲಿ ಸಿಕ್ಕಿಮ್ ನ ವೈದ್ಯ ಡಾ.ಮದನ ಮಣಿ ಅವರೊಂದಿಗೆ ಮಾತನಾಡಿದ ಮೋದಿ ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ನಿವಾಸಿ ಮದನ ಮೋಹನ ಅವರೊಂದಿಗೂ ಸಂವಾದಿಸಿದರು. ಈ ವೇಳೆ ಮದನ ಮೋಹನ ತಾನು ಓರ್ವ ರೋಗಿಯಾಗಿ ಇ-ಸಂಜೀವನಿ ಆ್ಯಪ್ನ ಮೂಲಕ ಟೆಲಿಕನ್ಸಲ್ಟೇಷನ್ನ ಪ್ರಯೋಜನವನ್ನು ಪಡೆದುಕೊಂಡ ಅನುಭವವನ್ನು ಹಂಚಿಕೊಂಡರು. ಭಾರತೀಯ ಆಟಿಕೆಗಳು ಮತ್ತು ಕಥೆ ಹೇಳುವ ರೂಪಗಳ ಕುರಿತೂ ಪ್ರಧಾನಿ ಮಾತನಾಡಿದರು.

ಭಾರತೀಯರು ‘ಮನ್ ಕಿ ಬಾತ್ ’ಅನ್ನು ಸಾರ್ವಜನಿಕ ಸಹಭಾಗಿತ್ವದ ಅಭಿವ್ಯಕ್ತಿಯನ್ನಾಗಿ ಅದ್ಭುತ ವೇದಿಕೆಯನ್ನಾಗಿ ಮಾಡಿದ್ದಾರೆ. ‘ಮನ್ ಕಿ ಬಾತ್ ’ನಲ್ಲಿ ನಾನು ಭಾರತೀಯ ಆಟಿಕೆಗಳ ಬಗ್ಗೆ ಪ್ರಸ್ತಾಪಿಸಿದಾಗ ನನ್ನ ಸಹಪ್ರಜೆಗಳು ಅದನ್ನು ಪ್ರಚಾರ ಮಾಡಿದ್ದರು. ಇಂದು ಭಾರತೀಯ ಆಟಕೆಗಳು ಎಷ್ಟೊಂದು ಹುಚ್ಚೆಬ್ಬಿಸಿವೆಯೆಂದರೆ ವಿದೇಶಗಳಲ್ಲಿಯೂ ಅವುಗಳಿಗೆ ಬೇಡಿಕೆ ಹೆಚ್ಚಾಗಿದೆ. ನಾನು ‘ಮನ್ ಕಿ ಬಾತ್’ನಲ್ಲಿ ಕಥೆ ಹೇಳುವ ಭಾರತೀಯ ಪ್ರಕಾರದ ಬಗ್ಗೆ ಮಾತನಾಡಿದಾಗ ಅದರ ಖ್ಯಾತಿಯು ದೂರದೂರಕ್ಕೂ ವಿಸ್ತರಿಸಿತ್ತು. ಜನರು ಭಾರತೀಯ ಕಥೆ ಹೇಳುವ ಪ್ರಕಾರಕ್ಕೆ ಹೆಚ್ಚೆಚ್ಚು ಆಕರ್ಷಿತರಾಗತೊಡಗಿದ್ದರು 

- ಪ್ರಧಾನಿ ನರೇಂದ್ರ ಮೋದಿ 

Similar News