ಸೋನಿಯಾ ಗಾಂಧಿ ನಿವೃತ್ತರಾಗುತ್ತಿಲ್ಲ: ಕಾಂಗ್ರೆಸ್ ನಾಯಕಿ ಅಲ್ಕಾ ಲಾಂಬಾ

Update: 2023-02-26 17:56 GMT

ರಾಯಪುರ: ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರು ರಾಜಕೀಯದಿಂದ ನಿವೃತ್ತರಾಗುತ್ತಿಲ್ಲ ಎಂದು ಪಕ್ಷದ ನಾಯಕಿ ಅಲ್ಕಾ ಲಾಂಬಾ ಅವರು ರವಿವಾರ ಇಲ್ಲಿ ಹೇಳಿದರು. ಶನಿವಾರ ಇಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಪೂರ್ಣಾಧಿವೇಶನದಲ್ಲಿ ಮಾತನಾಡಿದ ಸಂದರ್ಭ 76ರ ಹರೆಯದ ಸೋನಿಯಾ, ಭಾರತ ಜೋಡೊ ಯಾತ್ರೆಯೊಂದಿಗೆ ತನ್ನ ‘ರಾಜಕೀಯ ಇನಿಂಗ್ಸ್ ’ ಕೊನೆಗೊಳ್ಳಬಹುದು ಎನ್ನುವುದು ತನಗೆ ತೃಪ್ತಿಯ ವಿಷಯವಾಗಿದೆ ಎಂದು ಹೇಳಿದ್ದರು.

ತಾನು ರಾಜಕೀಯದಿಂದ ನಿವೃತ್ತಿ ಪಡೆಯುತ್ತಿಲ್ಲ ಎಂದು ಸೋನಿಯಾ ಗಾಂಧಿ ಸ್ಪಷ್ಟಪಡಿಸಿದ್ದಾರೆ ಮತ್ತು ಅವರು ಪಕ್ಷಕ್ಕೆ ಮಾರ್ಗದರ್ಶಕ ಶಕ್ತಿಯಾಗಿ ಮುಂದುವರಿಯಲಿದ್ದಾರೆ ಎಂದು ಲಾಂಬಾ ಕಾಂಗ್ರೆಸ್ ಪೂರ್ಣಾಧಿವೇಶನದಲ್ಲಿ ತನ್ನ ಭಾಷಣದಲ್ಲಿ ಹೇಳಿದರು. ಈ ವೇಳೆ ಸಭಿಕರಲ್ಲಿ ಉಪಸ್ಥಿತರಿದ್ದ ಸೋನಿಯಾ ಸಮ್ಮತಿಸೂಚಕವಾಗಿ ಮುಗುಳ್ನಕ್ಕಿದ್ದು ಕಂಡುಬಂದಿತು.

ರಾಜಕೀಯ ಇನಿಂಗ್ಸ್ ಮುಕ್ತಾಯದ ಕುರಿತು ಸೋನಿಯಾ ಹೇಳಿಕೆಯು ಅವರು ಉತ್ತರ ಪ್ರದೇಶದ ರಾಯಬರೇಲಿಯಿಂದ ಮತ್ತೊಮ್ಮೆ ಲೋಕಸಭೆಗೆ ಸ್ಪರ್ಧಿಸುತ್ತಾರೆಯೇ ಅಥವಾ ತನ್ನ ಕ್ಷೇತ್ರವನ್ನು ಪುತ್ರಿ ಪ್ರಿಯಾಂಕಾ ಗಾಂಧಿ ವಾದ್ರಾರಿಗೆ ಬಿಟ್ಟು ಕೊಡುತ್ತಾರೆಯೇ ಎಂಬ ಬಗ್ಗೆ ವ್ಯಾಪಕ ಊಹಾಪೋಹಗಳಿಗೆ ಕಾರಣವಾಗಿತ್ತು.

Similar News