ಮಾನವ ಮಲ ಹೊರುವಿಕೆ ನಿಲ್ಲಿಸಲು ಏನು ಮಾಡಿದ್ದೀರಿ?: ಕೇಂದ್ರ ಸರಕಾರವನ್ನು ಪ್ರಶ್ನಿಸಿದ ಸುಪ್ರೀಂ ಕೋರ್ಟ್

Update: 2023-02-26 17:56 GMT

ಹೊಸದಿಲ್ಲಿ: ಮಾನವ ಮಲ ಹೊರುವಿಕೆಗೆ ಅಂತ್ಯ ಹಾಡಲು ಹಾಗೂ ಈ ‘ಅಮಾನವೀಯ ಪದ್ಧತಿ’ಯಲ್ಲಿ ಮುಂದಿನ ಜನಾಂಗ ತೊಡಗಿಕೊಳ್ಳುವುದನ್ನು ತಡೆಯಲು ಸುಮಾರು 10 ವರ್ಷಗಳ ಹಿಂದಿನ ತನ್ನ ತೀರ್ಪನ್ನು ಅನುಷ್ಠಾನಗೊಳಿಸಲು ತೆಗೆದುಕೊಂಡ ಕ್ರಮಗಳ ಕುರಿತು ದಾಖಲೆಗಳನ್ನು 6 ವಾರಗಳ ಒಳಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ನಿರ್ದೇಶಿಸಿದೆ.

ಮಾನವ ಮಲ ಹೊರುವ ಉದ್ಯೋಗ ಹಾಗೂ ಶುಷ್ಕ ಶೌಚಾಲಯ ಕಾಯ್ದೆ (ನಿಷೇಧ)1993, ಉದ್ಯೋಗವಾಗಿ ಮಾನವ ಮಲ ಹೊರುವಿಕೆ ನಿಷೇಧ ಹಾಗೂ ಅವರ ಪುನರ್ವಸತಿ ಕಾಯ್ದೆ 2013 ಅನ್ನು ಪರಿಚಯಿಸಿದ ಹೊರತಾಗಿಯೂ ಮಾನವ ಮಲ ಹೊರುವಿಕೆ ಹಾಗೂ ಒಳಚರಂಡಿಗಳಲ್ಲಿ ಸಿಲುಕಿ ಜನರು ಸಾವನ್ನಪ್ಪಿರುವುದು ಮುಂದುವರಿದಿದೆ ಎಂಬ ವಾಸ್ತವವನ್ನು ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಅವರ ನೇತೃತ್ವದ ಪೀಠ ಗಮನಕ್ಕೆ ತೆಗೆದುಕೊಂಡಿತು. 

2014ರ ತೀರ್ಪನ್ನು ಅನುಸರಿಸಲು ಕೇಂದ್ರ ಸರಕಾರ ತೆಗೆದುಕೊಂಡ ಕ್ರಮಗಳ ವಿವರ ಕೋರಿ ಡಾ. ಬಲರಾಂ ಸಿಂಗ್ ಎಂಬವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಭಟ್ ಅವರು ವಿಚಾರಣೆ ನಡೆಸಿದರು. ಈ ಪ್ರಕರಣದಲ್ಲಿ ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಸಚಿವಾಲಯ, ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ, ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗ ಪ್ರತಿವಾದಿಯಾಗುವಂತೆ ನ್ಯಾಯಾಲಯ ಆಗ್ರಹಿಸಿತು. ನ್ಯಾಯವಾದಿ ಕೆ. ಪರಮೇಶ್ವರ್ ಅವರನ್ನು ಆ್ಯಮಿಕಸ್ ಕ್ಯೂರಿಯಾಗಿ ನ್ಯಾಯಾಲಯ ನೇಮಿಸಿತು. ಅಲ್ಲದೆ, ಈ ಕುರಿತು 6 ವಾರಗಳಲ್ಲಿ ವರದಿ ಸಲ್ಲಿಸುವಂತೆ ಸಾಮಾಜಿಕ ನ್ಯಾಯ ಸಚಿವಾಲಯಕ್ಕೆ ನಿರ್ದೇಶಿಸಿತು.

Similar News