ಕೋವಿಡ್-19 ಪ್ರಯೋಗಾಲಯ ಸೋರಿಕೆಯಿಂದ ಹುಟ್ಟಿರುವ ಸಾಧ್ಯತೆಯಿದೆ: ಅಮೆರಿಕ
ವಾಷಿಂಗ್ಟನ್: ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಕೋವಿಡ್-19 (Covid-19) ಸಾಂಕ್ರಾಮಿಕ ಹುಟ್ಟಿಕೊಂಡದ್ದು, ಪ್ರಯೋಗಾಲಯದ ಸೋರಿಕೆಯಿಂದ ಎಂಬ ಅಭಿಪ್ರಾಯಕ್ಕೆ ಅಮೆರಿಕದ ಇಂಧನ ಇಲಾಖೆ ಬಂದಿದೆ ಎಂದು ದ ವಾಲ್‌ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಶ್ವೇತಭವನ ಹಾಗೂ ಅಮೆರಿಕ ಕಾಂಗ್ರೆಸ್ ಪ್ರಮುಖ ಸದಸ್ಯರಿಗೆ ನೀಡಲಾಗಿರುವ ವರ್ಗೀಕೃತ ಗುಪ್ತಚರ ವರದಿಯ ಆಧಾರದಲ್ಲಿ ಈ ವರದಿ ಸಿದ್ಧಪಡಿಸಲಾಗಿದೆ.
ಚೀನಾದ ವೂಹಾನ್‌ನಲ್ಲಿ 2019ರ ನವೆಂಬರ್‌ನಲ್ಲಿಕೋವಿಡ್-19 ವೈರಸ್ ಮೊದಲ ಬಾರಿಗೆ ಪತ್ತೆಯಾಗಿತ್ತು ಎಂದು 2021ರ ಅಮೆರಿಕ ಗುಪ್ತಚರ ವರದಿ ಹೇಳಿದೆ. ಈ ಸಾಂಕ್ರಾಮಿಕದ ಉಗಮದ ಬಗ್ಗೆ ಶಿಕ್ಷಣ ತಜ್ಞರು, ಗುಪ್ತಚರ ತಜ್ಞರು ಹಾಗೂ ಜನಪ್ರತಿನಿಧಿಗಳಲ್ಲಿ ವ್ಯಾಪಕ ಚರ್ಚೆ ನಡೆದಿತ್ತು.
ವೈರಸ್ ಹೇಗೆ ಹುಟ್ಟಿಕೊಂಡಿತು ಎಂಬ ಬಗ್ಗೆ ಈ ಹಿಂದೆ ಅಮೆರಿಕದ ಇಂಧನ ಇಲಾಖೆ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿರಲಿಲ್ಲ. ಆದರೆ 2021ರ ಪರಿಷ್ಕೃತ ವರದಿಯಲ್ಲಿ ರಾಷ್ಟ್ರೀಯ ಗುಪ್ತಚರ ನಿರ್ದೇಶಕ ಅವ್ರಿಲ್ ಹೇನ್ಸ್ ಇದನ್ನು ದೃಢಪಡಿಸಿದ್ದರು. ಚೀನಾದ ಪ್ರಯೋಗಾಲಯದಲ್ಲಿ ಸಂಭವಿಸಿದ ದುರಂತದಿಂದ ವೈರಸ್ ಹರಡಿದೆ ಎಂದು ಫೆಡರಲ್ ಬ್ಯೂರೊ ಆಫ್ ಇನ್‌ವೆಸ್ಟಿಗೇಶನ್ ಅಭಿಪ್ರಾಯಪಟ್ಟಿದ್ದು, ಇದನ್ನು ಇದೀಗ ಇಂಧನ ಇಲಾಖೆ ಕೂಡಾ ಬೆಂಬಲಿಸಿದೆ. ಇತರ ನಾಲ್ಕು ಏಜೆನ್ಸಿಗಳು ಇದು ನೈಸರ್ಗಿಕ ಹರಡುವಿಕೆ ಎಂದು ಅಭಿಪ್ರಾಯಪಟ್ಟಿದ್ದರೆ, ಎರಡು ಇಲಾಖೆಗಳು ಯಾವುದೇ ನಿರ್ಧಾರಕ್ಕೆ ಬಂದಿಲ್ಲ.
ಜೈವಿಕ ಸಂಶೋಧನೆ ಒಳಗೊಂಡಂತೆ ಅತ್ಯಾಧುನಿಕ ಸಂಶೋಧನೆಗಳನ್ನು ನಡೆಸುತ್ತಿರುವ ಪ್ರಯೊಗಾಲಯಗಳ ಜಾಲ ಹಾಗೂ ಹಲವು ಮಂದಿ ವೈಜ್ಞಾನಿಕ ತಜ್ಞರನ್ನು ಹೊಂದಿರುವ ಇಂಧನ ಇಲಾಖೆಯ ನಿರ್ಧಾರ ಮಹತ್ವದ್ದಾಗಿದೆ.
ಇದನ್ನೂ ಓದಿ: ನಳಿನ್ ರ ಚುನಾವಣೆಗೆ ಟಿಪ್ಪು-ಸಾವರ್ಕರ್ ಚರ್ಚೆ ನಾನು ಒಪ್ಪಲ್ಲ: ಯಡಿಯೂರಪ್ಪ