2.85 ಲಕ್ಷ ಪ್ರಕರಣಗಳ ಬಾಕಿಯೊಂದಿಗೆ ಸರಕಾರದಲ್ಲಿ ಅತ್ಯಂತ ದೊಡ್ಡ ಕಕ್ಷಿದಾರರಾಗಿರುವ ಕೇಂದ್ರ ಸಚಿವಾಲಯಗಳು
ಹೊಸದಿಲ್ಲಿ: ನ್ಯಾಯಾಲಯಗಳಲ್ಲಿ ಬಾಕಿಯುಳಿದಿರುವ ಪ್ರಕರಣಗಳಲ್ಲಿ ಕೇಂದ್ರ ಸಚಿವಾಲಯಗಳ ಪೈಕಿ ಹಣಕಾಸು ಸಚಿವಾಲಯವು (Union finance ministry) ಅತ್ಯಂತ ದೊಡ್ಡ ಕಕ್ಷಿದಾರನಾಗಿದ್ದು, ಕಾರ್ಮಿಕ ಮತ್ತು ರೈಲ್ವೆ ಸಚಿವಾಲಯಗಳು ನಂತರದ ಸ್ಥಾನಗಳಲ್ಲಿವೆ ಎಂದು ಕಾನೂನು ಮತ್ತು ನ್ಯಾಯ ಸಚಿವಾಲಯವು ಕಳೆದ ವಾರ ಸಂಸದೀಯ ಸಮಿತಿಯೊಂದಕ್ಕೆ ಮಾಹಿತಿ ನೀಡಿದೆ. 2022 ಡಿ.31ಕ್ಕೆ ಇದ್ದಂತೆ ವಿವಿಧ ಉಚ್ಚ ನ್ಯಾಯಾಲಯಗಳು,ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳಲ್ಲಿ ಹಣಕಾಸು ಸಚಿವಾಲಯವು ದಾಖಲಿಸಿರುವ 64,270 ದಾವೆಗಳು ಬಾಕಿಯಿದ್ದರೆ,ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ 38,757 ಹಾಗೂ ರೈಲ್ವೆ ಸಚಿವಾಲಯದ 38,110 ದಾವೆಗಳು ಬಾಕಿಯಿದ್ದವು ಎಂದು theprint.in ವರದಿ ಮಾಡಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಬಾಕಿ ಪ್ರಕರಣಗಳನ್ನು ಹೊಂದಿರುವ ಸಚಿವಾಲಯಗಳಲ್ಲಿ ರಕ್ಷಣೆ (23,046), ಗೃಹ (20,022),ಗ್ರಾಹಕ ವ್ಯವಹಾರಗಳು,ಆಹಾರ ಮತ್ತು ನಾಗರಿಕ ಪೂರೈಕೆ (15,766) ಮತ್ತು ಶಿಕ್ಷಣ (12,762) ಸಚಿವಾಲಯಗಳು ಸೇರಿವೆ.
ಒಟ್ಟಾರೆಯಾಗಿ 57 ಕೇಂದ್ರ ಸಚಿವಾಲಯಗಳು ಮತ್ತು ಇಲಾಖೆಗಳ 2,85,533 ಪ್ರಕರಣಗಳು ಉಚ್ಚ ನ್ಯಾಯಾಲಯಗಳು,ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳಲ್ಲಿ ಬಾಕಿಯುಳಿದುಕೊಂಡಿವೆ. 2012ರಿಂದ 2023 ಜ.31ರವರೆಗೆ ಕಳೆದ ಹತ್ತು ವರ್ಷಗಳಲ್ಲಿ ವಿವಿಧ ನ್ಯಾಯಾಲಯಗಳು ಮತ್ತು ನ್ಯಾಯಾಧಿಕರಣಗಳಲ್ಲಿ ಸರಕಾರಿ ವಕೀಲರು/ಪ್ಯಾನೆಲ್ ವಕೀಲರ ಶುಲ್ಕವಾಗಿ 511.1 ಕೋಟಿ ರೂ.ಗಳ ವ್ಯಾಜ್ಯ ವೆಚ್ಚವನ್ನು ಸರಕಾರವು ಭರಿಸಿದೆ.
ಈ ಅಂಕಿಅಂಶಗಳು ಕಾನೂನು ಸಚಿವಾಲಯದ ಅಧೀನದ ಕಾನೂನು ವ್ಯವಹಾರಗಳ ಇಲಾಖೆಯು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯ ಕುರಿತು ಸಂಸದೀಯ ಸ್ಥಾಯಿ ಸಮಿತಿಗೆ ಸಲ್ಲಿಸಿರುವ ಮಾಹಿತಿಯ ಭಾಗವಾಗಿವೆ. ಸಂಸದೀಯ ಸಮಿತಿಯು ಸಚಿವಾಲಯದ 2023-24ನೇ ಸಾಲಿನ ವೆಚ್ಚಕ್ಕಾಗಿ ಅದಕ್ಕೆ ಅನುದಾನಗಳ ಬೇಡಿಕೆಗಳನ್ನು ಪರಿಶೀಲಿಸುತ್ತಿದೆ.
ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿಯಿರುವ ಪ್ರಕರಣಗಳು ಇದರಲ್ಲಿ ಸೇರಿಲ್ಲವಾದ್ದರಿಂದ ಪ್ರಕರಣಗಳ ಸಂಖ್ಯೆ ಇನ್ನೂ ಹೆಚ್ಚಿರಬಹುದು ಎಂದು ಕಾನೂನು ತಜ್ಞರು ಹೇಳಿದ್ದಾರೆ. ಖಚಿತವಾಗಿ ಹೇಳುವುದಾದರೆ ಈ ಎಲ್ಲ ಪ್ರಕರಣಗಳಲ್ಲಿ ಸರಕಾರವು ಅರ್ಜಿದಾರ ಅಲ್ಲದಿರಬಹುದು,ಆದರೆ ಹೆಚ್ಚಿನ ಪ್ರಕರಣಗಳಲ್ಲಿ ಅದು ಪ್ರತಿವಾದಿ ಆಗಿರಬಹುದು.
ಬಾಕಿಯುಳಿದಿರುವ ಒಟ್ಟು 2,85,553 ಪ್ರಕರಣಗಳಲ್ಲಿ ಸರ್ವೋಚ್ಚ ನ್ಯಾಯಾಲಯಗಳಲ್ಲಿಯ 2,27,444 ಹಾಗೂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳಲ್ಲಿ 58,109 ಪ್ರಕರಣಗಳು ಸೇರಿವೆ.
ಮಹಾರಾಷ್ಟ್ರದ ನ್ಯಾಯಾಲಯಗಳಲ್ಲಿ ಅತ್ಯಂತ ಹೆಚ್ಚಿನ ಸಂಖ್ಯೆಯ (29,870) ಪ್ರಕರಣಗಳು ಬಾಕಿಯಿದ್ದರೆ,ದಿಲ್ಲಿ (27,124),ಉತ್ತರ ಪ್ರದೇಶ (26,233),ತಮಿಳುನಾಡು (24,490) ಮತ್ತು ಪಶ್ಚಿಮ ಬಂಗಾಳ (23,555)ಗಳಿವೆ.
ವಿವಿಧ ನ್ಯಾಯಾಲಯಗಳಲ್ಲಿ ಬಾಕಿಯಿರುವ ನಾಲ್ಕು ಕೋಟಿಗೂ ಅಧಿಕ ಪ್ರಕರಣಗಳಲ್ಲಿ ಸರಕಾರವು ಸುಮಾರು ಶೇ.50ರಷ್ಟು ಪಾಲನ್ನು ಹೊಂದಿದ್ದು,ಕಾರ್ಯಾಂಗ ಮತ್ತು ಶಾಸಕಾಂಗಗಳ ವಿವಿಧ ವಿಭಾಗಗಳ ಕಾರ್ಯನಿರ್ವಹಣೆ ಕೊರತೆಯು ಸರಕಾರವು ಅತ್ಯಂತ ದೊಡ್ಡ ಕಕ್ಷಿದಾರನಾಗಲು ಕಾರಣವೆಂದು ಹೇಳಲಾಗಿದೆ. ಹೆಚ್ಚಿನ ಸಂಖ್ಯೆಯ ಪ್ರಕರಣಗಳಲ್ಲಿ ತನ್ನ ಕೊಡುಗೆಯ ಅರಿವಿರುವ ಕೇಂದ್ರವು ಸರಕಾರದ ಪ್ರಕರಣಗಳ ಸಂಖ್ಯೆಯನ್ನು ತಗ್ಗಿಸಲು ರಾಷ್ಟ್ರೀಯ ದಾವೆ ನೀತಿಯನ್ನು ತಂದಿದೆ. ಆದರೆ ಫಲಿತಾಂಶವು ಭರವಸೆದಾಯಕವಾಗಿಲ್ಲ, ದಾವೆಗಳ ಸಂಖ್ಯೆಯನ್ನು ತಗ್ಗಿಸಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳದ್ದಕ್ಕಾಗಿ ಕೇಂದ್ರ ಮತ್ತು ರಾಜ್ಯಗಳು ಟೀಕೆಗಳಿಗೆ ಗುರಿಯಾಗುತ್ತಲೇ ಇವೆ.