×
Ad

ನಿಮಗೆ ಗೊತ್ತೇ? ದಾಳಿಂಬೆ ವಯಸ್ಸಾಗುವುದನ್ನು ನಿಧಾನಿಸುತ್ತದೆ, ಹೃದಯವನ್ನು ಬಲಗೊಳಿಸುತ್ತದೆ

Update: 2023-02-27 19:26 IST

ದಾಳಿಂಬೆಯನ್ನು ತಿನ್ನುವುದರಿಂದ ಶರೀರದಲ್ಲಿ ರೋಗ ನಿರೋಧಕ ಶಕ್ತಿ ಮತ್ತು ಕೆಂಪು ರಕ್ತಕಣಗಳು ಹೆಚ್ಚುತ್ತವೆ, ಹೃದಯದ ಆರೋಗ್ಯವು ಉತ್ತಮಗೊಳ್ಳುತ್ತದೆ ಮತ್ತು ಮಧುಮೇಹವು ನಿಯಂತ್ರಣದಲ್ಲಿರುತ್ತದೆ. ಇದು ದಾಳಿಂಬೆಯನ್ನು ಮಹತ್ವದ ಆಹಾರವನ್ನಾಗಿಸಿದೆ. ಆದರೆ ದಾಳಿಂಬೆಯು ವಯಸ್ಸಾಗುವುದನ್ನು ನಿಧಾನಿಸುತ್ತದೆ, ಹೃದಯವನ್ನು ಬಲಗೊಳಿಸುತ್ತದೆ ಮತ್ತು ಎಲ್ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ ಅನ್ನು ತಗ್ಗಿಸುತ್ತದೆ ಎನ್ನುವುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿವೆ. 

ಪ್ರಬಲ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವ ಕೆಲವೇ ಸೂಪರ್ಫುಡ್ ಗಳಲ್ಲಿ ದಾಳಿಂಬೆಯು ಒಂದಾಗಿದೆ. ಹೆಚ್ಚಿನವರಿಗೆ ಗೊತ್ತಿಲ್ಲದಿರಬಹುದು, ಹಸಿರು ಚಹಾ ಅಥವಾ ರೆಡ್ವೈನ್ ಗೆ ಹೋಲಿಸಿದರೆ ದಾಳಿಂಬೆಯು ಸುಮಾರು ಮೂರು ಪಟ್ಟು ಹೆಚ್ಚು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತದೆ. ದಾಳಿಂಬೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಪಾಲಿಫಿನಾಲ್ ಸಂಯುಕ್ತಗಳು ಫ್ರೀ ರ್ಯಾಡಿಕಲ್ಗಳ ವಿರುದ್ಧ ಶರೀರಕ್ಕೆ ರಕ್ಷಣೆಯನ್ನು ನೀಡುತ್ತವೆ. ಈ ಉತ್ಕರ್ಷಣ ನಿರೋಧಕಗಳು ತ್ವರಿತವಾಗಿ ಹೀರಲ್ಪಡುತ್ತವೆ ಮತ್ತು ಸಣ್ಣ ಪಾಲಿಫಿನಾಲ್ ಗಳಾಗಿ ಚಯಾಪಚಯ (ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸುವ ಪ್ರಕ್ರಿಯೆ)ಗೊಳ್ಳುತ್ತವೆ. ದಾಳಿಂಬೆ ಬೀಜ ಅಥವಾ ಅದರ ಸಾರ ಉತ್ಕರ್ಷಣಶೀಲತೆಯಿಂದ ಚರ್ಮಕ್ಕೆ ಉಂಟಾಗುವ ಹಾನಿಯನ್ನು ಮತ್ತು ಸುಕ್ಕುಗಳನ್ನು ತಡೆಯಲು ನೆರವಾಗುವ ಜೊತೆಗೆ ಚಿಕ್ಕ ರಕ್ತನಾಳಗಳಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಫ್ರೀ ರ್ಯಾಡಿಕಲ್ ಗಳಿಂದ ಉಂಟಾಗುವ ಹಾನಿಯಿಂದ ಜೀವಕೋಶಗಳನ್ನು ರಕ್ಷಿಸುವ ಗ್ಲುಟಾಥಿಯೋನ್ ಉತ್ಪಾದನೆಗೆ ಶರೀರದ ಸಾಮರ್ಥ್ಯವನ್ನು ಹೆಚ್ಚಿಸುವ ದಾಳಿಂಬೆಯು ಚರ್ಮದ ಸ್ಥಿತಿ ಸ್ಥಾಪಕತ್ವವನ್ನು ಹೆಚ್ಚಿಸುತ್ತದೆ, ಜೀವಕೋಶಗಳ ಪುನರುತ್ಪಾದನೆ ಮತ್ತು ಕೊಲಾಜಿನ್ ಉತ್ಪಾದನೆಗೆ ನೆರವಾಗುತ್ತದೆ, ಬಿಸಿಲಿನಿಂದ ಉಂಟಾಗುವ ಹಾನಿ, ವಯಸ್ಸಾದಂತೆ ಚರ್ಮದಲ್ಲಿ ಕಾಣಿಸಿಕೊಳ್ಳುವ ಕಲೆಗಳು ಮತ್ತು ಹೈಪರ್ಪಿಗ್ಮೆಂಟೇಷನ್ ಅಥವಾ ಅತಿಯಾದ ಚರ್ಮದ ವರ್ಣದ್ರವ್ಯವನ್ನು ತಡೆಯುತ್ತದೆ. ಪರಿಣಾಮವಾಗಿ ಚರ್ಮದ ಆರ್ದ್ರತೆಯನ್ನು ಹೆಚ್ಚಿಸುತ್ತದೆ ಮತ್ತು ಚರ್ಮವನ್ನು ಪೋಷಿಸುತ್ತದೆ.

ದಾಳಿಂಬೆಯು ವಯಸ್ಸಾಗುವುದನ್ನು ನಿಧಾನಿಸುತ್ತದೆ ಎನ್ನುವುದಕ್ಕೆ ಸರಣಿ ಅಧ್ಯಯನಗಳು ಪುರಾವೆಯನ್ನು ಒದಗಿಸಿವೆ. ಸ್ನಾಯುಗಳನ್ನು ಮತ್ತು ಮೈಟ್ರೋಕಾಂಡ್ರಿಯಲ್ ಆರೋಗ್ಯವನ್ನು ಬಲಗೊಳಿಸುವ ಮತ್ತು ತನ್ಮೂಲಕ ವೃದ್ಧಾಪ್ಯದಲ್ಲಿಯ ದೌರ್ಬಲ್ಯಗಳ ವಿರುದ್ಧ ರಕ್ಷಣೆ ನೀಡಬಲ್ಲ ನವೀನ ಚಿಕಿತ್ಸಾ ಕ್ರಮವನ್ನು ರೂಪಿಸಲು ದಾಳಿಂಬೆಯಲ್ಲಿರುವ ‘ಯುರೊಲಿಥಿನ್ ಎ’ ಅನ್ನು ಬಳಸಬಹುದು ಎಂದು ವಾಷಿಂಗ್ಟನ್ ವಿವಿಯ ಇತ್ತೀಚಿನ ಸಂಶೋಧನೆಯಲ್ಲಿ ಕಂಡು ಬಂದಿದೆ. ಹುದುಗು ಬರಿಸಿದ ದಾಳಿಂಬೆ ರಸದ ದೈನಂದಿನ ಸೇವನೆಯು ಉತ್ಕರ್ಷಣಶೀಲ ಒತ್ತಡದ ವಿರುದ್ಧ ಚರ್ಮಕ್ಕೆ ರಕ್ಷಣೆಯನ್ನು ನೀಡುತ್ತದೆ ಮತ್ತು ಚರ್ಮಕ್ಕೆ ವಯಸ್ಸಾಗುವುದನ್ನು ನಿಧಾನಗೊಳಿಸುತ್ತದೆ ಎನ್ನುವುದನ್ನು 2021ರಲ್ಲಿ ತೈವಾನಿನಲ್ಲಿ ನಡೆಸಲಾದ ಸಂಶೋಧನೆಯೊಂದು ತೋರಿಸಿದೆ. ದಾಳಿಂಬೆಯಲ್ಲಿಯ ಅಣು ಕರುಳಿನಲ್ಲಿಯ ಸೂಕ್ಷ್ಮಜೀವಿಗಳಿಂದ ರೂಪಾಂತರಗೊಳ್ಳುತ್ತದೆ ಮತ್ತು ವಯಸ್ಸಾಗುವಿಕೆಯ ಪ್ರಮುಖ ಕಾರಣಗಳಲ್ಲೊಂದಾಗಿರುವ ಸ್ನಾಯುಕೋಶಗಳ ಹಾನಿಯಿಂದ ಸ್ವತಃ ರಕ್ಷಿಸಿಕೊಳ್ಳಲು ಅವುಗಳನ್ನು ಸಮರ್ಥವಾಗಿಸುತ್ತದೆ ಎಂದು 2016ರಲ್ಲಿ ನಡೆಸಲಾದ ಇನ್ನೊಂದು ಸಂಶೋಧನೆಯು ತೋರಿಸಿದೆ.

ಕೊಲೆಸ್ಟ್ರಾಲ್ ಮತ್ತು ಹೃದಯದ ಆರೋಗ್ಯ
ಸ್ನಾಯುಗಳನ್ನು ಬಲಗೊಳಿಸುವ ದಾಳಿಂಬೆಯ ಗುಣವು ಅದನ್ನು ಹೃದಯದ ಆರೋಗ್ಯಕ್ಕಾಗಿ ಸೂಪರ್ಫುಡ್ ಅನ್ನಾಗಿ ಮಾಡಿದೆ. ದಾಳಿಂಬೆಯ ರಸವು ಪೊಟ್ಯಾಷಿಯಮ್ನ ಉತ್ತಮ ಮೂಲವಾಗಿದ್ದು,ಅದು ಸ್ನಾಯುವಿನ ಆರೋಗ್ಯಕರ ಕಾರ್ಯ ನಿರ್ವಹಣೆಗೆ ಮತ್ತು ಹೃದಯ ಬಡಿತದ ನಿಯಂತ್ರಣಕ್ಕೆ ಅಗತ್ಯವಾಗಿರುವ ಪ್ರಮುಖ ಇಲೆಕ್ಟ್ರೋಲೈಟ್ ಅಥವಾ ವಿದ್ಯುದ್ವಿಚ್ಛೇದ್ಯವಾಗಿದೆ. ಟ್ಯಾನಿನ್ಗಳು ಮತ್ತು ಆ್ಯಂಥೊಸಿಯಾನಿನ್ಗಳನ್ನು ಒಳಗೊಂಡಿರುವ ಅದು ಅಪಧಮನಿಗಳಲ್ಲಿ ಕೊಬ್ಬು ಸಂಗ್ರಹಗೊಳ್ಳುವುದನ್ನು ತಡೆಯುತ್ತದೆ ಮತ್ತು ಎಲ್ಡಿಎಲ್ ಅಥವಾ ಕೆಟ್ಟ ಕೊಲೆಸ್ಟ್ರಾಲ್ನ ಉತ್ಕರ್ಷಣವನ್ನು ನಿಧಾನಗೊಳಿಸುವ ಮೂಲಕ ಅಪಧಮನಿ ಕಾಠಿಣ್ಯ ಮತ್ತು ಹೃದ್ರೋಗಗಳನ್ನು ತಡೆಯುತ್ತದೆ. ದಾಳಿಂಬೆಯು ಎಚ್ಡಿಎಲ್ ಅಥವಾ ಒಳ್ಳೆಯ ಕೊಲೆಸ್ಟ್ರಾಲ್ನ ಚಟುವಟಿಕೆಯನ್ನು ಹೆಚ್ಚಿಸುತ್ತದೆ.

ಹೃದ್ರೋಗದ ಅಪಾಯವನ್ನು ಹೆಚ್ಚಿಸುವ ಟ್ರೈಗ್ಲಿಸರೈಡ್ಗಳನ್ನು ದಾಳಿಂಬೆಯು ತಡೆಯುತ್ತದೆ ಎನ್ನುವುದು ಅದರ ಅತ್ಯುತ್ತಮ ಗುಣವಾಗಿದೆ. ಅವು ಶರೀರದಲ್ಲಿ ಸಂಗ್ರಹಗೊಳ್ಳುವ ಮೊದಲೇ ಅವುಗಳ ಮೇಲೆ ದಾಳಿ ನಡೆಸುವ ಮೂಲಕ ದಾಳಿಂಬೆಯು ರಕ್ತನಾಳಗಳಲ್ಲಿ ತಡೆಗಳುಂಟಾಗುವುದನ್ನು ನಿವಾರಿಸುತ್ತದೆ ಮತ್ತು ಹೊಟ್ಟೆಯ ಬೊಜ್ಜನ್ನೂ ನಿರ್ಬಂಧಿಸುತ್ತದೆ. ಅದರಲ್ಲಿರುವ ಪೊಟ್ಯಾಷಿಯಂ ಮತ್ತು ಮ್ಯಾಗ್ನೇಷಿಯಂ ಅಧಿಕ ರಕ್ತದೊತ್ತಡವನ್ನು ತಗ್ಗಿಸಲು ನೆರವಾಗುತ್ತವೆ.

ಮಧುಮೇಹ ಮತ್ತು ತೂಕನಷ್ಟ
ದಾಳಿಂಬೆಯಲ್ಲಿ ಕ್ಯಾಲರಿಗಳು ಮತ್ತು ಕೊಬ್ಬು ಕಡಿಮೆ ಪ್ರಮಾಣದಲ್ಲಿದ್ದು,ನಾರು ಹೆಚ್ಚಿನ ಪ್ರಮಾಣದಲ್ಲಿದೆ. ಇದು ಆಹಾರವನ್ನು ನಿಧಾನವಾಗಿ ವಿಭಜಿಸಲು ನೆರವಾಗುತ್ತದೆ,ತನ್ಮೂಲಕ ರಕ್ತದಲ್ಲಿ ಗ್ಲುಕೋಸ್ ಬಿಡುಗಡೆಯನ್ನು ವಿಳಂಬಿಸುತ್ತದೆ. ಇದರಿಂದ ಹಸಿವು ಬಾಧಿಸುವುದಿಲ್ಲ ಮತ್ತು ತಿಂಡಿಬಾಕತನವು ಕಡಿಮೆಯಾಗುವುದರಿಂದ ಆಹಾರದಲ್ಲಿ ಶಿಸ್ತು ಮತ್ತು ತೂಕವನ್ನು ಕಾಯ್ದುಕೊಳ್ಳಲು ನೆರವಾಗುತ್ತದೆ. ದಾಳಿಂಬೆಯು ಮಧುಮೇಹಿಗಳಲ್ಲಿ ಉತ್ಕರ್ಷಣಶೀಲ ಒತ್ತಡ ಮತ್ತು ಲಿಪಿಡ್ ಪೆರಾಕ್ಸಿಡೇಷನ್ ಅನ್ನು ಕಡಿಮೆ ಮಾಡುವ ಮೂಲಕ ಟೈಪ್ 2 ಮಧುಮೇಹದ ಚಿಕಿತ್ಸೆಯಲ್ಲಿ ನೆರವಾಗುತ್ತದೆ ಎಂದು ಅಧ್ಯಯನವೊಂದು ತೋರಿಸಿದೆ.

Similar News