ಬೆಂಕಿ ಅವಘಡ ನಿರ್ವಹಣೆ: ಅರಣ್ಯ ಇಲಾಖೆಯವರಿಗೆ ಮಾಹಿತಿ ಕಾರ್ಯಗಾರ
ಕುಂದಾಪುರ : ಬೇಸಿಗೆಯಲ್ಲಿ ಕಾಡ್ಗಿಚ್ಚು ಮೊದಲಾದ ಬೆಂಕಿ ಅವಘಢ ಗಳು ಸಂಭವಿಸುತ್ತಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಬೆಂಕಿ ನಂದಿಸುವ ಕಾರ್ಯದ ಜತೆಗೆ ತಮ್ಮ ಸುರಕ್ಷತೆಗೂ ಆದ್ಯತೆ ಕೊಡಬೇಕು. ಈ ಸಮಯದಲ್ಲಿ ಅಜಾಗರೂಕತೆ ಅಥವಾ ನಿರ್ಲಕ್ಷ್ಯ ವಹಿಸಬಾರದು. ಆಧುನಿಕ ತಂತ್ರಜ್ಞಾನಗಳ ಬಳಕೆಯಿಂದ ಬೆಂಕಿ ಹತೋಟಿಗೆ ತರುವ ಮಾರ್ಗೋಪಾಯ ಗಳನ್ನು ಅರಿಯಬೇಕಾಗಿದೆ ಎಂದು ಕುಂದಾಪುರದ ಉಪ ಅರಣ್ಯ ಸಂರಕ್ಷಣಾಧಿ ಕಾರಿ ಉದಯ ಎಂ.ನಾಯಕ್ ಹೇಳಿದ್ದಾರೆ.
ಅರಣ್ಯ ಇಲಾಖೆಯ ಮಂಗಳೂರು ವೃತ್ತ, ಕುಂದಾಪುರ ಅರಣ್ಯ ವಿಭಾಗ ಹಾಗೂ ಉಪ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಕುಂದಾಪುರ ವಿಭಾಗದ ಉಪ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬಂದಿಗೆ ಸೋಮವಾರ ಆಯೋಜಿಸಲಾದ ಬೆಂಕಿ ಅವಘಢ ನಿರ್ವಹಣೆ ಕುರಿತು ತರಬೇತಿ ಹಾಗೂ ಪ್ರಾತ್ಯಕ್ಷಿಕೆ ಕಾರ್ಯುಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಉಡುಪಿ ವಲಯದ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಆಚಾರ್ ಮಾತನಾಡಿ, ಅರಣ್ಯ ಇಲಾಖೆಯ ಕೆಲಸ ಸವಾಲಿನದ್ದಾಗಿದೆ. ಅದರಲ್ಲೂ ಕಾಡಿನಲ್ಲಿ ಬೆಂಕಿ ಅವಘಢದಂತಹ ಘಟನೆಗಳು ಸಂಭವಿಸಿದಾಗ ಅಧಿಕಾರಿಗಳು ಹಾಗೂ ಸಿಬಂದಿ ಸ್ವಯಂ ರಕ್ಷಣೆ, ಸುರಕ್ಷತೆಗೆ ಆದ್ಯತೆ ಕೊಡಬೇಕು. ಅರಣ್ಯ ಉಳಿಸುವುದು ನಮ್ಮ ಆದ್ಯತೆಯಾಗಿದ್ದರೂ, ಜೀವ ರಕ್ಷಣೆಯೂ ಮುಖ್ಯ ಎಂದರು.
ಕಾರ್ಯಕ್ರಮವನ್ನು ಕುಂದಾಪುರ ವಿಭಾಗದ ಉಪ ಅರಣ್ಯಾಧಿಕಾರಿಗಳ ಕಚೇರಿ ವ್ಯವಸ್ಥಾಪಕ ಉದಯ ಕುಮಾರ್ ಟಿ. ಉದ್ಘಾಟಿಸಿದರು. ಕುಂದಾಪುರ ಅಗ್ನಿ ಶಾಮಕ ದಳದ ಠಾಣಾಧಿಕಾರಿ ಬಾಬು ಶೆಟ್ಟಿ ಬೆಂಕಿ ಅವಘಢ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕಾರ್ಯಾಚರಣೆ, ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಯ ಅನ್ನಪೂರ್ಣ ಹಾಗೂ ಸಿಬಂದಿ ಬೆಂಕಿ ಅವಘಡದ ಸಂದರ್ಭ ಕೈಗೊಳ್ಳುವ ತುರ್ತುಚಿಕಿತ್ಸೆ ಬಗ್ಗೆ ಮಾಹಿತಿ ನೀಡಿದರು. ತರಬೇತಿ ಬಳಿಕ ಕೋಣಿಯ ಅಗ್ನಿ ಶಾಮಕ ಠಾಣೆಯಲ್ಲಿ ಬಾಬು ಶೆಟ್ಟಿಯವರ ನೇತೃತ್ವದಲ್ಲಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಲಾಯಿತು. ಸಕಲೇಶಪುರದಲ್ಲಿ ಕಾಡಿನ ಬೆಂಕಿ ನಂದಿಸುವ ಕಾರ್ಯಾಚರಣೆ ವೇಳೆ ಸಾವನ್ನಪ್ಪಿದ ಅರಣ್ಯ ಇಲಾಖೆಯ ಎಸ್.ಕೆ. ಸುಂದರೇಶ್ ಅವರಿಗೆ ಗೌರವ ಸಲ್ಲಿಸಲಾಯಿತು.
ಕುಂದಾಪುರ ವಲಯ ಅರಣ್ಯಾಧಿಕಾರಿ ಕಿರಣ್ ಬಾಬು, ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಸಂದೇಶ್ ಐಸಿಟಿ ವಲಯ ಅರಣ್ಯಾಧಿಕಾರಿ ರವೀಂದ್ರ ಆಚಾರ್, ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬಂದಿ, ಅರಣ್ಯ ರಕ್ಷಕರು, ಗ್ರಾಮ ಅರಣ್ಯ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು. ಉಪ ವಲಯ ಅರಣ್ಯಾಧಿಕಾರಿ ದಿಲೀಪ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.