×
Ad

2022ನೇ ಸಾಲಿನಲ್ಲಿ ಸಾರ್ವಜನಿಕ ರಂಗದ ಉದ್ಯೋಗ ಸೃಷ್ಟಿ ಶೇ. 8.8 ಕುಸಿತ

Update: 2023-02-28 14:50 IST

ಹೊಸದಿಲ್ಲಿ: 2022ನೇ ಸಾಲಿನಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಗೆ 5,65,500 ನೌಕರರು ಸೇರ್ಪಡೆಯಾಗಿದ್ದು, 2021ರಲ್ಲಿ ಈ ಸಂಖ್ಯೆ 6,19,835 ಇತ್ತು. ಈ ಲೆಕ್ಕದಲ್ಲಿ ಸಾರ್ವಜನಿಕ ರಂಗದಲ್ಲಿನ ಉದ್ಯೋಗ ಸೃಷ್ಟಿ ಶೇ. 8.8ರಷ್ಟು ಕುಸಿದಿದೆ ಎಂದು Business Standard ದಿನಪತ್ರಿಕೆ ವರದಿ ಮಾಡಿದೆ.

ಕೇಂದ್ರ ಸರ್ಕಾರಿ ನೌಕರರು ಹಾಗೂ ಕೆಲ ರಾಜ್ಯಗಳಲ್ಲಿನ ಸರ್ಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆ ಕಡ್ಡಾಯವಾಗಿರುವುದನ್ನು ಗಣನೆಗೆ ತೆಗೆದುಕೊಂಡಾಗ ಸಾರ್ವಜನಿಕ ರಂಗದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 8.8ರಷ್ಟು ಉದ್ಯೋಗ ಸೃಷ್ಟಿ ಕಡಿತಗೊಂಡಿದೆ. ಹೀಗಿದ್ದೂ, ಮೇಲಿನ ಸಂಖ್ಯೆಗಳನ್ನು ವಿಶಾಲ ನೆಲೆಯಲ್ಲಿ ಸದ್ಯದ ಪ್ರವೃತ್ತಿ ಎಂದಷ್ಟೇ ಪರಿಗಣಿಸಬೇಕಿದ್ದು, ವಿರೋಧ ಪಕ್ಷಗಳ ಆಳ್ವಿಕೆಯ ರಾಜಸ್ತಾನ, ಛತ್ತೀಸ್‌ಗಢ, ಹಿಮಾಚಲ ಪ್ರದೇಶ, ಝಾರ್ಖಂಡ್ ಹಾಗೂ ಪಂಜಾಬ್ ರಾಜ್ಯಗಳು ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು ತಿರಸ್ಕರಿಸಿದ್ದು, ಹಳೆದ ಪಿಂಚಣಿ ಯೋಜನೆಗೆ ಮರಳಿವೆ.

2021ನೇ ಸಾಲಿನಲ್ಲಿ ರಾಷ್ಟ್ರೀಯ ಪಿಂಚಣಿ ಯೋಜನೆಯ ಚಂದಾದಾರರಾಗಿದ್ದ ಯುವ ಉದ್ಯೋಗಿಗಳ (18-28) ಪ್ರಮಾಣ ಶೇ. 67.8ರಿಂದ 2022ನೇ ಸಾಲಿನಲ್ಲಿ ಶೇ. 65.2ಕ್ಕೆ ಕುಸಿದಿದೆ. ಇದರರ್ಥ, 2021ರಲ್ಲಿ 83,889 ಇದ್ದ ಯುವ ಉದ್ಯೋಗಿಗಳ ಸಂಖ್ಯೆ 2022ರಲ್ಲಿ 79,895ಗೆ ಕುಸಿದಿದೆ. ಮತ್ತೊಂದೆಡೆ, 2021ರಲ್ಲಿ 1,23,665 ಇದ್ದ ರಾಷ್ಟ್ರೀಯ ಪಿಂಚಣಿ ಯೋಜನೆಗೆ ನೂತನವಾಗಿ ಚಂದಾದಾರರಾದ ಕೇಂದ್ರ ಸರ್ಕಾರಿ ಉದ್ಯೋಗಿಗಳ ಸಂಖ್ಯೆ 2022ರಲ್ಲಿ ಕುಸಿತ ದಾಖಲಿಸಿದ್ದು, 1,18,020 ಆಗಿದೆ.

ಹೀಗಿದ್ದೂ, ಯುವ ಪುರುಷ ಉದ್ಯೋಗಿ ಚಂದಾದಾರರ ಸಂಖ್ಯೆಯಲ್ಲಿ ತುಸು ಏರಿಕೆಯಾಗಿದ್ದು, 2021ರ ಶೇ. 21.2ಕ್ಕೆ ಹೋಲಿಸಿದರೆ 2022ರಲ್ಲಿ ಶೇ. 2ರಷ್ಟು ಏರಿಕೆಯಾಗಿದೆ. ಹಾಗೆಯೇ ಯುವ ಮಹಿಳಾ ಉದ್ಯೋಗಿ ಚಂದಾದಾರರ ಸಂಖ್ಯೆ 2021ರಲ್ಲಿ ಶೇ. 78.9ರಷ್ಟಿದ್ದದ್ದು, 2022ರಲ್ಲಿ ಶೇ. 78.6ಕ್ಕೆ ಇಳಿಕೆಯಾಗಿದೆ.

ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ರಾಜ್ಯಗಳು ಸೃಷ್ಟಿಸಿರುವ ಒಟ್ಟು ನೂತನ ಚಂದಾದಾರರ ಸಂಖ್ಯೆ 4,47,480ರಷ್ಟಿದ್ದು, ಈ ಪೈಕಿ ಯುವ ಉದ್ಯೋಗಿಗಳ (18-28) ಪ್ರಮಾಣ ಶೇ. 33.3ರಷ್ಟು ಮಾತ್ರವಿದೆ. ಈ ಪ್ರಮಾಣವು 2021ನೇ ಸಾಲಿಗೆ ಹೋಲಿಸಿದರೆ ಶೇ. 2ರಷ್ಟು ಹೆಚ್ಚಳವಾಗಿದೆ. ಆದರೆ, 2021ರಲ್ಲಿ ಶೇ. 37.1ರಷ್ಟಿದ್ದ ಯುವ ಮಹಿಳಾ ಉದ್ಯೋಗಿಗಳ ಪ್ರಮಾಣ, 2022ರಲ್ಲಿ ಶೇ. 35.4ಕ್ಕೆ ಕುಸಿದಿದೆ.

Similar News