ವಿಶ್ವಸಂಸ್ಥೆಯ ಚರ್ಚೆಯಲ್ಲಿ ಭಾಗವಹಿಸಿದ ನಿತ್ಯಾನಂದನ ʼಕೈಲಾಸʼ ದೇಶದ ಪ್ರತಿನಿಧಿಗಳು: ವಾಸ್ತವವೇನು?

Update: 2023-02-28 17:09 GMT

ಯುನೈಟೆಡ್ ನೇಷನ್ಸ್: ದೇಶದಿಂದ ಪಲಾಯನಗೈದ ಸ್ವಯಂ ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದನ ಕಾಲ್ಪನಿಕ ರಾಷ್ಟ್ರವಾದ 'ಕೈಲಾಸ'ದ ಪ್ರತಿನಿಧಿಗಳು ಜಿನೀವಾದಲ್ಲಿ ಸುಸ್ಥಿರ ಅಭಿವೃದ್ಧಿಯ ಕುರಿತು ವಿಶ್ವಸಂಸ್ಥೆಯ ಸಮಿತಿಯ ಚರ್ಚೆಯಲ್ಲಿ ಭಾಗವಹಿಸಿದ್ದು, ಆದರೆ, ವಿಶ್ವಸಂಸ್ಥೆಯು ಆ ದೇಶವನ್ನು ಗುರುತಿಸಿದೆ ಎಂಬ ತಪ್ಪು ಅಭಿಪ್ರಾಯವನ್ನು ಸೃಷ್ಟಿಸಿದೆ.

ಫೆಬ್ರವರಿ 24 ರಂದು ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮಿತಿ (CESCR) ನಡೆಸಿದ ಸುಸ್ಥಿರ ಅಭಿವೃದ್ಧಿಯ ಸಾಮಾನ್ಯ ಚರ್ಚೆಯಲ್ಲಿ, ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ (USK)ದಿಂದ ಬಂದಿದ್ದೇವೆ ಎಂದ ಇಬ್ಬರು ವ್ಯಕ್ತಿಗಳು ಸಾರ್ವಜನಿಕರಿಗೆ ಮಾತನಾಡಲು ಅವಕಾಶವಿರುವ ಸಂದರ್ಭದಲ್ಲಿ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.

ಭದ್ರತಾ ಮಂಡಳಿ ಮತ್ತು ಜನರಲ್ ಅಸೆಂಬ್ಲಿ ಎರಡರ ಅನುಮೋದನೆಯ ಅಗತ್ಯವಿರುವ ಮತ್ತು ಪ್ರವೇಶಕ್ಕಾಗಿ ಕಠಿಣ ನಿಯಮಗಳನ್ನು ಹೊಂದಿರುವ ವಿಶ್ವಸಂಸ್ಥೆಯಿಂದ ಗುರುತಿಸಲ್ಪಟ್ಟ 193 ದೇಶಗಳಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಇಲ್ಲ ಎಂದು newindianexpress ವರದಿ ಮಾಡಿದೆ.

ಒಟ್ಟು ಇಬ್ಬರು ಪ್ರತಿನಿಧಿಗಳು ಸಭೆಗೆ ಆಗಮಿಸಿ ಅತಿಥಿಗಳೊಂದಿಗೆ ಪ್ರಶ್ನೆಗಳನ್ನು ಕೇಳಿದ್ದು, ಟರ್ಬನ್‌, ಹಣೆ ಆಭರಣ ಮತ್ತು ನೆಕ್ಲೇಸ್‌ ಗಳನ್ನು ಧರಿಸಿದ್ದ ಮಹಿಳೆ ತನ್ನನ್ನು ವಿಜಯಪ್ರಿಯಾ ನಿತ್ಯಾನಂದ ಎಂದು ಗುರುತಿಸಿಕೊಂಡರು. ತಮ್ಮ ದೇಶ ಕೈಲಾಸದಲ್ಲಿ "ಜೀವನದ ಮೂಲಭೂತ ಅವಶ್ಯಕತೆಗಳಾದ ಆಹಾರ, ವಸತಿ, ಬಟ್ಟೆ, ಶಿಕ್ಷಣ, ವೈದ್ಯಕೀಯ ಆರೈಕೆ, ಇವೆಲ್ಲವನ್ನೂ ಎಲ್ಲಾ ನಾಗರಿಕರಿಗೆ ಉಚಿತವಾಗಿ ನೀಡಲಾಗುತ್ತದೆ" ಎಂದೂ ಹೇಳಿದರು. 

ಮತ್ತೋರ್ವ ವ್ಯಕ್ತಿ ಸಣ್ಣ ಪ್ರಮಾಣದ ರೈತ ಎಂದು ಗುರುತಿಸಿಕೊಂಡ ಇಯಾನ್‌ ಕುಮಾರ್‌, ಪಾಕಿಸ್ತಾನದ ಪ್ರತಿನಿಧಿಗೆ ಪ್ರಶ್ನೆಯೊಂದನ್ನು ಕೇಳಿದರು. ಇವರ ಮಾತುಗಳಿಗೆ ಯಾರೂ ಪ್ರತಿಕ್ರಿಯಿಸಲಿಲ್ಲ ಮತ್ತು ಯಾರೂ ಉತ್ತರವನ್ನೂ ನೀಡಲಿಲ್ಲ ಎಂದು ವರದಿ ತಿಳಿಸಿದೆ. ಸಭೆಯಲ್ಲಿ ಪ್ರಶ್ನೆ ಕೇಳಿದ ಬಳಿಕ ಫೋಟೊ ಕ್ಲಿಕ್ಕಿಸಿಕೊಂಡು ನಿತ್ಯಾನಂದನ ಕೈಲಾಸಕ್ಕೆ ವಿಶ್ವಸಂಸ್ಥೆ ಮಾನ್ಯತೆ ನೀಡಿದಂತೆ ಸಾಮಾಜಿಕ ತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದರ ಕುರಿತು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Similar News