ಮನೀಶ್ ಸಿಸೋಡಿಯಾ, ಸತ್ಯೇಂದ್ರ ಜೈನ್ ರಾಜೀನಾಮೆ: ಕೇಜ್ರಿವಾಲ್ ಸಂಪುಟಕ್ಕೆ ಇಬ್ಬರು ಹೊಸ ಮಂತ್ರಿಗಳ ಸೇರ್ಪಡೆ ಸಾಧ್ಯತೆ

Update: 2023-03-01 04:53 GMT

ಹೊಸದಿಲ್ಲಿ: ಭ್ರಷ್ಟಾಚಾರ ಪ್ರಕರಣಗಳಲ್ಲಿ ಮನೀಶ್ ಸಿಸೋಡಿಯಾ ಹಾಗೂ  ಸತ್ಯೇಂದ್ರ ಜೈನ್ ಜೈಲು ಪಾಲಾಗಿರುವುದರಿಂದ ದಿಲ್ಲಿಯ ಆಪ್ ಸರಕಾರದಲ್ಲಿ  ಶೀಘ್ರದಲ್ಲೇ ಇಬ್ಬರು ಹೊಸ ಮಂತ್ರಿಗಳು ಸೇರಬಹುದು ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರಪತಿ  ದ್ರೌಪದಿ ಮುರ್ಮು ಅವರು  ಸಿಸೋಡಿಯಾ ಹಾಗೂ  ಜೈನ್ ಅವರ ರಾಜೀನಾಮೆಯನ್ನು ಅನುಮೋದಿಸಿದ ನಂತರ ಅರವಿಂದ ಕೇಜ್ರಿವಾಲ್ ಸರಕಾರವು ನೇಮಕಾತಿಗಳನ್ನು ಮಾಡಬಹುದು ಎಂದು ಮೂಲಗಳು ತಿಳಿಸಿವೆ.

18 ಇಲಾಖೆಗಳ ಉಸ್ತುವಾರಿ ಹೊತ್ತಿದ್ದ ದಿಲ್ಲಿಯ ಉಪಮುಖ್ಯಮಂತ್ರಿ ಸಿಸೋಡಿಯಾ ಹಾಗೂ  ಆರೋಗ್ಯ ಸಚಿವ ಜೈನ್ ಮಂಗಳವಾರ ಸಂಜೆ ರಾಜೀನಾಮೆ ನೀಡಿದ್ದಾರೆ. ಮದ್ಯ ನೀತಿ ಪ್ರಕರಣದಲ್ಲಿ  ಸಿಬಿಐ ಬಂಧನ ಪ್ರಶ್ನಿಸಿ  ಸಿಸೋಡಿಯಾ ಸಲ್ಲಿಸಿರುವ ಅರ್ಜಿ ವಿಚಾರಣೆಗೆ  ಸುಪ್ರೀಂ ಕೋರ್ಟ್ ನಿರಾಕರಿಸಿ ದಿಲ್ಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಲು ಸೂಚಿಸಿದ ಕೆಲವೇ ಗಂಟೆಗಳ ನಂತರ ರಾಜೀನಾಮೆ ನೀಡಲಾಗಿತ್ತು.

ಭ್ರಷ್ಟಾಚಾರ ಪ್ರಕರಣಗಳಲ್ಲಿ ಬಂಧಿತರಾಗಿರುವ ಇಬ್ಬರು ಸಚಿವರು ಸಂಪುಟ ಸ್ಥಾನದಲ್ಲಿ ಏಕೆ ಮುಂದುವರಿದಿದ್ದಾರೆ ಎಂದು ಬಿಜೆಪಿ ಪ್ರಶ್ನಿಸುತ್ತಿದೆ.

ರಾಜೀನಾಮೆಗಳು ಅಪರಾಧದ ಅಂಗೀಕಾರವಲ್ಲ ಎಂದು ಒತ್ತಿ ಹೇಳಿರುವ ಎಎಪಿ ಅದನ್ನು "ಆಡಳಿತಾತ್ಮಕ ಹೆಜ್ಜೆ" ಎಂದು ಬಣ್ಣಿಸಿದೆ.

Similar News