ಸದನದ ಸದಸ್ಯರು ವಿಪ್‌ಗೆ ಬದ್ಧರಾಗಬೇಕು, ಇಲ್ಲದೇ ಹೋದರೆ ಅನರ್ಹತೆ ಕ್ರಮ ಎದುರಿಸಬಹುದು : ಸುಪ್ರೀಂ ಕೋರ್ಟ್‌

Update: 2023-03-01 06:56 GMT

ಹೊಸದಿಲ್ಲಿ: ಸದನವೊಂದರ ಸದಸ್ಯರು ವಿಪ್‌ಗೆ ಬದ್ಧರಾಗಬೇಕಿದೆ ಹಾಗೂ ಆಡಳಿತ ಮೈತ್ರಿಕೂಟದ ಭಾಗವಾಗಿರುವ ಒಂದು ರಾಜಕೀಯ ಪಕ್ಷದೊಳಗಿನ ಯಾವುದೇ ಶಾಸಕರ ಒಂದು ಗುಂಪು ತಾವು ಮೈತ್ರಿಕೂಟದ ಭಾಗವಾಗಿರಲು ಬಯಸುವುದಿಲ್ಲ ಎಂದು ಹೇಳಿದರೆ ಅವರನ್ನು ಅನರ್ಹಗೊಳಿಸಬಹುದು, ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

"ಒಮ್ಮೆ ಒಂದು ಸರ್ಕಾರ ರಚನೆಯಾದ ನಂತರ, ಆಡಳಿತ ಪಕ್ಷದ ಶಾಸಕರ ಯಾವುದೇ ಗುಂಪಿಗೆ ತಾವು ಈ ಮೈತ್ರಿಕೂಟದಲ್ಲಿ ಮುಂದುವರಿಯಲು ಬಯಸುವುದಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಾಗೆ ಮಾಡಿದರೆ ಅನರ್ಹತೆಗೊಳಿಸುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ಅನ್ವಯಿಸಬಹುದು. ಸದಸ್ಯರು ವಿಪ್‌ಗೆ ಬದ್ಧರಾಗಬೇಕು ಹಾಗೂ ವಿಲೀನವಾಗದ ಹೊರತು ಸದನದಲ್ಲಿ ಪಕ್ಷದ ಪರ ಮತ ಚಲಾಯಿಸಲು ಬದ್ಧರು," ಎಂದು ಪಂಚ ಸದಸ್ಯರ ಸಂವಿಧಾನಿಕ ಪೀಠದ ನೇತೃತ್ವ ವಹಿಸಿದ್ದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ತಿಳಿಸಿದರು.

ಶಿವಸೇನೆಯಲ್ಲಿ ಉಂಟಾದ ಒಡಕಿನಿಂದ ಕಳೆದ ವರ್ಷ ರಾಜಸ್ಥಾನದಲ್ಲಿ ಉದ್ಭವಿಸಿದ ರಾಜಕೀಯ ಬಿಕ್ಕಟ್ಟಿನ ನಂತರ ಸಲ್ಲಿಸಲಾಗಿದ್ದ ಹಲವು ಅರ್ಜಿಗಳ ವಿಚಾರಣೆ ವೇಳೆ ಮೇಲಿನಂತೆ ಸುಪ್ರೀಂ ಕೋರ್ಟ್‌ ಹೇಳಿದೆ.

"ನಾವು ಮೈತ್ರಿಕೂಟದ ಜೊತೆ ಹೋಗಲು ಬಯಸುವುದಿಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಹಾಗೆ ಮಾಡಬೇಕಿದ್ದರೆ ನಿಮ್ಮ ನಾಯಕನ ಬಳಿ ಹೋಗಿ ಸದನದ ಹೊರಗೆ ನಿರ್ಧಾರ ಕೈಗೊಳ್ಳಿ. ಸದನದ ಸದಸ್ಯರಾಗಿರುವಷ್ಟು ಕಾಲ ಸದನದ ಶಿಸ್ತಿಗೆ ಬದ್ಧರಾಗಬೇಕು. ಹಾಗಿರುವಾಗ ನಿಮ್ಮ ಪಕ್ಷದ ಪರ ಮತ ಚಲಾಯಿಸಬೇಕು," ಎಂದು ಮುಖ್ಯ ನ್ಯಾಯಮೂರ್ತಿಗಳು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್‌ ಶಿಂಧೆ ಬಣ ಪರ ವಕೀಲ ಎನ್‌ ಕೆ ಕೌಲ್‌ ಅವರ ವಾದ ಮಂಡನೆ ನಂತರ ಹೇಳಿದರು.

ಸಂವಿಧಾನಿಕ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಂ ಆರ್‌ ಶಾ, ಕೃಷ್ಣ ಮುರಾರಿ, ಹಿಮಾ ಕೊಹ್ಲಿ ಮತ್ತು ಪಿ ಎಸ್‌ ನರಸಿಂಹ ಕೂಡ ಇದ್ದಾರೆ.

"ಒಂದು ದಿನ ಎರಡು ರಾಜಕೀಯ ವಿಪ್‌ಗಳಿದ್ದವು. ನಾವು ಪಕ್ಷದ ತೀರ್ಮಾನವನ್ನು ಪಾಲಿಸುತ್ತಿದ್ದೇವೆ. ಆದರೆ ನನ್ನ ರಾಜಕೀಯ ವಿಪ್‌ ಅಥವಾ ಅವರ ರಾಜಕೀಯ ವಿಪ್‌ ನಡುವೆ ನಿಜವಾದ ವಿಪ್‌ ಯಾವುದು ಎಂಬುದು ಪ್ರಶ್ನೆ," ಎಂದು ಕೌಲ್‌ ಹೇಳಿದರಲ್ಲದೆ ಶಾಸಕರ ಬಂಡಾಯದ ನಂತರ ರಾಜ್ಯಪಾಲರು ವಿಶ್ವಾಸಮತ ಯಾಚನೆಗೆ ಸೂಚಿಸುವುದು ಸರಿಯಾದ ಕ್ರಮ ಎಂದರು. ಆಗ ಪ್ರತಿಕ್ರಿಯಿಸಿದ ಸಿಜೆಐ ಯಾವುದೇ ರಾಜಕೀಯ ಪಕ್ಷ ಮೈತ್ರಿಕೂಟದಿಂದ ಹಿಂದೆ ಸರಿದಿದ್ದರೆ ಈ ಪ್ರಶ್ಣೆ ಬರುತ್ತದೆ ಎಂದು ಹೇಳಿದರು.

Similar News