×
Ad

ಅರವಿಂದ ಕೇಜ್ರಿವಾಲ್ ಸಿಬಿಐನ ನಿಜವಾದ ಗುರಿಯಾಗಿದ್ದರು: ರಾಜೀನಾಮೆ ಪತ್ರದಲ್ಲಿ ಮನೀಶ್ ಸಿಸೋಡಿಯಾ

Update: 2023-03-01 15:04 IST

ಹೊಸದಿಲ್ಲಿ: ತನ್ನ ವಿರುದ್ಧದ ಕ್ರಿಮಿನಲ್ ಕ್ರಮದ ನಿಜವಾದ ಗುರಿ ಪಕ್ಷದ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಎಂದು ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ(Manish Sisodia) ಮಂಗಳವಾರ ಹೇಳಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.

ದಿಲ್ಲಿ ಸರಕಾರದ  ಸಚಿವ ಸ್ಥಾನಕ್ಕೆ ಸಲ್ಲಿಸಿರುವ  ರಾಜೀನಾಮೆ ಪತ್ರದಲ್ಲಿ ಸಿಸೋಡಿಯಾ ಈ ವಿಚಾರ ಬಹಿರಂಗಪಡಿಸಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿ ಈಗ ರದ್ದುಗೊಂಡಿರುವ ಮದ್ಯ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ದಿಲ್ಲಿಯ ಮಾಜಿ ಉಪಮುಖ್ಯಮಂತ್ರಿ  ಸಿಸೋಡಿಯಾರನ್ನು ಸಿಬಿಐ ರವಿವಾರ ಬಂಧಿಸಿತ್ತು. ಸೋಮವಾರ ದಿಲ್ಲಿ ನ್ಯಾಯಾಲಯ ಸಿಸೋಡಿಯಾರನ್ನು ಮಾರ್ಚ್ 4ರವರೆಗೆ ಸಿಬಿಐ ಕಸ್ಟಡಿಗೆ ಒಪ್ಪಿಸಿತ್ತು.

ಸಿಸೋಡಿಯಾ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಸಂಪುಟದಲ್ಲಿರುವ ಅವರ ಸಹೋದ್ಯೋಗಿ ಸತ್ಯೇಂದ್ರ ಜೈನ್ ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಎಎಪಿಯ ರಾಷ್ಟ್ರೀಯ ಸಂಚಾಲಕ ಹಾಗೂ ದಿಲ್ಲಿ ಮುಖ್ಯಮಂತ್ರಿ ಅರವಿಂದ  ಕೇಜ್ರಿವಾಲ್ ಇಬ್ಬರ ರಾಜೀನಾಮೆ ಪತ್ರಗಳನ್ನು ಅಂಗೀಕರಿಸಿದ್ದಾರೆ.

ಎಂಟು ವರ್ಷಗಳ ಕಾಲ ಪ್ರಾಮಾಣಿಕವಾಗಿ ಕೆಲಸ ಮಾಡಿದ ನಂತರ  ನನ್ನ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿರುವುದು ದುರದೃಷ್ಟಕರ  ಎಂದು ಸಿಸೋಡಿಯಾ ರಾಜೀನಾಮೆ ಪತ್ರದಲ್ಲಿ ಬರೆದಿದ್ದಾರೆ

ತನ್ನ ವಿರುದ್ಧದ ಆರೋಪಗಳು ಸುಳ್ಳು. ಅರವಿಂದ ಕೇಜ್ರಿವಾಲ್ ಅವರ ಸತ್ಯದ ರಾಜಕಾರಣಕ್ಕೆ ಹೆದರುವ ಹೇಡಿಗಳು ಹಾಗೂ  ದುರ್ಬಲ ಜನರು ರೂಪಿಸಿದ ಪಿತೂರಿ ಇದಾಗಿದೆ ಎಂದು ಸಿಸೋಡಿಯ ಹೇಳಿದರು.

 "ಅವರ ಗುರಿ ನಾನಲ್ಲ ನೀವು (ಕೇಜ್ರಿವಾಲ್).  ಏಕೆಂದರೆ ಇಂದು, ದಿಲ್ಲಿಯ ಜನರು ಹಾಗೂ  ದೇಶದ ಇತರ ಜನರು ನಿಮ್ಮನ್ನು ದೇಶಕ್ಕಾಗಿ ದೂರದೃಷ್ಟಿ ಹೊಂದಿರುವ ನಾಯಕರಾಗಿ ನೋಡುತ್ತಿದ್ದಾರೆ’’ ಎಂದು ಸಿಸೋಡಿಯಾ ಹೇಳಿದರು.

ತನ್ನ ವಿರುದ್ಧ ಇನ್ನಷ್ಟು ಪ್ರಕರಣಗಳನ್ನು ದಾಖಲಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದಿರುವ ಸಿಸೋಡಿಯಾ "ಅವರು ನಾನು ನಿಮ್ಮನ್ನು(ಕೇಜ್ರಿವಾಲ್) ತೊರೆಯುವಂತೆ ಮಾಡಲು ಭಾರೀ  ಪ್ರಯತ್ನಿಸಿದರು. ನಾನು ಅವರ ಮುಂದೆ ತಲೆಬಾಗದಿದ್ದಾಗ, ಇಂದು ಅವರು ನನ್ನನ್ನು ಬಂಧಿಸಿ ಜೈಲಿಗೆ ಹಾಕಿದ್ದಾರೆ’’ ಎಂದರು.

Similar News