ರಸ್ತೆಯಲ್ಲಿ ವಾಗ್ವಾದ ಪ್ರಕರಣ: ಆರೋಪಿಗೆ ದೈನಂದಿನ ಐದು ಬಾರಿ ನಮಾಝ್‌ ಮಾಡಲು, ಗಿಡ ನೆಡಲು ಸೂಚಿಸಿದ ನ್ಯಾಯಾಧೀಶರು

Update: 2023-03-01 12:47 GMT

ಮಾಲೆಂಗಾವ್: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೆಗಾಂವ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಆಟೋರಿಕ್ಷಾ ಚಾಲಕನೋರ್ವನಿಗೆ ಎರಡು ಗಿಡಗಳನ್ನು ನೆಡಲು ಮತ್ತು ದಿನಕ್ಕೆ ಐದು ಬಾರಿ ತಪ್ಪದೇ ನಮಾಝ್‌ ಮಾಡಬೇಕೆಂದು ಶಿಕ್ಷೆ ವಿಧಿಸಿದ್ದಾಗಿ indiatoday.in ವರದಿ ಮಾಡಿದೆ. ಇದು ಆರೋಪಿಗೆ ಜೈಲು ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನ್ಯಾಯಾಲಯ ವಿಧಿಸಿದ ಷರತ್ತಾಗಿದೆ.

30 ವರ್ಷದ ರೌಫ್ ಖಾನ್ ಉಮರ್ ಖಾನ್ ಎಂಬ ವ್ಯಕ್ತಿ ಆಟೋರಿಕ್ಷಾ ಚಾಲಕನಾಗಿದ್ದು, 2010ರಲ್ಲಿ ಪವರ್ ಲೂಮ್ ಪಟ್ಟಣದ ಮಾಲೆಗಾಂವ್‌ನ ಕಿರಿದಾದ ಲೇನ್‌ನಲ್ಲಿ ನಿಂತಿದ್ದ ಬೈಕ್‌ಗೆ ಆತನ ಆಟೋ ಡಿಕ್ಕಿ ಹೊಡೆದಿತ್ತು. ಈ ಬಗ್ಗೆ ದೂರುದಾರರು ಪ್ರಶ್ನಿಸಿದ ನಂತರ ಖಾನ್ ವಾಗ್ವಾದ ನಡೆಸಿ ಸಣ್ಣ ಮಟ್ಟದಲ್ಲಿ ಹಲ್ಲೆಯನ್ನೂ ನಡೆಸಿದ್ದರು. ಈ ಕುರಿತು ಖಾನ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು), 325 (ಸ್ವಯಂಪ್ರೇರಿತವಾಗಿ ಗಾಯವನ್ನು ಉಂಟುಮಾಡುವುದು), 504 ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಸೆಕ್ಷನ್ 323 ರ ಅಡಿಯಲ್ಲಿ ಖಾನ್ ತಪ್ಪಿತಸ್ಥ ಎಂದು ಮ್ಯಾಜಿಸ್ಟ್ರೇಟ್ ಹೇಳಿದಾಗ, ಉಳಿದ ಅಪರಾಧಗಳ ಅಡಿಯಲ್ಲಿ ಅವರನ್ನು ಖುಲಾಸೆಗೊಳಿಸಲಾಯಿತು. ಮ್ಯಾಜಿಸ್ಟ್ರೇಟ್ ಆದೇಶವನ್ನು ಪಾಲಿಸುವ ಷರತ್ತಿನ ಮೇಲೆ ಖಾನ್ ಅವರನ್ನು ಜೈಲು ಶಿಕ್ಷೆ ಮತ್ತು ದಂಡವಿಲ್ಲದೆ ಖುಲಾಸೆಗೊಳಿಸಲಾಯಿತು.

ಮ್ಯಾಜಿಸ್ಟ್ರೇಟ್ ತೇಜ್ವಂತ್ ಸಂಧು, "ಅಪರಾಧಿಗಳ ಪ್ರೊಬೇಷನ್ ಆಕ್ಟ್, 1958 ರ ಸೆಕ್ಷನ್ 3, ರ ಪ್ರಕಾರ ಸೂಕ್ತ ಎಚ್ಚರಿಕೆಯ ನಂತರ ಬಿಡುಗಡೆ ಮಾಡಲು ಅಧಿಕಾರವಿದೆ. ಆತನೇ ತಪ್ಪೊಪ್ಪಿರುವ ಕಾರಣ ಇನ್ನು ಅಪರಾಧವನ್ನು ಪುನರಾವರ್ತಿಸಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟರು.

ಪ್ರಕರಣ ನಡೆದಿರುವ ಸೋನಾಪುರ ಮಸೀದಿ ಆವರಣದಲ್ಲಿ ಖಾನ್ ಎರಡು ಗಿಡಗಳನ್ನು ನೆಟ್ಟು ಆರೈಕೆ ಮಾಡಬೇಕು ಎಂದೂ ನ್ಯಾಯಾಧೀಶರು ಆದೇಶ ನೀಡಿದರು. "ತಾನು ಇಸ್ಲಾಮಿಕ್ ನಂಬಿಕೆಯನ್ನು ಅನುಸರಿಸುವ ವ್ಯಕ್ತಿಯಾಗಿದ್ದರೂ, ಧಾರ್ಮಿಕ ಗ್ರಂಥಗಳಲ್ಲಿ ಸೂಚಿಸಿದಂತೆ ತಾನು ನಿಯಮಿತವಾಗಿ ನಮಾಝ್ ಮಾಡುತ್ತಿಲ್ಲ ಎಂದು ಆರೋಪಿ ವಿಚಾರಣೆಯ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನು ಗಮನದಲ್ಲಿಟ್ಟುಕೊಂಡು, ಮುಂದಿನ 21 ದಿನಗಳವರೆಗೆ ದಿನಕ್ಕೆ ಐದು ಬಾರಿ ನಮಾಜ್ ಮಾಡಲು" ತಪ್ಪಿತಸ್ಥರಿಗೆ ನ್ಯಾಯಾಲಯ ಆದೇಶಿಸಿದೆ.

Similar News