×
Ad

ಸದನದಲ್ಲಿ ಸಚೇತಕಾಜ್ಞೆ ಉಲ್ಲಂಘಿಸುವ ಶಾಸಕರು ಅನರ್ಹತೆಗೆ ಗುರಿಯಾಗುತ್ತಾರೆ: ಸುಪ್ರೀಂ ಕೋರ್ಟ್

Update: 2023-03-01 21:04 IST

ಹೊಸದಿಲ್ಲಿ,ಮಾ.1: ಸದನವೊಂದರ ಸದಸ್ಯರು ಪಕ್ಷದ ವಿಪ್ ಅಥವಾ ಸಚೇತಕಾಜ್ಞೆಗೆ ಬದ್ಧರಾಗಿರುತ್ತಾರೆ ಮತ್ತು ಸಮ್ಮಿಶ್ರ ಸರಕಾರದ ಭಾಗವಾಗಿರುವ ರಾಜಕೀಯ ಪಕ್ಷದೊಳಗಿನ ಶಾಸಕರ ಯಾವುದೇ ವರ್ಗವು ಮೈತ್ರಿಕೂಟದಲ್ಲಿ ಮುಂದುವರಿಯಲು ತಾನು ಬಯಸುವುದಿಲ್ಲ ಎಂದು ಹೇಳಿದರೆ ಅದು ಅನರ್ಹತೆಗೆ ಗುರಿಯಾಗುತ್ತದೆ ಎಂದು ಸರ್ವೋಚ್ಚ ನ್ಯಾಯಾಲಯವು ಮಂಗಳವಾರ ಹೇಳಿದೆ.

‘ಒಮ್ಮೆ ಸರಕಾರವು ರಚನೆಗೊಂಡ ಬಳಿಕ ಈ ಮೈತ್ರಿಕೂಟದೊಂದಿಗೆ ಮುಂದುವರಿಯಲು ನಾವು ಬಯಸುವುದಿಲ್ಲ ಎಂದು ಹೇಳುವ ಸ್ವಾತಂತ್ರ ಶಾಸಕರ ಯಾವುದೇ ಗುಂಪಿಗೆ ಅಥವಾ ರಾಜಕೀಯ ಪಕ್ಷದ ಯಾವುದೇ ವರ್ಗಕ್ಕೆ ಇಲ್ಲ. ಹಾಗೆ ಮಾಡಿದರೆ ಅದು ಅನರ್ಹತೆ ಕ್ರಮವನ್ನು ಆಕರ್ಷಿಸುತ್ತದೆ. ನೀವು ಸಚೇತಕಾಜ್ಞೆಗೆ ಬದ್ಧರಾಗಿರುತ್ತೀರಿ.ವಿಲೀನವಾಗದ ಹೊರತು ನೀವು ಶಾಸಕಾಂಗದಲ್ಲಿ ಇರುವವರೆಗೂ ಸದನದ ಶಿಸ್ತಿಗೆ ಮತ್ತು ನಿಮ್ಮ ಪಕ್ಷದ ಸಚೇಕತಾಜ್ಞೆಗೆ ಅನುಗುಣವಾಗಿ ಮತವನ್ನು ಚಲಾಯಿಸಲು ಬದ್ಧರಾಗಿರುತ್ತೀರಿ ’ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ಏಕನಾಥ ಶಿಂದೆ ನೇತೃತ್ವದ ಶಿವಸೇನೆ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಎನ್.ಕೆ.ಕೌಲ್ ಅವರಿಗೆ ಹೇಳಿದರು.

ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಶಿವಸೇನೆಯ ವಿಭಜನೆಯಿಂದಾಗಿ ಸೃಷ್ಟಿಯಾಗಿದ್ದ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಮು.ನ್ಯಾ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಸಂವಿಧಾನ ಪೀಠವು ಕೈಗೆತ್ತಿಕೊಂಡಿತ್ತು.

‘ಒಂದೇ ದಿನ ಎರಡು ರಾಜಕೀಯ ಸಚೇತಕಾಜ್ಞೆಗಳನ್ನು ಹೊರಡಿಸಲಾಗಿತ್ತು. ನಾವು ಪಕ್ಷದ ಆದೇಶವನ್ನು ಪಾಲಿಸುತ್ತಿದ್ದೇವೆ. ನನ್ನ ರಾಜಕೀಯ ಸಚೇತಕಾಜ್ಞೆ ಅಥವಾ ಅವರ ರಾಜಕೀಯ ಸಚೇತಕಾಜ್ಞೆ ನಿಜವಾದ ಸಚೇತಕಾಜ್ಞೆಯೇ ಎನ್ನುವುದು ಪ್ರಶ್ನೆಯಾಗಿದೆ. ಈಗ ಅಧಿಕೃತವಾಗಿ ಮಾನ್ಯತೆಯನ್ನು ಪಡೆದಿರುವ ಬಣವು ಆಗ ರಾಜಕೀಯ ಪಕ್ಷದಲ್ಲಿ ಬಹುಮತವನ್ನು ಹೊಂದಿತ್ತು. ನಾವು ಮೇಲ್ನೋಟಕ್ಕೆ ಅನರ್ಹತೆಗೆ ಒಳಗಾಗಿದ್ದೇವೆ ಎಂದು ಅವರು ಭಾವಿಸಲು ಮತ್ತು ಹೇಳಲು ಸಾಧ್ಯವಿರಲಿಲ್ಲ. ಪಕ್ಷದ ಕಾರ್ಯಕರ್ತರಲ್ಲಿ ಅಗಾಧ ಅಸಮಾಧಾನವಿತ್ತು ಮತ್ತು ಮೈತ್ರಿಯಲ್ಲಿ ಮುಂದುವರಿಯಲು ಅವರು ಬಯಸಿರಲಿಲ್ಲ ’ಎಂದು ಕೌಲ್ ಹೇಳಿದರು.

ಶಾಸಕರಿಂದ ಬಂಡಾಯವನ್ನು ಗಮನಿಸಿ ಸದನ ಪರೀಕ್ಷೆಗೆ ಆದೇಶಿಸಿದ್ದು ರಾಜ್ಯಪಾಲರ ಸರಿಯಾದ ಕ್ರಮವಾಗಿತ್ತು ಎಂದು ಕೌಲ್ ವಾದಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮು.ನ್ಯಾ.ಚಂದ್ರಚೂಡ್ ಅವರು,ಕೆಲವು ರಾಜಕೀಯ ಪಕ್ಷಗಳು ಮೈತ್ರಿಕೂಟದಿಂದ ಹಿಂದೆ ಸರಿದಿದ್ದರೆ ನೀವು ಹೇಳಿದ್ದು ಸರಿಯಾಗುತ್ತಿತ್ತು. ನೀವು ಪ್ರತಿಪಾದಿಸುತ್ತಿರುವ ನಿಲುವನ್ನು ಒಪ್ಪಿಕೊಂಡರೆ ಅದು ಮೂಲಭೂತ ಫಲಿತಾಂಶಗಳಿಗೆ ಕಾರಣವಾಗುತ್ತದೆ ಎಂದು ಹೇಳಿದರು.

Similar News