×
Ad

ಹೂಕುಂಡ ಕಳವು ವಿಡಿಯೊ ವೈರಲ್: ಸಾಮಾಜಿಕ ಮಾಧ್ಯಮಗಳಲ್ಲಿ #ElvishYadav ಟ್ರೆಂಡಿಂಗ್

Update: 2023-03-01 21:41 IST

ಹೊಸ ದಿಲ್ಲಿ: ಗುರುಗ್ರಾಮದ ಜಿ-20 ಸಮಾರಂಭದ ಪ್ರದೇಶದಿಂದ ಹೂಕುಂಡಗಳು ಕಳವಾದ ಆಘಾತಕಾರಿ ವಿಡಿಯೊ ವೈರಲ್ ಆದ ಬೆನ್ನಿಗೇ, ಸಾಮಾಜಿಕ ಮಾಧ್ಯಮಗಳಲ್ಲಿ #ElvishYadav ಟ್ರೆಂಡ್ ಆಗಿದೆ ಎಂದು ndtv.com ವರದಿ ಮಾಡಿದೆ.

ಪ್ರಾಥಮಿಕವಾಗಿ ಉತ್ಕೃಷ್ಟ ದರ್ಜೆಯ ಕಾರುಗಳಿರುವ ವಿಡಿಯೊ ದೃಶ್ಯಾವಳಿಗಳನ್ನು ಪ್ರಸಾರ ಮಾಡುವ ಎಲ್ವಿಶ್ ಯಾದವ್, Elvish Yadav Vlogs ಹಾಗೂ Elvish Yadav ಎಂಬ ಎರಡು ಯೂಟ್ಯೂಬ್ ಚಾನೆಲ್‌ಗಳನ್ನು ಹೊಂದಿದ್ದು, ಅವುಗಳಿಗೆ ಕ್ರಮವಾಗಿ 36 ಲಕ್ಷ ಹಾಗೂ 92 ಲಕ್ಷ ಹಿಂಬಾಲಕರನ್ನು ಹೊಂದಿದ್ದಾರೆ.

ಹೂಕುಂಡ ಕಳವು ಮಾಡಿದ ವಿಡಿಯೊ ವೈರಲ್ ಆಗುತ್ತಿದ್ದಂತೆಯೇ ಸಾಮಾಜಿಕ ಮಾಧ್ಯಮ ಬಳಕೆದಾರರು ಆ ಕಾರಿನ ದೃಶ್ಯಾವಳಿ ಎಲ್ವಿಶ್ ಯಾದವ್ ವಿಡಿಯೊಗಳಲ್ಲಿ ಕಂಡು ಬರುವ ಕಾರಿನಂತೆಯೇ ಇದೆ ಎಂದು ಪ್ರತಿಪಾದಿಸಿದ್ದಾರೆ. ಆ ವಿಡಿಯೊವನ್ನು ಕಳೆದ ವರ್ಷ ಅಪ್ಲೋಡ್ ಮಾಡಲಾಗಿದ್ದು, ರಾಜಸ್ಥಾನದಲ್ಲಿ ನಡೆದಿದ್ದ ಆ ಕಾರು ರ್ಯಾಲಿಯಲ್ಲಿ ಎಲ್ವಿಶ್ ಕಾಣಿಸಿಕೊಂಡಿದ್ದ ಎಂದು ಹೇಳಿದ್ದಾರೆ. ಎರಡೂ ವಿಡಿಯೊಗಳ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ಸಾಮಾಜಿಕ ಮಾಧ್ಯಮ ಬಳಕೆದಾರರು, ಹೂಕುಂಡ ಕಳವು ಪ್ರಕರಣದ ತುಣುಕಿನಲ್ಲಿ ಕಂಡು ಬಂದಿರುವ ನೋಂದಣಿ ಸಂಖ್ಯೆ ಹಾಗೂ ರಾಜಸ್ಥಾನ ಕಾರು ರ್ಯಾಲಿಯಲ್ಲಿ ಕಂಡು ಬಂದ ಕಾರಿನ ನೋಂದಣಿ ಸಂಖ್ಯೆ ಒಂದೇ ಆಗಿದೆ ಎಂದು ಪ್ರತಿಪಾದಿಸಿದ್ದಾರೆ.

ಈ ಕುರಿತು ಕಳೆದ ರಾತ್ರಿ ಟ್ವೀಟ್ ಮಾಡಿ ಸ್ಪಷ್ಟೀಕರಣ ನೀಡಿರುವ ಎಲ್ವಿಶ್ ಯಾದವ್, "ಹೂಕುಂಡ ಹೊತ್ತೊಯ್ದ ವಿಡಿಯೊದಲ್ಲಿರುವ ಕಾರು ನನಗೆ ಸೇರಿದ್ದಲ್ಲ. ನನ್ನ ಬಗ್ಗೆ ಸುಳ್ಳು ಮಾಹಿತಿಯನ್ನು ಹರಡದಂತೆ ಎಲ್ಲರಲ್ಲೂ ನಾನು ಮನವಿ ಮಾಡಿಕೊಳ್ಳುತ್ತೇನೆ. ನನ್ನ ಕುರಿತು ಸುಳ್ಳು ಮಾಹಿತಿ ಹಂಚುತ್ತಿರುವವರ ವಿರುದ್ಧ ನಾನು ದಾವೆ ಹೂಡಲಿದ್ದೇನೆ" ಎಂದು ಎಚ್ಚರಿಸಿದ್ದಾರೆ.

ಈ ನಡುವೆ, ಈ ಕಳವು ಪ್ರಕರಣದಲ್ಲಿ ಗುರುಗ್ರಾಮ ಪೊಲೀಸರು ಮನಮೋಹನ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದು, ಆತನಿಂದ ಹೂಕುಂಡಗಳು ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.

Similar News