ಮೋದಿ ಪ್ರಧಾನಿಯಾದ ನಂತರ ದೇಶದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯ ಇನ್ನಷ್ಟು ಇಳಿಮುಖ: ವರದಿ

Update: 2023-03-03 10:46 GMT

ಹೊಸದಿಲ್ಲಿ: ದೇಶದ ಶೈಕ್ಷಣಿಕ ಸ್ವಾತಂತ್ರ್ಯ ಕಡಿಮೆಯಾಗುತ್ತಿರುವ ಟ್ರೆಂಡ್ 2014 ರಲ್ಲಿ ನರೇಂದ್ರ ಮೋದಿ (Narendra Modi) ಪ್ರಧಾನಿಯಾಗಿ ಆಯ್ಕೆಯಾಗುವುದರೊಂದಿಗೆ ಇನ್ನಷ್ಟು ಬಲವರ್ಧನೆಗೊಂಡಿತು ಎಂದು ಜಗತ್ತಿನಾದ್ಯಂತದ ವಿದ್ವಾಂಸರ ಗುಂಪೊಂದು ಹೊರತಂದಿರುವ 'ಅಕಾಡೆಮಿಕ್ ಫ್ರೀಡಂ ಇಂಡೆಕ್ಸ್ ಅಪ್ಡೇಟ್ 2023' ವರದಿ ತಿಳಿಸಿದೆ ಎಂದು scroll.in ವರದಿ ಮಾಡಿದೆ.

ಜಗತ್ತಿನಾದ್ಯಂತ 2,917 ತಜ್ಞರು ಈ ವರದಿಯನ್ನು ಸ್ವೀಡನ್ ದೇಶದ ವಿ-ಡೆಮ್ ಇನ್ಸ್ಟಿಟ್ಯೂಟ್ ಮತ್ತು ಜರ್ಮನಿಯ ಫ್ರೀಡ್ರಿಚ್ ಅಲೆಕ್ಸಾಂಡರ್ ವಿವಿಯ ಇನ್ಸ್ಟಿಟ್ಯೂಟ್ ಆಫ್ ಪೊಲಿಟಿಕಲ್ ಸಾಯನ್ಸ್ ಸಹಯೋಗದೊಂದಿಗೆ ಸಿದ್ಧಪಡಿಸಿದ್ದಾರೆ.

ಹತ್ತು ವರ್ಷಗಳ ಹಿಂದೆಗೆ ಹೋಲಿಸಿದಾಗ ಈಗ ಗಮನಾರ್ಹವಾಗಿ ಕಡಿಮೆ ಶೈಕ್ಷಣಿಕ ಸ್ವಾತಂತ್ರ್ಯವನ್ನು ವಿದ್ವಾಂಸರು ಮತ್ತು ವಿವಿಗಳು ಹೊಂದಿರುವ 22 ದೇಶಗಳ ಪಟ್ಟಿಯಲ್ಲಿ ಭಾರತ, ಚೀನಾ, ಅಮೆರಿಕಾ ಮತ್ತು ಮೆಕ್ಸಿಕೋ ಇವೆ.

ಒಟ್ಟು 179 ದೇಶಗಳ ಪೈಕಿ ಕೆಳಗಿನ ಶೇ. 30 ರಷ್ಟು ದೇಶಗಳ ಪಟ್ಟಿಯಲ್ಲಿ ಭಾರತವಿದ್ದು ಸೂಚ್ಯಂಕ ಸ್ಕೋರ್ 0.4 ಗಿಂತ ಕಡಿಮೆ ಇದೆ.

"ಭಾರತದಲ್ಲಿ ಶೈಕ್ಷಣಿಕ ಸ್ವಾತಂತ್ರ್ಯ 2009 ರಿಂದ ಇಳಿಮುಖವಾಗಿದೆ 2013 ರಿಂದ ಬಹಳಷ್ಟು ಇಳಿಮುಖ ಕಂಡಿದೆ ಹಾಗೂ 2014 ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದ ನಂತರ ಶೈಕ್ಷಣಿಕ ಸ್ವಾತಂತ್ರ್ಯ ಬಹಳಷ್ಟು ಕುಸಿದಿದೆ," ಎಂದು ವರದಿ ಹೇಳಿದೆ.

ಈ ಪಟ್ಟಿಯಲ್ಲಿ ಟಾಪ್ ಶೇ 50 ದೇಶಗಳಲ್ಲಿ ಅಮೆರಿಕಾ ಇದ್ದು ಅದರ ಸೂಚ್ಯಂಕ ಸ್ಕೋರ್ 0.8 ಗಿಂತ ಕಡಿಮೆ ಇದೆ. ಚೀನಾ ಕೆಳಗಿನ ಶೇ 10 ದೇಶಗಳ ಪೈಕಿ ಇದ್ದು ಅದರ ಸೂಚ್ಯಂಕ ಸ್ಕೋರ್ 0.1 ಗಿಂತ ಕಡಿಮೆಯಿದೆ.

ಸಂಶೋಧನೆ ಮತ್ತು ಕಲಿಸುವಿಕೆಯ ಸ್ವಾತಂತ್ರ್ಯ, ಶೈಕ್ಷಣಿಕ ವಿನಿಮಯದ ಸ್ವಾತಂತ್ರ್ಯ, ವಿವಿಗಳ ಸಾಂಸ್ಥಿಕ ಸ್ವಾಯತ್ತತೆ, ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಯ ಸ್ವಾತಂತ್ರ್ಯ, ಭದ್ರತೆ ಅತಿಕ್ರಮಣಗಳು ಮತ್ತು ಕ್ಯಾಂಪಸ್ ಸರ್ವೇಕ್ಷಣೆ ಸಹಿತ ಐದು ಸೂಚಿಕೆಗಳ ಆಧಾರದಲ್ಲಿ ಸೂಚ್ಯಂಕ ಸ್ಕೋರ್ ನೀಡಲಾಗಿದೆ.

ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ, ಐಟಿ ದಾಳಿ ಟೀಕಿಸಿದ ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶ ಜಸ್ಟಿಸ್  ರೋಹಿಂಟನ್ ನಾರಿಮನ್

Similar News