ಬಡವರಿಗೆ ಭಾರವಾಗುವ ಹಳೆ ಪಿಂಚಣಿ ವ್ಯವಸ್ಥೆ ಸಮಂಜಸವೇ?
2014ರಿಂದ 2019ರ ಅವಧಿಯಲ್ಲಿ ರಾಜ್ಯಗಳ ಒಟ್ಟು ಖರ್ಚುಗಳ ವಾರ್ಷಿಕ ಬೆಳವಣಿಗೆ ದರವು ಶೇ. 14.7ರಷ್ಟಿದ್ದು, ಅದೇ ಅವಧಿಯಲ್ಲಿಯ ಪಿಂಚಣಿ ಭಾರದ ವಾರ್ಷಿಕ ಬೆಳವಣಿಗೆ ದರವು ಶೇ. 12.8ಕ್ಕೆ ತಲುಪಿದೆ. ಆದರೆ ರಾಜ್ಯಗಳ ಒಟ್ಟು ಸರಾಸರಿ ವಾರ್ಷಿಕ ಆದಾಯ ಮಾತ್ರ ಶೇ. 13.41ರಷ್ಟಿದೆ. ಒಂದು ವೇಳೆ ಇದೇ ದರವು ಮುಂದುವರಿದಿದ್ದೇ ಆದಲ್ಲಿ 2040ರಲ್ಲಿ ಸರಕಾರದ ಒಟ್ಟು ವೆಚ್ಚದಲ್ಲಿ ಪಿಂಚಣಿ ವೆಚ್ಚದ ಪಾಲು ಶೇ. 14.7 ಮತ್ತು 2050ರಲ್ಲಿ ಶೇ. 19.4ರಷ್ಟಾಗಲಿದೆ. 6ನೇ ವೇತನ ಆಯೋಗದಿಂದಾಗಿ ವೇತನದಲ್ಲಾದ ಗಣನೀಯ ಹೆಚ್ಚಳದಿಂದ ಈಗಾಗಲೇ ಸರಕಾರಿ ವೆಚ್ಚದ ಮೇಲೆ ಹೊರೆಯಾಗಿದ್ದು, ಒಂದುವೇಳೆ ರಾಜ್ಯಗಳು ಒಪಿಎಸ್‌ಗೆ ಪುನಃ ಮರಳಿದಲ್ಲಿ ಅವುಗಳ ಒಟ್ಟು ವೆಚ್ಚವು ಆದಾಯವನ್ನು ಮೀರಲಿದೆ. ಇದರಿಂದ ಅಭಿವೃದ್ಧಿಗೆ ಅವಶ್ಯವಾದ ಹಣಕಾಸಿನ ಸಂಪನ್ಮೂಲವು ಸವೆಯಲಿದೆ.
ಇತ್ತೀಚೆಗೆ ಕೆಲವು ರಾಜ್ಯಗಳು ಹಳೆ ಪಿಂಚಣಿ ಪದ್ಧತಿ (ಒಪಿಎಸ್)ಗೆ ಮರಳುವುದಾಗಿ ಘೋಷಿಸಿದ ನಂತರ ಅನೇಕ ರಾಜ್ಯಗಳಲ್ಲಿ ಸರಕಾರಿ ಉದ್ಯೋಗಿಗಳ ಒಪಿಎಸ್ ಬೇಡಿಕೆ ತೀವ್ರಗೊಂಡಿದೆ. ಒಪಿಎಸ್‌ಗೆ ಸಂಬಂಧಿಸಿದ ಮುಖ್ಯವಾಹಿನಿ ಟೀಕೆಯು ಸರಕಾರಿ ವ್ಯವಸ್ಥೆಯ ಅದಕ್ಷತೆ ಮತ್ತು ನವಉದಾರೀಕಣದ ಮಾರುಕಟ್ಟೆ ಚೌಕಟ್ಟಿಗೆ ಸೀಮಿತವಾಗಿದೆ. ದೇಶದಲ್ಲಿ ಹೆಚ್ಚುತ್ತಿರುವ ಆದಾಯ ಅಸಮತೋಲನ ಸಂದರ್ಭದಲ್ಲಿ ರಾಜ್ಯಗಳು ಒಪಿಎಸ್‌ಗೆ ಮರಳುವುದರಿಂದ ಆಗುವ ಪರಿಣಾಮಗಳ ಚರ್ಚೆಯನ್ನು ನಾವಿಂದು ಕೇವಲ ನವಉದಾರೀಕರಣದ ಚೌಕಟ್ಟಿಗೆ ಸೀಮಿತಗೊಳಿಸದೆ ವರ್ಗ ಮತ್ತು ಕಲ್ಯಾಣ ದೃಷ್ಟಿಕೋನದಿಂದ ವಿಶ್ಲೇಷಣೆ ಮಾಡುವುದು ತುಂಬಾ ಮುಖ್ಯವಾಗಿದೆ.
ವಸಾಹತುಶಾಹಿ ಪರಂಪರೆ ಮತ್ತು ಸರಕಾರದ ಮೇಲಿನ ಹೊರೆ
ನೌಕರಶಾಹಿ ಪಿಂಚಣಿ ವ್ಯವಸ್ಥೆಯನ್ನು ಬ್ರಿಟಿಷ್ ವಸಾಹತುಶಾಹಿ ಆಡಳಿತವು ಪ್ರಾರಂಭಿಸಿದ್ದು, ಭಾರತೀಯರ ಶೋಷಣೆಯಿಂದ ಗಳಿಸಿದ ಆದಾಯದಿಂದ ಪಿಂಚಣಿಯನ್ನು ಕೊಡಲು ಪ್ರಾರಂಭಿಸಿತು. ಆದರೆ ಒಂದು ಸ್ವತಂತ್ರ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಕಾರದ ಶೇ. 9 ವೆಚ್ಚ ದೇಶದ ಕೆಲವೇ ಕೆಲವು ಜನರಿಗೆ ಖರ್ಚು ಮಾಡುವುದು ಅನೇಕ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಹೀಗಾಗಿ ಒಪಿಎಸ್‌ನ್ನು ಹೆಚ್ಚುತ್ತಿರುವ ಬಡತನ ಮತ್ತು ಆದಾಯ ಅಮಸಮತೋಲನೆಯೊಂದಿಗೆ ತುಲನಾತ್ಮಕವಾಗಿ ವಿಶ್ಲೇಷಣೆ ಮಾಡುವುದು ಇಂದಿನ ಅವಶ್ಯವಾಗಿದೆ. ಕೊಡುಗೆ ಆಧಾರಿತ ಹೊಸ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್)ಯನ್ನು 2004ರಲ್ಲಿ ಜಾರಿಗೊಳಿಸಲಾಗಿದೆ. ಉದ್ಯೋಗಿಗಳ ಎನ್‌ಪಿಎಸ್ ಕೊಡುಗೆಯನ್ನು ಸರಿದೂಗಿಸಲು ಮತ್ತು ಅವರ ಭವಿಷ್ಯಕ್ಕೆ ಹೆಚ್ಚಿನ ಉಳಿತಾಯ ಆಗಲೆಂದು 6ನೇ ವೇತನ ಆಯೋಗವು ಸರಕಾರಿ ಉದ್ಯೋಗಿಗಳ ವೇತನವನ್ನು ಗಣನೀಯವಾಗಿ ಹೆಚ್ಚಿಸಿದೆ. ಇಂದು 7ನೇ ವೇತನ ಆಯೋಗದ ನಿಯಮದಂತೆ 4ನೇ ದರ್ಜೆಯ ಉದ್ಯೋಗಿಯ ಕನಿಷ್ಠ ಸಂಬಳವು ರೂ. 25,000 ಇದೆ. ವಿಶ್ವ ಅಸಮತೋಲನಾ ವರದಿ 2022ರ ಪ್ರಕಾರ ದೇಶದ ತಳಮಟ್ಟದ ಶೇ. 50ರಷ್ಟು ಜನಸಂಖ್ಯೆಯ ಆದಾಯ ತಿಂಗಳಿಗೆ ಕೇವಲ ರೂ. 4,468ರಷ್ಟಿದೆ. ಮಧ್ಯಮ ಶೇ. 40 ಜನಸಂಖ್ಯೆಯ ಆದಾಯ ರೂ. 14,669.7ರಷ್ಟಿದೆ. ಅಂದರೆ ಸರಕಾರಿ ಉದ್ಯೋಗಿಗಳ ಸಂಬಳ ದೇಶದ ಶೇ. 90 ಜನಸಂಖ್ಯೆಯ ಆದಾಯಕ್ಕಿಂತಲೂ ಹೆಚ್ಚಿದೆ. ಒಪಿಎಸ್ ನೀತಿಯು ಈಗಾಗಲೇ ಉತ್ತಮ ಸ್ತರದಲ್ಲಿರುವ ಅಲ್ಪಸಂಖ್ಯೆಯ ಜನಸಂಖ್ಯೆಯ ಉದ್ಯೋಗಿಗಳ ಪರವಾಗಿ ಸಂಪತ್ತನ್ನು ಹಂಚುವ ಪ್ರತಿಗಾಮಿ ಪುನರ್ವಿತರಣೆ ವ್ಯವಸ್ಥೆಯಾಗಿದೆ. 6ನೇ ವೇತನ ಆಯೋಗದ ಒಬ್ಬ ಸರಕಾರಿ ನೌಕರನು ಪಡೆಯುವ ಕನಿಷ್ಠ ಪಿಂಚಣಿಯು ರೂ. 9,000ರಷ್ಟಿದೆ. ಸುಮಾರು 14 ರಾಜ್ಯಗಳಲ್ಲಿ ಅದೇ ನೌಕರಶಾಹಿಯ ಮೇಲ್ವಿಚಾರಣೆಯಲ್ಲಿ ನಿರ್ಧರಿಸುವ ಸಾಮಾಜಿಕ ಭದ್ರತೆ ಪಿಂಚಣಿಯು ಕೇವಲ ರೂ. 500 ಇದೆ. ಇನ್ನು ಕೆಲವು ರಾಜ್ಯಗಳಲ್ಲಿ ಇದು ರೂ. 2,000ರಷ್ಟಿದೆ.
ವಿತ್ತೀಯ ಅವಶ್ಯಕತೆಗಳು ಮತ್ತು ಹೊರೆ
ಎನ್‌ಪಿಎಸ್ ಆರ್ಥಿಕ ಸುಧಾರಣೆಯ ಒಂದು ಭಾಗವಾಗಿ ಪ್ರಭುತ್ವದ ಪಿಂಚಣಿ ಭಾರ ತಗ್ಗಿಸುವ ಒಂದು ಕ್ರಮವಾಗಿದ್ದು, ದೇಶದ ಅಭಿವೃದ್ಧಿಗೆ ಹಣಕಾಸು ಜೋಡಿಸುವ ಸದುದ್ದೇಶವನ್ನು ಹೊಂದಿದೆ. ಆದರೆ ಪ್ರಸಕ್ತ ಒಪಿಎಸ್ ಅಡಿಯಲ್ಲಿರುವ ಸರಕಾರಿ ನೌಕರರನ್ನು ಎನ್‌ಪಿಎಸ್‌ಗೆ ಬದಲಾಯಿಸುವುದು ಆಡಳಿತಾತ್ಮಕ ಹಾಗೂ ರಾಜಕೀಯವಾಗಿ ಕ್ಲಿಷ್ಟಕರವಾಗಿದ್ದು ಮಾತ್ರವಲ್ಲದೆ ಎನ್‌ಪಿಎಸ್‌ಅನ್ನು ದೃಷ್ಟಿಯಲ್ಲಿಟ್ಟುಕೊಂಡು 6ನೇ ವೇತನ ಆಯೋಗವು ಮಾಡಿದ ವೇತನ ಪರಿಷ್ಕರಣೆಯು ಸರಕಾರಕ್ಕೆ ದೊಡ್ಡ ಹೊರೆಯಾಗಿ ಮಾರ್ಪಟ್ಟಿದೆ. 2021-22ರ ಅಂಕಿ ಅಂಶಗಳ ಪ್ರಕಾರ ಪ್ರಸಕ್ತ ಒಪಿಎಸ್‌ನ ಹೊರೆಯು ರಾಜ್ಯಗಳ ಒಟ್ಟು ದೇಶಿಯ ಉತ್ಪನ್ನದ (ಜಿಡಿಪಿ) ಶೇ. 1.2ರಷ್ಟಿದೆ. 1990-91ರಲ್ಲಿ ರಾಜ್ಯಗಳ ಒಟ್ಟು ವೆಚ್ಚದಲ್ಲಿ ಶೇ. 3.43 ರಷ್ಟಿದ್ದ ಪಿಂಚಣಿಯ ಪಾಲು 2021-22ರಲ್ಲಿ ಶೇ. 8.8ಕ್ಕೇರಿದೆ. ದೇಶದ ಸುಮಾರು ಶೇ. 90 ಜನಸಂಖ್ಯೆ ಅಸಂಘಟಿತ ವಲಯದಲ್ಲಿ ಯಾವುದೇ ಸಾಮಾಜಿಕ ಸುರಕ್ಷತೆ ಇಲ್ಲದೆ ಬದುಕುತ್ತಿರುವಾಗ ಪ್ರಭುತ್ವದ ಸಂಪನ್ಮೂಲವನ್ನು ಅತಿ ಚಿಕ್ಕ ಸಂಖ್ಯೆಯ, ಉತ್ತಮಜೀವನಮಟ್ಟ ಹೊಂದಿರುವ ಜನಸಂಖ್ಯೆಗೆ ವ್ಯಯಿಸುವುದು ಪ್ರಶ್ನಾರ್ಹವಾಗಿದೆ. 2014ರಿಂದ 2019ರ ಅವಧಿಯಲ್ಲಿ ರಾಜ್ಯಗಳ ಒಟ್ಟು ಖರ್ಚುಗಳ ವಾರ್ಷಿಕ ಬೆಳವಣಿಗೆ ದರವು ಶೇ. 14.7ರಷ್ಟಿದ್ದು, ಅದೇ ಅವಧಿಯಲ್ಲಿಯ ಪಿಂಚಣಿ ಭಾರದ ವಾರ್ಷಿಕ ಬೆಳವಣಿಗೆ ದರವು ಶೇ. 12.8ಕ್ಕೆ ತಲುಪಿದೆ. ಆದರೆ ರಾಜ್ಯಗಳ ಒಟ್ಟು ಸರಾಸರಿ ವಾರ್ಷಿಕ ಆದಾಯ ಮಾತ್ರ ಶೇ. 13.41ರಷ್ಟಿದೆ. ಒಂದು ವೇಳೆ ಇದೇ ದರವು ಮುಂದುವರಿದಿದ್ದೇ ಆದಲ್ಲಿ 2040ರಲ್ಲಿ ಸರಕಾರದ ಒಟ್ಟು ವೆಚ್ಚದಲ್ಲಿ ಪಿಂಚಣಿ ವೆಚ್ಚದ ಪಾಲು ಶೇ. 14.7 ಮತ್ತು 2050ರಲ್ಲಿ ಶೇ. 19.4ರಷ್ಟಾಗಲಿದೆ. 6ನೇ ವೇತನ ಆಯೋಗದಿಂದಾಗಿ ವೇತನದಲ್ಲಾದ ಗಣನೀಯ ಹೆಚ್ಚಳದಿಂದ ಈಗಾಗಲೇ ಸರಕಾರಿ ವೆಚ್ಚದ ಮೇಲೆ ಹೊರೆಯಾಗಿದ್ದು, ಒಂದುವೇಳೆ ರಾಜ್ಯಗಳು ಒಪಿಎಸ್‌ಗೆ ಪುನಃ ಮರಳಿದಲ್ಲಿ ಅವುಗಳ ಒಟ್ಟು ವೆಚ್ಚವು ಆದಾಯವನ್ನು ಮೀರಲಿದೆ. ಇದರಿಂದ ಅಭಿವೃದ್ಧಿಗೆ ಅವಶ್ಯವಾದ ಹಣಕಾಸಿನ ಸಂಪನ್ಮೂಲವು ಸವೆಯಲಿದೆ.
ಹಲವು ರಾಜ್ಯಗಳು 7ನೇ ವೇತನ ಆಯೋಗದ ಮಾನದಂಡಗಳನ್ನು ಕಾರ್ಯರೂಪಕ್ಕೆ ತರಲು ಸಂಪನ್ಮೂಲಗಳನ್ನು ಹೊಂದಿಸಲು ಹೆಣಗಾಡುತ್ತಿದ್ದರೆ ಇನ್ನೂ ಕೆಲ ರಾಜ್ಯಗಳು 6ನೇ ವೇತನ ಆಯೋಗದ ಹಿಂಬಾಕಿಯನ್ನೇ ಪಾವತಿಸಿಲ್ಲ. ನವ ಉದಾರವಾದಿ ಚೌಕಟ್ಟಿನಿಂದಾಗಿ ಸರಕಾರಗಳು, ವಿಶೇಷವಾಗಿ ರಾಜ್ಯಗಳು ಹಣಕಾಸಿನ ಸ್ವಾಯತ್ತತೆಯನ್ನು ಹೊಂದಿಲ್ಲವಾದ್ದರಿಂದ ಸಂಪನ್ಮೂಲಗಳ ಹೊಂದಾಣಿಕೆಯು ತುಂಬಾ ಕಷ್ಟಕರವಾಗಿದೆ. ರಾಜ್ಯಗಳ ಆದಾಯದ ಮೂಲಗಳಲ್ಲಿ ಪರೋಕ್ಷ ತೆರಿಗೆಯು ಪ್ರಮುಖ ಪಾತ್ರ ವಹಿಸುತ್ತದೆ. ಪ್ರಸಕ್ತ ಅಂಕಿಅಂಶಗಳ ಪ್ರಕಾರ, ಜನಸಂಖ್ಯೆಯ ತಳಮಟ್ಟದ ಶೇ. 50ರಷ್ಟು ಸಂಖ್ಯೆಯ ಜನರು ತಮ್ಮ ಆದಾಯದ ಶೇಕಡಾವಾರು ಪರೋಕ್ಷ ತೆರಿಗೆಗಿಂತಲೂ ಆರು ಪಟ್ಟು ಹೆಚ್ಚಿನ ತೆರಿಗೆ ಭಾರವನ್ನು ಹೊರುತ್ತಿದ್ದಾರೆ. ಒಪಿಎಸ್‌ನಿಂದಾಗಿ, ಸರಕಾರಿ ನೌಕರರಿಗಿಂತಲೂ ಕಡಿಮೆ ಮಾಸಿಕ ಆದಾಯವನ್ನು ಹೊಂದಿರುವ ಶೇ. 90ರಷ್ಟು ಜನಸಮುದಾಯವು ಮುಂದಿನ ದಿನಗಳಲ್ಲಿ ಅತೀ ಕಷ್ಟದ ದಿನಗಳನ್ನು ಎದುರಿಸಲಿದ್ದು, ರಾಜ್ಯಗಳಲ್ಲಿ ಕಡುಬಡತನ ಹಾಗೂ ನಿರ್ಗತಿಕರ ಪ್ರಮಾಣವನ್ನು ಹೆಚ್ಚಿಸಲಿದೆ.
ಸಾರ್ವಜನಿಕ ಸೌಲಭ್ಯಗಳು
ದೇಶದ ಜನಸಂಖ್ಯೆಯ ಸರಾಸರಿ ವಯಸ್ಸು 30 ವರ್ಷಗಳಿಗೆ ಸಮೀಪಿಸುತ್ತಿದ್ದು, ಮುಂದಿನ 2-3 ದಶಕಗಳಲ್ಲಿ ಹಲವು ರಾಜ್ಯಗಳ ಯುವಪೀಳಿಗೆಯು ವೃದ್ಧಾಪ್ಯಕ್ಕೆ ತಲುಪಲಿದೆ. ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ನಾವು ಅದರ ಸದುಪಯೋಗ ಪಡೆದುಕೊಳ್ಳಬೇಕಾದರೆ ಸಾರ್ವಜನಿಕ ಶಿಕ್ಷಣ ಮತ್ತು ಆರೋಗ್ಯದ ಸೌಕರ್ಯಗಳನ್ನು ಪೂರೈಸುವುದು ಅನಿವಾರ್ಯವಾಗಿದೆ. ಅಲ್ಲದೆ ಈ ಎರಡು ರಂಗಗಳಿಗೆ ಅತೀ ಹೆಚ್ಚು ಮಾನವ ಸಂಪನ್ಮೂಲದ ಅವಶ್ಯಕತೆಯೂ ಇದೆ. ಒಂದು ವೇಳೆ ಅವಶ್ಯಕ ಮಾನವ ಸಂಪನ್ಮೂಲವನ್ನು ಒಪಿಎಸ್ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುತ್ತಾ ಹೋದಲ್ಲಿ ಅತ್ಯವಶ್ಯಕ ಸಾರ್ವಜನಿಕ ಸರಕುಗಳಾದ ಶಿಕ್ಷಣ ಮತ್ತು ಆರೋಗ್ಯವನ್ನೂ ಪೂರೈಸುವುದು ಸರಕಾರಕ್ಕೆ ಸವಾಲಾಗಿ ಪರಿಣಮಿಸಲಿದ್ದು ದೊಡ್ಡಸಂಖ್ಯೆಯ ಜನಸಮುದಾಯವು ಅವಶ್ಯಕ ಸೌಕರ್ಯಗಳಿಂದ ವಂಚಿತವಾಗುತ್ತದೆ. ಆಡಳಿತದಲ್ಲಿ ಹಣಕಾಸಿನ ಮಿತವ್ಯಯತೆಯನ್ನು ಕಾಪಾಡಲು ಸಾಲಪಡೆದು ಖರ್ಚುಮಾಡುವ ಸರಕಾರದ ಮನಸ್ಥಿತಿಯಲ್ಲಿ ಬದಲಾವಣೆಯಾಗುತ್ತಿದ್ದು ಒಪಿಎಸ್‌ನಿಂದ ಹೆಚ್ಚಾಗುವ ಸಾರ್ವಜನಿಕ ಹೊರೆಯನ್ನು ಸರಕಾರಗಳು ಸಾಮಾಜಿಕ ವಲಯದ ಮೇಲಿನ ವೆಚ್ಚವನ್ನು ಇನ್ನೂ ಕಡಿಮೆ ಮಾಡುವುದರ ಮೂಲಕ ನಿಭಾಯಿಸಬೇಕಾದ ಸಂದರ್ಭ ಎದುರಾಗುತ್ತದೆ. ಈಗಾಗಲೇ ಆದಾಯ ಮತ್ತು ಸಂಪತ್ತಿನ ಅಸಮಾನತೆಯಿಂದ ದೇಶವು ಬಳಲುತ್ತಿದ್ದು ಒಂದು ವೇಳೆ ಸಾಮಾಜಿಕ ವಲಯದ ಮೇಲಿನ ವೆಚ್ಚದಲ್ಲಿ ಇನ್ನೂ ಕಡಿತವುಂಟಾದರೆ ಆರ್ಥಿಕ ಮತ್ತು ಸಾಮಾಜಿಕವಾಗಿ ದುರ್ಬಲವಾಗಿರುವ ಸಮುದಾಯಗಳ ಪರಿಸ್ಥಿತಿ ಹದಗೆಡಲಿದೆ.
ಈಗಾಗಲೇ ಉತ್ತಮ ಜೀವನಮಟ್ಟ, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯವನ್ನು ಹೊಂದಿರುವ ಸರಕಾರಿ ನೌಕರರು, ವಿಶೇಷವಾಗಿ ಮೇಲ್‌ಸ್ತರದ ಮೇಲ್ವಿಚಾರಣಾ ಹುದ್ದೆಗಳಲ್ಲಿರುವವರು ದೇಶದ ಬಡಜನರ ಹೋಲಿಕೆಯಲ್ಲಿ ಉತ್ತಮ ಜೀವನ ನಿರೀಕ್ಷೆಯ ಪ್ರಮಾಣವನ್ನುಹೊಂದಿದ್ದಾರೆ. ಒಪಿಎಸ್ ವ್ಯವಸ್ಥೆಯು ಭವಿಷ್ಯದ ಖಾಸಗಿ ಕಾರ್ಮಿಕ ಮಾರುಕಟ್ಟೆಯಲ್ಲಿ ಈ ವರ್ಗದ ಪ್ರಾಬಲ್ಯವನ್ನು ಮತ್ತಷ್ಟು ಹೆಚ್ಚಿಸಲು ದಾರಿಯಾಗಲಿದೆ. ಐತಿಹಾಸಿಕವಾಗಿ ನೋಡುವುದಾದರೆ ಈ ಮೇಲ್ವಿಚಾರಣಾ ಅಧಿಕಾರಶಾಹಿ ವರ್ಗವು ಸ್ವಾತಂತ್ರಾನಂತರದ ಭಾರತದಲ್ಲಿ ಖಾಸಗಿ ರಂಗದಲ್ಲಿ ಏಕಸ್ವಾಮ್ಯತೆಯನ್ನು ಸಾಧಿಸಿ ತನ್ನ ಬೇರುಗಳನ್ನು ಬಲಪಡಿಸಿಕೊಂಡಿದೆ. ಆದರೆ ಕಾರ್ಮಿಕ ವರ್ಗದ ವೇತನ ಶೋಷಣೆ ಹಾಗೂ ಮಾನವ ಯೋಗ್ಯವಲ್ಲದ ಜೀವನ ಮಾತ್ರ ಹಾಗೆಯೇ ಮುಂದುವರಿದಿದೆ. ಮುಂದುವರಿಯಲಿದೆ. ಅಭಿವೃದ್ಧ್ದಿಶೀಲ ರಾಷ್ಟ್ರದಲ್ಲಿ ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರಕಾರವು ದೇಶದ ಸಂಪನ್ಮೂಲಗಳು ಉತ್ತಮವಾಗಿ ಮರುಹಂಚಿಕೆಯಾಗುವಂತಹ ದೃಢ ನಿರ್ಧಾರಗಳೆಡೆಗೆ ತಮ್ಮ ಗಮನವನ್ನು ಕೇಂದ್ರೀಕರಿಸಿ ಬಡ-ದುರ್ಬಲ ವರ್ಗದ ಜೀವನಮಟ್ಟವನ್ನು ಸುಧಾರಿಸಲು ಶ್ರಮಿಸಬೇಕು. ಆದಾಯ ಮತ್ತು ಸಂಪತ್ತಿನ ತೀವ್ರ ಅಸಮಾನತೆಯಿಂದ ನಲುಗುತ್ತಿರುವ ದೇಶದಲ್ಲಿ ಒಪಿಎಸ್‌ಗೆ ಪುನಃ ಮರಳುವುದೆಂದರೆ ನೈತಿಕ ಕ್ಷೋಭೆಯ ಹಾಗೂ ಕಲ್ಯಾಣ ಅಡಿಪಾಯವನ್ನು ನಾಶಪಡಿಸುವ ನಡೆಯೆಂದೇ ಅರ್ಥೈಸಬಹುದಾಗಿದೆ. ಒಪಿಎಸ್‌ನ ವಿರೋಧವೆಂಬುದು ಸರಕಾರವನ್ನು ಸಣ್ಣದಾಗಿ ಬಿಂಬಿಸುವ ಒಂದು ಅಸ್ತ್ರವಾಗದೆ, ಸಂಪನ್ಮೂಲಗಳ ಸಮಾನ ಹಂಚಿಕೆ ಹಾಗೂ ಸಾರ್ವಜನಿಕ ಸರಕು- ಸೌಲಭ್ಯಗಳ ಸಾರ್ವತ್ರಿಕ ವಿಸ್ತರಣೆಗಾಗಿ ವಾದಿಸುವ ಅಸ್ತ್ರವಾಗಲಿ. ಹಾಗಾದಲ್ಲಿ ಸರಕಾರಿ ನೌಕರರನ್ನೊಳಗೊಂಡು ಸಮಾಜದ ಇನ್ನೂ ಹೆಚ್ಚಿನ ಜನರು ಜೀವನದ ಕನಿಷ್ಠ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಹಾಯಕಾರಿಯಾಗಲಿದೆ ಮತ್ತು ಯುವಕರಿಗೆ ಹೆಚ್ಚು ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತವೆ.
ತೀವ್ರ ಆದಾಯ ಅಸಮಾನತೆಯನ್ನು ಎದುರಿಸುತ್ತಿರುವ ಆರ್ಥಿಕತೆಯಲ್ಲಿ ಭಾಗವಹಿಸುವಿಕೆಯ ಪಿಂಚಣಿ ವ್ಯವಸ್ಥೆಯು ಸರಕಾರಿ ನೌಕರರಿಗೆ ಹೆಚ್ಚು ಸಮಾನತೆಯ ಫಲವನ್ನು ನೀಡುತ್ತದೆ. ಮಾರುಕಟ್ಟೆಯಲ್ಲಿನ ನಿರೀಕ್ಷಿತ/ಅನಿರೀಕ್ಷಿತ ಬದಲಾವಣೆಗಳಿಂದಾಗಿ ನೌಕರರನ್ನು ರಕ್ಷಿಸಲು, ವಿಶೇಷವಾಗಿ ಕೆಳಶ್ರೇಣಿಯ ನೌಕರರನ್ನು ರಕ್ಷಿಸಲು ಖಾತರಿ ಪಡಿಸಿದ ಮಾಸಿಕ ಆದಾಯ ಸಿಗುವಂತೆ ಎನ್‌ಪಿಎಸ್‌ನಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಬೇಕಾಗಿದೆ. ವಿವಿಧ ಶ್ರೇಣಿಯ ನೌಕರರ ನಡುವಿನ ವೇತನ ತಾರತಮ್ಯವನ್ನು ಹೋಗಲಾಡಿಸಲು ಕೆಲ ಆಡಳಿತಾತ್ಮಕ ಸುಧಾರಣೆಗಳ ಅವಶ್ಯಕತೆಯೂ ಇದೆ. ಉದ್ಯೋಗ ಮತ್ತು ವೇತನ ರಚನೆಯನ್ನು ತರ್ಕಬದ್ಧಗೊಳಿಸುವಾಗ ಮಾನವ ಬಂಡವಾಳದ ಬಹುಮುಖ್ಯ ಭಾಗವಾಗಿರುವ ಮೇಲ್ವಿಚಾರಕೇತರ ನೌಕರಶಾಹಿ ಮತ್ತು ಯಾವುದೇ ಭಾಗವಾಗಿರದ ಮೇಲ್ವಿಚಾರಕ ನೌಕರಶಾಹಿಯ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸುವುದು ಅತ್ಯವಶ್ಯಕವಾಗಿದೆ. ನವಉದಾರವಾದದೊಂದಿಗಿನ ಅಸಮಾಧಾನವೇ ಒಪಿಎಸ್‌ನ ಬೇಡಿಕೆಗೆ ಪ್ರಾಥಮಿಕ ಕಾರಣವಾಗಿದೆ.
ತೀವ್ರ ಹಸಿವಿನಿಂದಾಗಿ 5 ವರ್ಷದ ಕೆಳಗಿನ ವಯಸ್ಸಿನ ಮಕ್ಕಳ ಮರಣದ ಸಂಖ್ಯೆಯು ತೀವ್ರವಾಗಿ ಕಾಡುತ್ತಿರುವಾಗ ಮತ್ತು ಬಡವರ ಸಂಖ್ಯೆಯು 229 ದಶಕಕ್ಕೆ ತಲುಪಿದಾಗ ಆಡಳಿತ ಯಂತ್ರದ ನೀತಿರಚನೆಯಲ್ಲಿ ತನ್ನದೇ ಆದ ಪ್ರಭಾವವನ್ನು ಹೊಂದಿರುವ ನೌಕರಶಾಹಿಯು ಒಂದುಗೂಡಿ ರಾಜಕೀಯ ಕಾರ್ಯನಿರ್ವಾಹಕರ ಪಿಂಚಣಿ ಮತ್ತು ದುಂದುವೆಚ್ಚಗಳನ್ನು ತರ್ಕಬದ್ಧಗೊಳಿಸುವ ಕುರಿತ ನಿರ್ಧಾರ ಪ್ರಕ್ರಿಯೆಯಲ್ಲಿ ನಿಯಮಾನುಸಾರ ಭಾಗವಹಿಸಿ ಸರಕಾರಕ್ಕಾಗುವ ಹೊರೆಯನ್ನು ತಪ್ಪಿಸಬಹುದು. ಅಷ್ಟೇ ಅಲ್ಲದೆ ದೇಶದ ಶೇ.72ರಷ್ಟು ಸಂಪತ್ತಿಗೆ ಒಡೆಯರಾಗಿರುವ ಶೇ.10ರಷ್ಟಿರುವ ಅಗ್ರ ಶ್ರೀಮಂತರ ಮೇಲೆ ಪ್ರಗತಿಪರ ತೆರಿಗೆಯನ್ನು ವಿಧಿಸುವಂತಹ ನಿರ್ಧಾರದಲ್ಲಿಯೂ ಪ್ರಭಾವ ಬೀರಿ ದೇಶದಲ್ಲಿ ಬೆಳೆಯುತ್ತಿರುವ ಬಡತನ ಮತ್ತು ಅಸಮಾನತೆಯನ್ನು ಹೋಗಲಾಡಿಸುವಲ್ಲಿ ನೌಕರಶಾಹಿಯು ತಮ್ಮದೇ ಆದ ಕೊಡುಗೆಯನ್ನು ನೀಡಬಹುದಾಗಿದೆ.
(ಗೌರಿಶಂಕರ ಎಸ್. ಹೀರೆಮಠ, ಸಹ ಪ್ರಾಧ್ಯಾಪಕರು, ಐಐಟಿ ಖರಗ್ಪುರ
ಮುಹಮ್ಮದ್ ಹಬೀಬ್, ಸಹಾಯಕ ಪ್ರಾಧ್ಯಾಪಕರು, ಜೈನ್ ವಿಶ್ವವಿದ್ಯಾನಿಲಯ, ಬೆಂಗಳೂರು)