ಯೂಟ್ಯೂಬ್ ನಲ್ಲಿ ಲೈಕ್ ಮಾಡುವ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ಮಹಿಳೆಗೆ ರೂ. 11 ಲಕ್ಷ ವಂಚನೆ

Update: 2023-03-05 06:55 GMT

ಮುಂಬೈ: ಅಸ್ತಿತ್ವದಲ್ಲೇ ಇಲ್ಲದ ಆರು ತಂತ್ರಜ್ಞಾನ ಕಂಪನಿಗಳ ಐದು ನಿರ್ದೇಶಕರು, ಯೂಟ್ಯೂಬ್ (Youtube) ವಿಡಿಯೊಗಳನ್ನು ಲೈಕ್ ಮಾಡುವ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ, ನಂತರ ಉತ್ತಮ ಆದಾಯವಿರುವ ತಮ್ಮ ವ್ಯಾಪಾರಿ ಗುಂಪನ್ನು ಸೇರುವಂತೆ ಆಮಿಷವೊಡ್ಡಿ 29 ವರ್ಷದ ಮಹಿಳೆಗೆ ವಂಚಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಆರೋಪಿಗಳನ್ನು ಪುಣೆ ಮೂಲದ ಬಿಂದುಸಾರ್ ಶೆಲಾರ್ (40), ಮಹೇಶ್ ರಾವತ್ (24), ಯೋಗೇಶ್ ಖೌಲೆ (28) ಹಾಗೂ ಅಮರಾವತಿ ಮೂಲದ ಅಕ್ಷಯ್ ಖಡ್ಸೆ (27) ಮತ್ತು ಅಮಿತ್ ತವರ್ (28) ಎಂದು ಗುರುತಿಸಲಾಗಿದೆ.

ಆರೋಪಿಗಳು ಮಹಿಳೆಯ ಹೆಸರಲ್ಲಿ ವರ್ಚುಯಲ್ ವ್ಯಾಲೆಟ್ ಸೃಷ್ಟಿಸಿ ಆಕೆ ಹಣ ಗಳಿಸುತ್ತಿರುವಂತೆ ನಂಬಿಸಿದ್ದಾರೆ ಹಾಗೂ ಆಕೆಯ ಖಾತೆಯನ್ನು ತಡೆ ಹಿಡಿಯಲಾಗಿದೆ ಎಂದು ಮುಂಬೈ ಪೊಲೀಸರ ಹೆಸರಲ್ಲಿ ಆಕೆಗೆ ಪತ್ರ ರವಾನಿಸಿದ್ದಾರೆ. ನಂತರ ಆಕೆಯ ಖಾತೆಯನ್ನು ಮರು ಚಾಲನೆಗೊಳಿಸಲಾಗುವುದು ಎಂದು ಹೇಳಿ ಆಕೆಯಿಂದ ಎರಡು ವಾರಗಳ ಅಂತರದಲ್ಲಿ ರೂ. 11.4 ಲಕ್ಷ ಹಣವನ್ನು ಸಂಗ್ರಹಿಸಿ, ವಂಚಿಸಿದ್ದಾರೆ.

ಈ ಕುರಿತು ತನಿಖೆ ನಡೆಸಿದ ಪೊಲೀಸರಿಗೆ, ಮಹಿಳೆಯು ಉದ್ಯೋಗಕ್ಕಾಗಿ ಎರಡು ಉದ್ಯೋಗ ಜಾಲತಾಣಗಳಲ್ಲಿ ತನ್ನ ಬಯೋಡೇಟಾ ಅಪ್ಲೋಡ್ ಮಾಡಿರುವ ಸಂಗತಿ ಗಮನಕ್ಕೆ ಬಂದಿದೆ. ಆಕೆಗೆ ವ್ಯಕ್ತಿಯೊಬ್ಬ ವಾಟ್ಸ್ ಆ್ಯಪ್ ಸಂದೇಶ ಕಳಿಸಿ, ನೀವೇನಾದರೂ ಯೂಟ್ಯೂಬ್ ವಿಡಿಯೊಗಳನ್ನು ಲೈಕ್ ಮಾಡಿ, ಅದರ ಸ್ಕ್ರೀನ್ ಶಾಟ್‌ಗಳನ್ನು ಇದೇ ವಾಟ್ಸ್ ಆ್ಯಪ್ ಸಂಖ್ಯೆಗೆ ಕಳಿಸುವ ಕೆಲಸ ಮಾಡಲು ಇಚ್ಛಿಸುತ್ತೀರಾ ಎಂದು ಪ್ರಶ್ನಿಸಿದ್ದಾನೆ. ನಂತರ ಆಕೆಗೆ ವಿಡಿಯೊ ಕೊಂಡಿಯೊಂದನ್ನು ಕಳಿಸಿರುವ ಸದರಿ ವ್ಯಕ್ತಿಯ ಸೂಚನೆಯಂತೆ ಆ ವಿಡಿಯೊವನ್ನು ಲೈಕ್ ಮಾಡಿ, ಆತನ ಇನ್ನಿತರ ಸೂಚನೆಗಳನ್ನು ಆ ಮಹಿಳೆ ಅನುಸರಿಸಿದ್ದಾರೆ. ಆಗ ಆರೋಪಿಯು ಆಕೆಯ ಖಾತೆಗೆ ರೂ. 750 ಜಮಾ ಮಾಡಿದ್ದಾನೆ. ನಂತರ ಆ ಆರೋಪಿಯು ಟೆಲಿಗ್ರಾಮ್ ಖಾತೆಯೊಂದಕ್ಕೆ ಆಕೆಯನ್ನು ಸೇರ್ಪಡೆ ಮಾಡಿದ್ದಾನೆ.

ಇದಾದ ನಂತರ ಆರೋಪಿಯು ಮಹಿಳೆಯ ಹೆಸರಿನಲ್ಲಿ ವರ್ಚುಯಲ್ ಖಾತೆಯೊಂದನ್ನು ತೆರೆದಿದ್ದಾನೆ. ಆ ಖಾತೆಯಲ್ಲಿ ಅದಾಗಲೇ ರೂ‌. 3 ಲಕ್ಷ ಇರುವುದು ಕಂಡು ಬಂದಿದೆ. ನಂತರ ಆಕೆಗೆ ತಮ್ಮ ವ್ಯಾಪಾರಿ ಬಂಡವಾಳದಲ್ಲಿ ಹೂಡಿಕೆ ಮಾಡುವಂತೆ ಆಮಿಷ ಒಡ್ಡಿ, ವಿಭಿನ್ನ ಶುಲ್ಕವನ್ನು ಪಾವತಿಸುವಂತೆ ಕೇಳಲಾಗಿದೆ. ತದನಂತರ ಮುಂಬೈ ಪೊಲೀಸರ ಹೆಸರಲ್ಲಿ ಆಕೆಗೆ ಪತ್ರವೊಂದನ್ನು ರವಾನಿಸಿರುವ ಆರೋಪಿಗಳು, ಆಕೆಯ ಖಾತೆಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಅದನ್ನು ತೆರವು ಮಾಡಬೇಕಿದ್ದರೆ ಹಣ ಕಳಿಸಬೇಕು ಎಂದು ಬೆದರಿಕೆ ಒಡ್ಡಿದ್ದಾರೆ.

ಅಷ್ಟೊತ್ತಿಗೆ ತನ್ನ ಹೂಡಿಕೆ ಹಾಗೂ ಲಾಭವನ್ನು ಹಿಂಪಡೆಯಲು ಮುಂದಾಗುವ ಮುನ್ನ ಆ ಮಹಿಳೆಯು ರೂ. 11.4 ಲಕ್ಷ ಕಳೆದುಕೊಂಡಿದ್ದಳು. ಹೀಗಿದ್ದೂ ತನ್ನ ವ್ಯಾಲೆಟ್ ಅನ್ನು ಲಾಕ್ ಮಾಡಿರುವ ಆ ಮಹಿಳೆಯು, ನಂತರ ಆರೋಪಿಗಳ ವಿರುದ್ಧ ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿದ್ದಾಳೆ.

ಆರೋಪಿಗಳ ಬ್ಯಾಂಕ್ ಖಾತೆ ಮಾಹಿತಿಯನ್ನಾಧರಿಸಿ ತನಿಖೆ ಕೈಗೊಂಡಿರುವ ಪೊಲೀಸರು, ಈ ಸಂಬಂಧ ಐವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಚಿವೆ ಪ್ರತಿಮಾ ಭೌಮಿಕ್ ತ್ರಿಪುರಾದ ಮೊದಲ ಮಹಿಳಾ ಸಿಎಂ?

Similar News