×
Ad

‘ಆಘಾತಕಾರಿ,ಪಿತೃಪ್ರಭುತ್ವದ ಪಕ್ಷಪಾತ’: ಕೋರ್ಟ್ ತೀರ್ಪಿಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಟೀಕೆ

ಹಥ್ರಾಸ್ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣ

Update: 2023-03-05 18:37 IST

ಹೊಸದಿಲ್ಲಿ: ಹಥ್ರಾಸ್ ಪ್ರಕರಣದಲ್ಲಿ ನಾಲ್ವರನ್ನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪಗಳಿಂದ ಮುಕ್ತಗೊಳಿಸಿರುವ ನ್ಯಾಯಾಲಯದ ತೀರ್ಪನ್ನು ತರಾಟೆಗೆತ್ತಿಕೊಂಡಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ (AIDWA ), ತೀರ್ಪನ್ನು ಆಘಾತಕಾರಿ ಎಂದು ಬಣ್ಣಿಸಿದೆ. ತೀರ್ಪಿನ ವಿರುದ್ಧ ತಕ್ಷಣವೇ ಮೇಲ್ಮನವಿಯನ್ನು ಸಲ್ಲಿಸುವಂತೆ ಅದು ಸಿಬಿಐ ಅನ್ನು ಆಗ್ರಹಿಸಿದೆ.

2020, ಸೆ.14ರಂದು ಉತ್ತರ ಪ್ರದೇಶದ ಹಥ್ರಾಸ್ ಜಿಲ್ಲೆಯಲ್ಲಿ 19ರ ಹರೆಯದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮತ್ತು ಕ್ರೂರ ಹಲ್ಲೆ ನಡೆಸಿದ ಆರೋಪದಲ್ಲಿ ಪ್ರಕರಣ ದಾಖಲಾಗಿತ್ತು. ತೀವ್ರವಾಗಿ ಗಾಯಗೊಂಡಿದ್ದ ಯುವತಿ 15 ದಿನಗಳ ಬಳಿಕ ದಿಲ್ಲಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.

ಹಥ್ರಾಸ್ ನ ಎಸ್ಸಿ/ಎಸ್ಟಿ ನ್ಯಾಯಾಲಯವು ಗುರುವಾರ ಪ್ರಕರಣದ ತೀರ್ಪನ್ನು ಪ್ರಕಟಿಸಿದ್ದು,ವಿಶೇಷ ನ್ಯಾಯಾಧೀಶ ತ್ರಿಲೋಕಸಿಂಗ್ ಪಾಲ್ ಅವರು,ಮೇಲ್ಜಾತಿಗೆ ಸೇರಿದ ನಾಲ್ವರು ಠಾಕೂರ್ಗಳನ್ನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪಗಳಿಂದ ಮುಕ್ತಗೊಳಿಸಿದ್ದಾರೆ. ಪ್ರಮುಖ ಆರೋಪಿ ಸಂದೀಪ (20)ಗೆ ಮಾತ್ರ ಕೊಲೆಯಲ್ಲದ ನರಹತ್ಯೆ ಆರೋಪದಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದ್ದು,ರವಿ (35),ಲವಕುಶ (23) ಮತ್ತು ರಾಮು (26) ಬಿಡುಗಡೆಗೊಂಡಿದ್ದಾರೆ.

ಪಿತೃಪ್ರಭುತ್ವ ಮತ್ತು ಜಾತಿವಾದಿ ಪಕ್ಷಪಾತದ ದುರ್ನಾತವನ್ನು ಬೀರುತ್ತಿರುವ ತೀರ್ಪು ಮೇಲ್ಜಾತಿಯ ಎಲ್ಲ ನಾಲ್ವರನ್ನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಆರೋಪಗಳಿಂದ ಮುಕ್ತಗೊಳಿಸಿದೆ. ಬಲಿಪಶು ಯುವತಿಯ ಮರಣ ಹೇಳಿಕೆ ಮತ್ತು ಆಕೆ ಅನುಭವಿಸಿದ್ದ ಕ್ರೂರ ಹಿಂಸೆಯನ್ನು ತೀರ್ಪು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಐಡ್ವಾ ಹೇಳಿಕೆಯಲ್ಲಿ ತಿಳಿಸಿದೆ.
ಪ್ರಕರಣವು ವರದಿಯಾದಾಗಿನಿಂದಲೂ ಐಡ್ವಾ ಮತ್ತು ಇತರ ಸಂಘಟನೆಗಳು ಉತ್ತರ ಪ್ರದೇಶ ಪೊಲೀಸರು ಪಕ್ಷಪಾತದಿಂದ ವರ್ತಿಸುತ್ತಿದ್ದಾರೆ ಮತ್ತು ಆರಂಭದಿಂದಲೇ ತನಿಖೆಯನ್ನು ಕುಂಠಿತಗೊಳಿಸಿದ್ದಾರೆ ಎಂದು ಆರೋಪಿಸಿದ್ದವು.

ಪೊಲೀಸರು ಮೊದಲ ಎಫ್ಐಆರ್ನಲ್ಲಿ ಸಾಮೂಹಿಕ ಅತ್ಯಾಚಾರ ಆರೋಪವನ್ನು ಸೇರಿಸಿರಲಿಲ್ಲ,ಬಲಿಪಶು ಯುವತಿ ಪ್ರಜ್ಞೆಗೆ ಮರಳಿದ ನಂತರ ಮ್ಯಾಜಿಸ್ಟ್ರೇಟ್ರಿಗೆ ವಿಧ್ಯುಕ್ತ ಹೇಳಿಕೆಯನ್ನು ನೀಡಿದ ಬಳಿಕವಷ್ಟೇ ಸಾಮೂಹಿಕ ಅತ್ಯಾಚಾರ ಆರೋಪವನ್ನು ಸೇರಿಸಲಾಗಿತ್ತು ಮತ್ತು ಘಟನೆ ನಡೆದ 11 ದಿನಗಳ ಬಳಿಕ ವಿಧಿವಿಜ್ಞಾನ ತಜ್ಞರು ಯುವತಿಯ ಸ್ಯಾಂಪಲ್ಗಳನ್ನು ಸಂಗ್ರಹಿಸಿದ್ದರು,ಈ ವಿಳಂಬವು ಅತ್ಯಾಚಾರ ನಡೆದಿಲ್ಲ ಎಂಬ ಫಲಿತಾಂಶಕ್ಕೆ ಕಾರಣವಾಗಿತ್ತು ಮತ್ತು ವಿಧಿವಿಜ್ಞಾನ ತಜ್ಞರ ವರದಿಗೆ ಯಾವುದೇ ಬೆಲೆಯಿರಲಿಲ್ಲ. ತಾನು ನೋಡಿದಾಗ ತನ್ನ ಪುತ್ರಿಯ ಜನನಾಂಗದಿಂದ ರಕ್ತಸ್ರಾವವಾಗುತ್ತಿತ್ತು ಎಂದು ಯುವತಿಯ ತಾಯಿಯೂ ಹೇಳಿದ್ದರು ಎಂದು ಐಡ್ವಾ ಬೆಟ್ಟು ಮಾಡಿದೆ.

ಸೆ.22ರಂದು ಯುವತಿಯು ಅಲಿಗಡ ಮ್ಯಾಜಿಸ್ಟ್ರೇಟ್ ಎದುರು ನೀಡಿದ್ದ ಮರಣ ಹೇಳಿಕೆಯು ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ್ದಕ್ಕೆ ಸ್ಪಷ್ಟ ಪುರಾವೆಯಾಗಿತ್ತು. ಭಾರತದಲ್ಲಿ ಅತ್ಯಾಚಾರದ ಪ್ರಕರಣಗಳ ವಿಚಾರಣೆಯಲ್ಲಿ ಮರಣ ಹೇಳಿಕೆಯು ನಿರ್ಣಾಯಕ ಸಾಕ್ಷವಾಗಿದೆ ಎಂದು ಹೇಳಿರುವ ಐಡ್ವಾ,ಸರ್ವೋಚ್ಚ ನ್ಯಾಯಾಲಯವು ಹಲವಾರು ಪ್ರಕರಣಗಳಲ್ಲಿ ಮರಣ ಹೇಳಿಕೆಯ ಪ್ರಾಮುಖ್ಯವನ್ನು ಎತ್ತಿ ತೋರಿಸಿದೆ ಮತ್ತು ಆರೋಪಿಯನ್ನು ದೋಷನಿರ್ಣಯಕ್ಕೊಳಪಡಿಸಲು ಮರಣ ಹೇಳಿಕೆಯು ಏಕೈಕ ಆಧಾರವಾಗಬಲ್ಲದು ಎಂದು ಸ್ಪಷ್ಟಪಡಿಸಿದೆ ಎಂದು ಹೇಳಿಕೆಯಲ್ಲಿ ಬೆಟ್ಟು ಮಾಡಿದೆ.

ಘಟನೆಯ ಬಳಿಕ ಯುವತಿ ಪ್ರಜ್ಞಾವಸ್ಥೆಯಲ್ಲಿದ್ದರಿಂದ ಆರೋಪಿಗಳಾದ ಸಂದೀಪ ಮತ್ತು ಇತರರಿಗೆ ಆಕೆಯನ್ನು ಕೊಲೆ ಮಾಡುವ ಉದ್ದೇಶವಿರಲಿಲ್ಲ ಎಂಬ ನ್ಯಾಯಾಲಯದ ನಿರ್ಧಾರವೂ ತಪ್ಪಾಗಿದೆ. ನಿರ್ಭಯಾ ಪ್ರಕರಣದಲ್ಲಿ ಇಂತಹುದೇ ಸನ್ನಿವೇಶಗಳಲ್ಲಿ ನ್ಯಾಯಾಲಯವು ಕೊಲೆಯು ಸಾಬೀತಾಗಿದೆ ಎಂದು ಎತ್ತಿಹಿಡಿದಿತ್ತು. ಯಾವುದೇ ಸಂದರ್ಭದಲ್ಲಿ ಆರೋಪಿಗಳು ಬಲಿಪಶುವಿನ ಮೇಲೆ ತಮ್ಮ ಕ್ರೂರ ದಾಳಿಯ ಪರಿಣಾಮಗಳನ್ನು ತಿಳಿದಿದ್ದರು ಎಂದು ಭಾವಿಸಬೇಕಾಗುತ್ತದೆ ಎಂದು ಐಡ್ವಾ ಪ್ರತಿಪಾದಿಸಿದೆ.

ಈ ನಡುವೆ ಹತ ಯುವತಿಯ ಕುಟುಂಬವು ನ್ಯಾಯಕ್ಕಾಗಿ ತನ್ನ ಹೋರಾಟವನ್ನು ಮುಂದುವರಿಸುವುದಾಗಿ ತಿಳಿಸಿದೆ.

Similar News